ನ್ಯೂಸ್

ಭಾರಿ ಮಳೆ, ರೆಡ್​ ಅಲರ್ಟ್​ ಘೋಷಣೆ: ಎಲ್ಲೆಲ್ಲಿ, ಯಾವಾಗ, ಯಾವ ಅಲರ್ಟ್​?

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ಬಿರುಸುಗೊಂಡಿದ್ದು, ಹವಾಮಾನ ಇಲಾಖೆ ರಾಜ್ಯದ ಹಲವೆಡೆ ರೆಡ್ ಅಲರ್ಟ್ ಘೋಷಣೆ ಮಾಡಿದೆ.

ಸೋಮವಾರವೂ ಹಲವು ಭಾಗಗಳಲ್ಲಿ ಧಾರಾಕಾರವಾಗಿ ಸುರಿದಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಮೇ 18ರಂದು ಭಾರಿ ಮಳೆ ಬೀಳಲಿರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್​ ಘೋಷಿಸಿದೆ. ಅಲ್ಲದೆ, ಈ ಜಿಲ್ಲೆಗಳಲ್ಲಿ ಮೇ 17, 19ರಂದು ಆರೆಂಜ್ ಅಲರ್ಟ್ ನೀಡಲಾಗಿದೆ. ಈ ಅವಧಿಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹಾಗೂ ಸಮುದ್ರದ ಅಕ್ಕಪಕ್ಕ ನಿವಾಸಿಗಳಿಗೆ ಎಚ್ಚರಿಕೆ ಇರುವಂತೆ ಇಲಾಖೆ ಸೂಚಿಸಿದೆ.

ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಹಾಸನ, ಬೆಂಗಳೂರು, ಬೆಂ.ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ದಾವಣಗೆರೆ ಮತ್ತು ಬಳ್ಳಾರಿಯಲ್ಲಿ ಗುಡುಗು ಮಿಂಚು ಸಹಿತ ಧಾರಾಕಾರ ಮಳೆ ಬೀಳಲಿರುವ ಹಿನ್ನೆಲೆಯಲ್ಲಿ ಮುಂದಿನ 48 ಗಂಟೆ ಆರೆಂಜ್ ಅಲರ್ಟ್ ನೀಡಲಾಗಿದೆ. ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ಬಾಗಲಕೋಟೆ, ರಾಯಚೂರು, ಕೊಪ್ಪಳ, ಗದಗ, ಧಾರವಾಡ, ಹಾವೇರಿ ಮತ್ತು ಬೆಳಗಾವಿಯಲ್ಲಿ ಮೇ 17ರಿಂದ ಎರಡು ದಿನ ಯೆಲ್ಲೋ ಅಲರ್ಟ್ ಕೋಡಲಾಗಿದೆ.

ದಕ್ಷಿಣ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಹಾಗೂ ಬಂಗಾಳಕೊಲ್ಲಿಯಲ್ಲಿ ಈಗಾಗಲೆ ಮುಂಗಾರು ಮಾರುತಗಳ ಸೃಷ್ಟಿಗೆ ಪೂರಕ ವಾತಾವರಣ ಉಂಟಾಗಿದ್ದು, ಕೇರಳದಲ್ಲಿ ಭಾರಿ ವರ್ಷಧಾರೆಯಾಗುತ್ತಿದೆ. ಮೇ 27ರಂದು ಕೇರಳಕ್ಕೆ ಮಾರುತಗಳು ಪ್ರವೇಶಿಸಲಿದ್ದು, ವಾರಾಂತ್ಯದಲ್ಲಿ ರಾಜ್ಯದ ಕರಾವಳಿ ಭಾಗಕ್ಕೆ ಆಗಮಿಸುವ ನಿರೀಕ್ಷೆ ಹೆಚ್ಚಿದೆ.

  •  ಯೆಲ್ಲೋ ಅಲರ್ಟ್: 64.5 ಮಿಮೀನಿಂದ 115.5 ಮಿಮೀವರೆಗೆ
  •  ಆರೆಂಜ್ ಅಲರ್ಟ್: 115.6 ಮಿಮೀನಿಂದ 204.5 ಮಿಮೀವರೆಗೆ
  •  ರೆಡ್ ಅಲರ್ಟ್: 204.4 ಮಿಮೀ