| ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು : ಜಾಗತಿಕವಾಗಿ ಸೈಬರ್, ಆರ್ಥಿಕ, ಡ್ರಗ್ಸ್ ಅಪರಾಧಗಳು ದಿನೇ ದಿನೆ ಏರುತ್ತಿವೆ. ರಾಜ್ಯದಲ್ಲಿ ಸಹ ಹೆಚ್ಚಾಗುತ್ತಿದ್ದು, ಇವುಗಳನ್ನು ತಡೆಗಟ್ಟಲು ರಾಜ್ಯ ವ್ಯಾಪಿ 54 ಸೈಬರ್, ಆರ್ಥಿಕ, ಡ್ರಗ್ಸ್ (ಸಿಇಎನ್) ಠಾಣೆಗಳನ್ನು ತೆರೆಯಲಾಗಿದೆ. ಆದರೆ, ಕೇವಲ ಸೈಬರ್ ಕ್ರೈಂಗೆ ಮಾತ್ರ ಸೀಮಿತವಾಗಿವೆ. ಸೈಬರ್ ಕ್ರೈಂನಷ್ಟು ಹೆಚ್ಚು ಮಾರಕವಾದ ಮಾದಕ ದ್ರವ್ಯ ಮತ್ತು ಆರ್ಥಿಕ ಅಪರಾಧಗಳ ಕುರಿತು ತನಿಖೆ ಆಗಲಿ ಅಥವಾ ದೂರು ಪಡೆಯುವ ಗೋಜಿಗೆ ಹೋಗಿಲ್ಲ. ಕೇವಲ ಹೆಸರಿಗೆ ಮಾತ್ರ ಸಿಇಎನ್ ಠಾಣೆ ಎಂದು ಹೇಳಿಕೊಳ್ಳಲಾಗುತ್ತಿದೆ. ಇಲ್ಲಿಯವರೆಗೂ ಒಂದೇ ಒಂದು ಡ್ರಗ್ಸ್ ಕೇಸ್ ದಾಖಲಾಗಿಲ್ಲ.
ರಾಜ್ಯದಲ್ಲಿ ದಾಖಲಾದ ಎನ್ಡಿಪಿಎಸ್ ಪ್ರಕರಣ ===================== ವರ್ಷ ಎನ್ಡಿಪಿಎಸ್ ಕೇಸ್ ಬಂಧಿತರು 2017 1126 1604 2018 1032 1470 2019 1661 2263 2020 2589 2865 (ಸೆ.15)
ಸೈಬರ್ ಕ್ರೈಂಗಳು ಸದ್ದಿಲ್ಲದೆ ಆನ್ಲೈನ್ನಲ್ಲಿ ನಡೆಯುತ್ತಿವೆ. ಹಣ ಕಳೆದುಕೊಂಡವರಿಗೆ ಬಿಟ್ಟರೇ ಬೇರೆ ಯಾರಿಗೂ ತಿಳಿಯುತ್ತಿಲ್ಲ.ಸಂತ್ರಸ್ತರು ಠಾಣೆಗೆ ಬಂದು ದೂರು ನೀಡುವುದನ್ನು ಸ್ವೀಕರಿಸಿ ಎಫ್ಐಆರ್ ನೋಂದಣಿ ಮಾಡುತ್ತಿದ್ದಾರೆ. ಸಮಾಜದಲ್ಲಿ ಸಂಘರ್ಷ, ಯುವಪೀಳಿಗೆ ಭವಿಷ್ಯಕ್ಕೆ ಮಾರಕವಾದ ಮಾದಕ ದ್ರವ್ಯ ಪ್ರಕರಣಗಳ ತಡೆ ಅಥವಾ ತನಿಖೆ ನಡೆಸುವ ಕೆಲಸ ನಡೆಯುತ್ತಿಲ್ಲ. ಇದಕ್ಕೆ ಗೃಹ ಇಲಾಖೆ ಮತ್ತು ಹಿರಿಯ ಅಧಿಕಾರಿಗಳ ನಿರ್ಲಕ್ಷ್ಯವೇ ಮೂಲ ಕಾರಣವೆಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಪ್ರಧಾನಿ ಮೋದಿಯವರ ‘ಆತ್ಮನಿರ್ಭರ ಭಾರತ’ದ ಕರೆಗೆ ಆಧ್ಯಾತ್ಮಿಕ ನಾಯಕರ ಬೆಂಬಲ
