ನ್ಯೂಸ್

ಬೆಳೆ ಹಾನಿಯ ಜಂಟಿ ಸಮೀಕ್ಷೆಗೆ ವಾರ ಗಡುವು; ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ತಾಕೀತು

ಬೆಂಗಳೂರು: ಅತಿವೃಷ್ಟಿಗೆ ತತ್ತರಿಸಿರುವ ರಾಜ್ಯದ ರೈತರ ನೆರವಿಗೆ ಧಾವಿಸಿರುವ ಸರ್ಕಾರ ನೆರೆ ಪೀಡಿತ ಜಿಲ್ಲೆಗಳಲ್ಲಿ ಬೆಳೆ ಹಾನಿ ಜಂಟಿ ಸಮೀಕ್ಷೆಯನ್ನು ವಾರದೊಳಗೆ ಪೂರ್ಣಗೊಳಿಸಿ, ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಕಟ್ಟಪ್ಪಣೆ ವಿಧಿಸಿದೆ. ಗೃಹ ಕಚೇರಿ ಕೃಷ್ಣಾದಲ್ಲಿ ಶನಿವಾರ ಅಧಿಕ ಮಳೆ ಹಾನಿ ಬಾಧಿತ ಜಿಲ್ಲೆಗಳ ಡಿಸಿಗಳು, ಅಧಿಕಾರಿಗಳ ಜತೆ ಶನಿವಾರ ವಿಡಿಯೋ ಸಂವಾದ ನಡೆಸಿದ ವೇಳೆ ಸಿಎಂ ಸಿದ್ದರಾಮಯ್ಯ ಈ ಸೂಚನೆ ನೀಡಿದರು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂಗಾರು ಹಂಗಾಮಿನಲ್ಲಿ ಅತಿವೃಷ್ಟಿಗೆ ಒಟ್ಟು 25 ಜನ ಬಲಿಯಾಗಿದ್ದು, ನಿಯಮಾವಳಿ ಪ್ರಕಾರ ಎಲ್ಲರ ಕುಟುಂಬಗಳಿಗೆ ಪರಿಹಾರದ ಮೊತ್ತ ವಿತರಿಸಲಾಗಿದೆ ಎಂದರು. ಪೂರ್ಣ ಹಾಗೂ ಭಾಗಶಃ ಬಿದ್ದ ಮನೆಗಳಿಗೆ 48 ತಾಸಿನೊಳಗೆ ಪರಿಹಾರ ವಿತರಿಸಲು ಡಿಸಿಗಳಿಗೆ ನಿರ್ದೇಶನ ನೀಡಲಾಗಿದೆ. ಹವಾಮಾನ ಇಲಾಖೆ ಪ್ರಕಾರ ನವೆಂಬರ್, ಡಿಸೆಂಬರ್​ನಲ್ಲೂ ಹೆಚ್ಚಿನ ಮಳೆಯಾಗುವ ಸಾಧ್ಯತೆಗಳಿವೆ ಎಂದರು.

ಹಿಂಗಾರು ಹಂಗಾಮಿನ ಅತಿವೃಷ್ಟಿಗೆ ಮಾತ್ರವಲ್ಲ, ಮುಂದಿನ ನವೆಂಬರ್, ಡಿಸೆಂಬರ್​ನಲ್ಲಿ ಸುರಿಯಬಹುದಾದ ಮಳೆಗೂ ವಿಸ್ತರಿಸಲಾಗಿದ್ದು, ಈ ಸಂಬಂಧ ಆದೇಶ ಹೊರಡಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಹಣದ ಕೊರತೆಯಿಲ್ಲ: ಪ್ರಕೃತಿ ವಿಕೋಪ ಪರಿಹಾರ ತುರ್ತಾಗಿ ಕೈಗೆತ್ತಿಕೊಳ್ಳಲು ಹಣದ ಕೊರತೆಯಿಲ್ಲ. ಜಿಲ್ಲಾಧಿಕಾರಿಗಳು, ತಹಸೀಲ್ದಾರರ ಖಾತೆಯಲ್ಲಿರುವ ಹಣವೂ ಸೇರಿ 666.96 ಕೋಟಿ ರೂ. ಅನುದಾನ ಲಭ್ಯವಿದೆ. ಯುದ್ಧೋಪಾದಿಯಲ್ಲಿ ಸಂತ್ರಸ್ತರು ಹಾಗೂ ತೊಂದರೆಗೆ ಸಿಲುಕಿದ ರೈತರಿಗೆ ಸ್ಪಂದಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿರುವೆ. ಮುಂಗಾರು ಹಂಗಾಮಿನಲ್ಲಿ 80 ಸಾವಿರ ಹೆಕ್ಟೇರ್ ಪ್ರದೇಶದ ಆಹಾರಧಾನ್ಯ, ತೋಟಗಾರಿಕೆ ಬೆಳೆಗಳು ಹಾನಿಗೀಡಾಗಿವೆ. ನಿಯಮಾನುಸಾರ ಸಂತ್ರಸ್ತ ರೈತರಿಗೆ ಪರಿಹಾರ ವಿತರಣೆಯಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಖಚಿತಪಡಿಸಿದರು.

