ನ್ಯೂಸ್

ರಾಜ್ಯಾದ್ಯಂತ ಇಂದು ರಾತ್ರಿಯಿಂದಲೇ ಲಾಕ್​ಡೌನ್​, ಎಲ್ಲೆಡೆ ಪೊಲೀಸ್​ ಕಣ್ಗಾವಲು!

arunakunigal

ಬೆಂಗಳೂರು: ರಾಜ್ಯದಲ್ಲಿ ಕೋವಿಡ್​ ಸೋಂಕಿನ ಅಟ್ಟಹಾಸ ಹೆಚ್ಚಾಗುತ್ತಿದ್ದು, ಸಾವು-ನೋವಿನ ಪ್ರಮಾಣ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ ವೀಕ್ ಎಂಡ್ ಲಾಕ್​ಡೌನ್ ಅಸ್ತ್ರ ಬಳಸಿದ್ದು, ಇಂದು(ಜು.25) ರಾತ್ರಿ 9ರಿಂದ ಸೋಮವಾರ ಬೆಳಗ್ಗೆ 5ರವರೆಗೆ ರಾಜ್ಯ ವ್ಯಾಪಿ ಲಾಕ್​ಡೌನ್​ ಜಾರಿಯಲ್ಲಿರಲಿದೆ.

ಜು.14ರಿಂದ 22ರವರೆಗೆ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಲಾಕ್​ಡೌನ್​ ಮಾಡಲಾಗಿತ್ತು. ಇದೀಗ ಮತ್ತೆ 36 ಗಂಟೆಗಳ ಕಾಲ ಲಾಕ್​ಡೌನ್ ಜಾರಿ ಆಗಿದ್ದು, ನಿಷೇಧಾಜ್ಞೆ ನಡುವೆ ಜನರು ಬೇಕಾಬಿಟ್ಟಿಯಾಗಿ ರಸ್ತೆಗೆ ಇಳಿದರೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಲಿದ್ದಾರೆ. ವಾಹನಗಳು ಜಪ್ತಿ ಆಗಲಿದ್ದು, ದಂಡ ಬೀಳಲಿದೆ.

ಭಾನುವಾರದ ರಜೆ ಗುಂಗಿನಲ್ಲಿ ಹೊರಗೆ ಬರುವ ಬದಲು ಜನರು ಮನೆಯಲ್ಲೇ ಸುರಕ್ಷಿತವಾಗಿ ಇರಬೇಕು. ವೀಕೆಂಡ್ ಲಾಕ್​ಡೌನ್​ ವೇಳೆ ಅಗತ್ಯ ವಸ್ತುಗಳ ಪೂರೈಕೆಗಷ್ಟೇ ಅವಕಾಶವಿದೆ. ಆಸ್ಪತ್ರೆಗಳು, ಮೆಡಿಕಲ್ ಸ್ಟೋರ್ಸ್, ಹಾಲು, ದಿನಸಿ ಅಂಗಡಿ, ಹೋಟೆಲ್ (ಪಾರ್ಸಲ್ ಮಾತ್ರ), ತರಕಾರಿ, ಮಾಂಸದ ಅಂಗಡಿಗಳು ತೆರೆದಿರುತ್ತವೆ. ಕ್ಯಾಬ್​, ಕೆಎಸ್​ಆರ್​ಟಿಸಿ, ಬಿಎಂಟಿಸಿ, ಶಾಪಿಂಗ್​ ಮಾಲ್​, ಎಲ್ಲ ರೀತಿಯ ಅಂಗಡಿ, ಪ್ರವಾಸಿ ತಾಣ, ದೇವಸ್ಥಾನಗಳು ಬಂದ್​ ಆಗಲಿವೆ.

ಭಾನುವಾರ ಕಾಗಿರ್ಲ್​ ವಿಜಯ ದಿವಸ ಇರುವ ಕಾರಣ ಬೆಳಗ್ಗೆ 7.30ರಿಂದ ಮಧ್ಯಾಹ್ನ 12ರವರೆಗೆ ವಿಧಾನಸೌಧ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ವಾಪಸ್​ ಪಡೆದು ಬೆಂಗಳೂರು ನಗರ ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್​ ಆದೇಶಿಸಿದ್ದಾರೆ. ಈ ಅವಧಿ ಬಿಟ್ಟು ಉಳಿದ ಸಮಯದಲ್ಲಿ ನಿರ್ಬಂಧ ಯಥಾವತ್ತಾಗಿ ಜಾರಿಯಲ್ಲಿ ಇರಲಿದೆ.