ಸಿಇಎನ್ ಠಾಣೆಗೆ ಬಲತುಂಬಿ ಬೆಂಗಳೂರು ನಗರ ಕಮಿಷನರೇಟ್ನಲ್ಲಿನ 8 ಸಿಇಎನ್ ಠಾಣೆಗಳಲ್ಲಿ ಆಗಸ್ಟ್ ಅಂತ್ಯಕ್ಕೆ 6482 ಸೈಬರ್ ಕ್ರೈಂ ದಾಖಲಾಗಿವೆ. ಇನ್ನೂ ಉಳಿದ ಸಿಇಎನ್ ಠಾಣೆಗಳಲ್ಲಿ 700 ಪ್ರಕರಣಗಳು ನೋಂದಣಿ ಆಗಿವೆ. ಒಟ್ಟಾರೆ 54 ಸಿಇಎನ್ ಠಾಣೆಗಳಲ್ಲಿ ಒಂದೇ ಒಂದು ಡ್ರಗ್ಸ್ ಕೇಸ್ ದಾಖಲಾಗಿಲ್ಲ. ಉಳಿದ ಸಿವಿಲ್ ಠಾಣೆಗಳಲ್ಲಿ ಸೆ.15ವರೆಗೆ 2,589 ಎನ್ಡಿಪಿಎಸ್ ಕೇಸ್ ದಾಖಲಾಗಿದ್ದು, 2,865 ಆರೋಪಿಗಳನ್ನು ಬಂಧಿಸಿದ್ದಾರೆ. ಆಗಸ್ಟ್ ಒಂದೇ ತಿಂಗಳಲ್ಲಿ 650 ಪ್ರಕರಣಗಳು ದಾಖಲಾಗಿವೆ. ಅದೇ ರೀತಿ ಆಗಸ್ಟ್ನಲ್ಲಿ ಆರ್ಥಿಕ ಅಪರಾಧಗಳು ದಿನಕ್ಕೆ ಸರಾಸರಿ 10ರಂತೆ 323 ಎಫ್ಐಆರ್ ದಾಖಲಾಗಿವೆ. ವರ್ಷಕ್ಕೆ 4 ಸಾವಿರ ಬೆಳಕಿಗೆ ಬರುತ್ತಿವೆ. ಸಿಇಎನ್ ಠಾಣೆಯಲ್ಲಿ ಡ್ರಗ್ಸ್ ಮತ್ತು ಆರ್ಥಿಕ ಅಪರಾಧಗಳ ನೋಂದಣಿ ಶುರುವಾದರೆ ಸೈಬರ್ ಕ್ರೈಂಗಳನ್ನೇ ಮೀರಿಸಲಿವೆ. ಸದಾಕಾಲ ಸೈಬರ್, ಆರ್ಥಿಕ ಮತ್ತು ಡ್ರಗ್ಸ್ ಪ್ರಕರಣಗಳ ತನಿಖೆ ನಡೆಸುವಂತೆ ಸಿಇಎನ್ ಠಾಣೆಗೆ ಬಲತುಂಬಬೇಕೆಂಬುದು ಪೊಲೀಸರ ಮತ್ತು ಸಾರ್ವಜನಿಕರ ಒತ್ತಾಯವಾಗಿದೆ.
ಜಿಲ್ಲೆಗಳಲ್ಲಿ ಎಸ್ಪಿ ಕಚೇರಿಯಲ್ಲಿ ಮತ್ತು ಕಮಿಷನರೇಟ್ನಲ್ಲಿ ಡಿಸಿಪಿ ಕಚೇರಿಯಲ್ಲಿ ಸಿಇಎನ್ ಠಾಣೆ ತೆರೆದು ಇನ್ಸ್ಪೆಕ್ಟರ್ ಅಥವಾ ಸಬ್ಇನ್ಸ್ಪೆಕ್ಟರ್ನ್ನು ನೇಮಕ ಮಾಡಿ ಮೂರ್ನಾಲ್ಕು ಸಿಬ್ಬಂದಿಯನ್ನು ನೇಮಿಸಲಾಗಿದೆ. ಕೆಲವೊಂದು ಕಡೆ ಚಿಕ್ಕ ಕೊಠಡಿಯಲ್ಲಿ ಠಾಣೆ ತೆರೆದಿದ್ದು, ಕೂರಲು ಖರ್ಚು ಸಹ ಇಲ್ಲ. ಇವುಗಳ ಕಾರ್ಯವ್ಯಾಪ್ತಿ 18 ರಿಂದ 20 ಸಿವಿಲ್ ಠಾಣೆಗಳು ಒಳಗೊಂಡಿವೆ. ಪ್ರತಿದಿನ ಸರಾಸರಿ 6 ರಿಂದ 8 ದೂರುಗಳು ಬರುತ್ತಿರುವೆ. ದೂರನ್ನು ಸ್ವೀಕರಿಸಿ ಎಫ್ಐಆರ್ ನೋಂದಣಿ ಮಾಡಿ ದೂರುದಾರರಿಗೆ ಪ್ರಿಂಟ್ ನೀಡುವುದರಲ್ಲಿ ಸಿಬ್ಬಂದಿ ಸಮಯ ಸಾಕಾಗುತ್ತಿಲ್ಲ. ಕಂಪ್ಯೂಟರ್, ಪ್ರಿಂಟರ್ ಸೇರಿದಂತೆ ಮೂಲಸೌಕರ್ಯ ಇಲ್ಲದಂತಾಗಿದೆ. ಡ್ರಗ್ಸ್ ಕುರಿತು ದೂರು ಸ್ವೀಕರಿಸುತ್ತಿಲ್ಲ.