ಅತಿವೃಷ್ಟಿ ಕಷ್ಟ-ನಷ್ಟ: ಅಕ್ಟೋಬರ್ 1 ರಿಂದ 25ರವರೆಗೆ ವಾಸ್ತವಿಕ ಮಳೆ ಪ್ರಮಾಣ- 181 ಮಿಲಿ ಮೀಟರ್, ವಾಡಿಕೆ ಮಳೆ ಪ್ರಮಾಣ- 114 ಮಿ.ಮೀ., ಶೇ.58ರಷ್ಟು ಹೆಚ್ಚುವರಿ ಮಳೆ · ಜೂನ್​ನಿಂದ ಸೆಪ್ಟೆಂಬರ್ 30ರವರೆಗೆ ವಾಡಿಕೆ ಮಳೆ- 852 ಮಿ.ಮೀ., ವಾಸ್ತವಿಕ ಮಳೆ- 978 ಮಿ.ಮೀ. ಶೇ.15 ಅಧಿಕವಾಗಿದೆ · ಹಿಂಗಾರು ಅವಧಿಯ ಅತಿವೃಷ್ಟಿಗೆ 25 ಜನರ ಸಾವು, ನಿಯಮದಂತೆ ಪರಿಹಾರ ಪಾವತಿ · 19 ದೊಡ್ಡ, 66 ಸಣ್ಣ ಜಾನುವಾರುಗಳು ಬಲಿ. ದೊಡ್ಡ ಜಾನುವಾರುಗಳಿಗೆ 6.84 ಲಕ್ಷ ರೂ., ಸಣ್ಣ ಜಾನುವಾರುಗಳಿಗೆ 2.80 ಲಕ್ಷ ರೂ ಸೇರಿ 9.60 ಲಕ್ಷ ರೂ. ಪರಿಹಾರ ಪಾವತಿ · 84 ಮನೆಗಳು ಸಂಪೂರ್ಣ, 2,077 ಮನೆಗಳು ಭಾಗಶಃ ಕುಸಿತ · ಸದ್ಯದ ಅಂದಾಜಿನಂತೆ 74,993 ಹೆಕ್ಟೇರ್ ಕೃಷಿ ಬೆಳೆಗಳು, 30,941 ಹೆಕ್ಟೇರ್ ತೋಟಗಾರಿಕೆ ಸೇರಿ 1,05,941 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ · 12,553 ಕಿ.ಮೀ. ಉದ್ದದ ಗ್ರಾಮೀಣ ರಸ್ತೆಗಳು, 1106 ಕಿರು ಸೇತುವೆಗಳು, ಮೋರಿಗಳಿಗೆ ಹಾನಿ

1.05 ಲಕ್ಷ ಹೆಕ್ಟೇರ್ ನಷ್ಟ: ಅಂದಾಜಿನ ಪ್ರಕಾರ 1.05 ಲಕ್ಷ ಹೆಕ್ಟೇರ್​ನಲ್ಲಿ ಬೆಳೆಗಳು ನಷ್ಟವಾಗಿರುವ ಮಾಹಿತಿ ಇದೆ.

