ನ್ಯೂಸ್

ಮುಸ್ಲಿಂ ಯೂತ್​ ಲೀಗ್​ನಿಂದ ಹಿಂದೂ ವಿರೋಧಿ ಘೋಷಣೆ, ವಿವಾದ ಸೃಷ್ಟಿಸಿದ ಬೆದರಿಕೆ!

ಕೇರಳ: ಹಿಂದೂಗಳನ್ನು ದೇವಸ್ಥಾನದೊಳಗೆ ನೇಣಿಗೇರಿಸುತ್ತೇವೆ, ಜೀವಂತ ಸುಟ್ಟು ಹಾಕುತ್ತೇವೆ ಎಂಬುದಾಗಿ ಮುಸ್ಲಿಂ ಯೂತ್​ ಲೀಗ್​ ಘೋಷಣೆ ಮಾಡಿರುವುದು ವಿವಾದಕ್ಕೀಡಾಗಿದ್ದು, ಹಿಂದೂಗಳಿಂದ ಭಾರಿ ಆಕ್ರೋಶಕ್ಕೂ ಕಾರಣವಾಗಿದೆ.

ಏಕರೂಪ ನಾಗರಿಕ ಸಂಹಿತೆಯನ್ನು ವಿರೋಧಿಸಿ ಮುಸ್ಲಿಂ ಯೂತ್ ಲೀಗ್​ ಕೇರಳದ ಕಾಸರಗೋಡು ಜಿಲ್ಲೆಯ ಕಾಂಞಗಾಡ್​ನಲ್ಲಿ ನಡೆಸಿದ್ದ ರ‌್ಯಾಲಿಯಲ್ಲಿ ಈ ಹೇಳಿಕೆ ನೀಡಿದ್ದಾರೆ. ಈ ರ‌್ಯಾಲಿಯಲ್ಲಿ ಕೆಲವರು ಹಿಂದೂಗಳನ್ನು ಉದ್ದೇಶಿಸಿ, ನಾವು ನಿಮ್ಮನ್ನು ದೇವಸ್ಥಾನದೊಳಗೇ ನೇಣಿಗೇರಿಸುತ್ತೇವೆ, ಜೀವಂತ ಸುಟ್ಟು ಹಾಕುತ್ತೇವೆ ಎಂದು ಘೋಷಣೆ ಕೂಗಿದ್ದಾರೆ.

ಈ ಹೇಳಿಕೆ ವಿರುದ್ಧ ಇದೀಗ ಬಿಜೆಪಿ ಮಾತ್ರವಲ್ಲದೆ ಹಿಂದೂಗಳಿಂದಲೂ ವಿರೋಧ ಕೇಳಿಬಂದಿದೆ. ಈ ಕುರಿತು ಬಿಜೆಪಿ ಐಟಿ ಸೆಲ್​ನ ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದು, ಕೇರಳದಲ್ಲಿ ಹಿಂದೂಗಳು ಹಾಗೂ ಕ್ರೈಸ್ತರಿಗೆ ಸುರಕ್ಷೆ ಇದೆಯೇ? ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರದ ಬೆಂಬಲವಿಲ್ಲದೆ ಇಂಥ ಹೇಳಿಕೆಗಳು ಬರಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಕೇರಳ ಬಿಜೆಪಿ ಅಧಿಕೃತ ಟ್ವಿಟರ್​​​ ಹ್ಯಾಂಡಲ್​ನಿಂದ ಈ ಕುರಿತು ರಾಹುಲ್​ ಗಾಂಧಿಯನ್ನು ಗುರಿಯಾಗಿಸಿ ಟ್ವೀಟ್ ಮಾಡಲಾಗಿದೆ.