ಮಾದಕ ದ್ರವ್ಯ ದಂಧೆ ತಡೆಗಟ್ಟಲು ಮಫ್ತಿಯಲ್ಲಿ ಪೊಲೀಸರು ಸದಾಕಾಲ ಠಾಣೆಯಿಂದ ಹೊರಗಡೆ ಕಾರ್ಯಾಚರಣೆ ನಡೆಸಬೇಕು. ಪೆಡ್ಲರ್ಗಳ ಬಂಧನದ ವೇಳೆ ಹೆಚ್ಚಿನ ಸಿಬ್ಬಂದಿ ಅಗತ್ಯವಿರುತ್ತದೆ. ಇಲ್ಲಿನ ಅಧಿಕಾರಿ, ಸಿಬ್ಬಂದಿಗೆ ಠಾಣೆ ಕೆಲಸವೇ ಹೊರೆಯಾಗಿದೆ. ಡ್ರಗ್ಸ್ ಪರೀಕ್ಷೆ ನಡೆಸಲು ವಿಶೇಷ ಕಿಟ್ ಒದಗಿಸಿಲ್ಲ. ಪ್ರತ್ಯೇಕ ಠಾಣೆ ತೆರೆಯಲು ಸಾಕಷ್ಟು ಕಡೆಗಳಲ್ಲಿ ಇನ್ನೂ ಸಾಧ್ಯವಾಗಿಲ್ಲ. ವಾಹನಗಳ ಸೌಕರ್ಯ ಕಲ್ಪಿಸಿಲ್ಲ. ಸಿಇಎನ್ ಠಾಣೆ ಧ್ಯೇಯೋದ್ದೇಶವನ್ನು ಕಾರ್ಯಗತ ಮಾಡುವಲ್ಲಿ ಗೃಹ ಇಲಾಖೆ ಮತ್ತು ಹಿರಿಯ ಅಧಿಕಾರಿಗಳು ಮರೆತಿದ್ದಾರೆ.
ಸೈಬರ್ ಮತ್ತು ಡ್ರಗ್ಸ್ ದಂಧೆ ಒಂದೇ ವೇಗದಲ್ಲಿ ಜರುತ್ತಿದ್ದರೂ ಹೆಚ್ಚಾಗಿ ಸೈಬರ್ ಕ್ರೖೆಂಗಳ ನೋಂದಣಿ ಆಗುತ್ತಿವೆ. ಡ್ರಗ್ಸ್ ಕೇಸ್ಗಳ ದಾಖಲು ಮತ್ತು ಆರೋಪಿಗಳ ಬಂಧನ ಮಂದಗತಿಯಲ್ಲಿ ನಡೆಯುತ್ತಿದೆ. ಎಫ್ಐಆರ್ಗಳು ಹೆಚ್ಚಾದಂತೆ ಅಪರಾಧಗಳು ಸಹ ನಿಯಂತ್ರಣಕ್ಕೆ ಬರಲಿವೆ ಎಂಬುದು ಹಿರಿಯ ಪೊಲೀಸ್ ಅಧಿಕಾರಿಗಳ ಅಭಿಪ್ರಾಯವಾಗಿದೆ. ಸಿಇಎನ್ ಠಾಣೆಗೆ ಮೂಲಸೌಕರ್ಯ, ಸಿಬ್ಬಂದಿ ಒದಗಿಸಿ ಅದರ ಕಾರ್ಯ ಉದ್ದೇಶವನ್ನು ಅನುಷ್ಠಾನ ಮಾಡಬೇಕೆಂದು ಒತ್ತಾಯಕೇಳಿಬಂದಿದೆ.