ಸಿಎಂ ಸೂಚನೆಗಳು: ಡಿಸೆಂಬರ್​ವರೆಗೂ ವಾಡಿಕೆಗಿಂತ ಅಧಿಕ ಮಳೆ ಸಾಧ್ಯತೆ, ಮುನ್ನೆಚ್ಚರಿಕೆ ಅಗತ್ಯ · ಅತಿವೃಷ್ಟಿ, ಪ್ರವಾಹ ಬಾಧಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿಗಳ ಜತೆಗೆ ಭೇಟಿ ನೀಡಿ · ನೊಂದವರಿಗೆ ಸಾಂತ್ವನ, ತಕ್ಷಣ ಪರಿಹಾರ ನೀಡಿ, ಅನಾಹುತ ತಡೆಗೆ ಕ್ರಮವಹಿಸಿ · ಮುನ್ನೆಚ್ಚರಿಕೆ ಕ್ರಮಗಳನ್ನು ಪರಿಶೀಲಿಸಲು ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರ · ಬಿತ್ತನೆ ಬೀಜಕ್ಕೆ ಬೇಡಿಕೆ ಬಂದರೆ ಕೂಡಲೇ ಒದಗಿಸಲು ಹೆಚ್ಚುವರಿ ಬೀಜ ದಾಸ್ತಾನು · ಪರ್ಯಾಯ ಬೆಳೆ ಬೆಳೆಸಲು ಬಿತ್ತನೆ ಬೀಜ, ರಸಗೊಬ್ಬರ, ಕ್ರಿಮಿನಾಶಕ ಸಂಗ್ರಹಿಸಿ · ಹಾನಿ ರಸ್ತೆ, ಕಿರು ಸೇತುವೆ, ಮೋರಿಗಳ ದುರಸ್ತಿಗೆ ಸಮಗ್ರ ವರದಿ ಸಲ್ಲಿಸಲಾಗಿದೆ · ಉದ್ಯೋಗ ಖಾತ್ರಿಯಡಿ 63,647 ಕೆರೆ, ಕಲ್ಯಾಣಿಗಳ ಅಭಿವೃದ್ಧಿ ಕ್ರಮ ಪರಿಶೀಲಿಸಿ · ಕುಡಿವ ನೀರು ಕಾದಿಟ್ಟುಕೊಂಡು ಬಳಿಕ ಕೃಷಿ, ವಿದ್ಯುತ್ ಉತ್ಪಾದನೆಗೆ ಆದ್ಯತೆ · ಬೆಂಗಳೂರು ಕೆರೆಗಳು ಶೇ.30ರಷ್ಟು ಭರ್ತಿಯಾಗಿವೆ, ಈ ಬಗ್ಗೆ ಗಮನ ನೀಡಿ

ಎಷ್ಟೆಷ್ಟು ಪರಿಹಾರ?: ಪೂರ್ಣ ಬಿದ್ದ ಮನೆಗಳಿಗೆ 1.20 ಲಕ್ಷ ರೂ. ಪರಿಹಾರದ ಜತೆಗೆ ಹೊಸದಾಗಿ ಮನೆ ಕಟ್ಟಿಸಿಕೊಡ ಲಾಗುವುದು. ಭಾಗಶಃ ಬಿದ್ದ ಮನೆಗಳಿಗೆ 50 ಸಾವಿರ ರೂ. ಪರಿಹಾರ ನೀಡಲು ಸೂಚಿಸಿರುವುದಾಗಿ ಸಿಎಂ ಹೇಳಿದರು.

ರಾಜ್ಯದ ಪರಿಸ್ಥಿತಿ ಏನಿದೆ?: ಕರ್ನಾಟಕದ ಪ್ರಮುಖ ಜಲಾಶಯಗಳ ಒಟ್ಟು ಸಂಗ್ರಹ ಸಾಮರ್ಥ್ಯ 895.62 ಟಿಎಂಸಿ ?? ಸದ್ಯ ರಾಜ್ಯದ ಜಲಾಶಯಗಳಲ್ಲಿ 871.26 ಟಿಎಂಸಿಯಷ್ಟು ನೀರು ಸಂಗ್ರಹವಿದೆ ?? ಕಳೆದ ವರ್ಷ ಇದೇ ಅವಧಿಯಲ್ಲಿ 505.81 ಟಿಎಂಸಿ ನೀರು ಡ್ಯಾಂಗಳಲ್ಲಿ ಸಂಗ್ರಹವಾಗಿತ್ತು.