ನ್ಯೂಸ್

ಕುಮಾರಸ್ವಾಮಿಯನ್ನು 5 ವರ್ಷಕ್ಕೆ CM ಮಾಡಿ ಅಧಿಕಾರ ಕೊಟ್ಟೆವು; ಆದರೂ ಕಿಂಚಿತ್ತೂ ಉಪಕಾರ ಸ್ಮರಣೆಯಿಲ್ಲ: DK ಶಿವಕುಮಾರ್ ಲೇವಡಿ

“ಕಳೆದ ಚುನಾವಣೆ ವೇಳೆ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ನಮ್ಮ ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿ ಐದು ವರ್ಷ ಅಧಿಕಾರ ನೀಡಿದೆವು. ಆದರೆ ಕುಮಾರಸ್ವಾಮಿಗೆ ಕಿಂಚಿತ್ತೂ ಉಪಕಾರ ಸ್ಮರಣೆ ಇಲ್ಲ. ಅವರಿಗೆ ಸರ್ಕಾರ ಉಳಿಸಿಕೊಳ್ಳಲಾಗದೇ, ನಮ್ಮ ಮೇಲೆ ಗದಾಪ್ರಹಾರ ಮಾಡುತ್ತಿದ್ದಾರೆ. ನಾವು ನೋಡುವಷ್ಟು ನೋಡಿದೆವು. ಮೈತ್ರಿ ಸರ್ಕಾರವನ್ನು ಬೀಳಿಸಿದವರ ಜತೆ ಕುಮಾರಸ್ವಾಮಿ ಈಗ ಆಲಿಂಗನ ಮಾಡಿಕೊಂಡಿದ್ದಾರೆ” ಎಂದು ಡಿಸಿಎಂ DK ಶಿವಕುಮಾರ್​ ಲೇವಡಿ ಮಾಡಿದರು.

ಹಾಸನ ಜಿಲ್ಲೆಯ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಾಸನದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಒಂದಾಗಲು ಸಾಧ್ಯವೇ? ಮೈತ್ರಿ ಸರ್ಕಾರವನ್ನು ಕೆಡವಲು ಕಾಂಗ್ರೆಸ್ ಪಕ್ಷವನ್ನು ಬಿಟ್ಟ ಎಲ್ಲಾ ಶಾಸಕರಿಗೂ ನಾನು ಸದನದಲ್ಲಿ ಒಂದು ಮಾತು ಹೇಳಿದ್ದೆ. ಬಿಜೆಪಿಯಲ್ಲಿ ನೀವೆಲ್ಲರೂ ರಾಜಕೀಯ ಸಮಾಧಿಯಾಗುತ್ತೀರಿ ಎಂದು ಹೇಳಿದ್ದೆ. ಈಗ ಬಿಜೆಪಿ ಸಂಸದ ಸುಧಾಕರ್ ಅವರು ಬಿಜೆಪಿಯಲ್ಲಿ ನನ್ನನ್ನು ರಾಜಕೀಯ ಸಮಾಧಿ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಆದರೆ, ಈಗ ಸೋಮಶೇಖರ್, ಹೆಬ್ಬಾರ್ ಅವರ ಕಥೆ ಏನಾಯ್ತು? ಸಿ.ಪಿ ಯೋಗೇಶ್ವರ್ ಕತೆ ಏನಾಯ್ತು? ಈಗ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಶಾಸಕರಾಗಿದ್ದಾರೆ. ಎಂಟಿಬಿ ನಾಗರಾಜ್, ಬಿ.ಸಿ ಪಾಟೀಲ್ ಏನಾದರು? ರಾಯಚೂರು, ಮಸ್ಕಿ ಕ್ಷೇತ್ರದಲ್ಲಿ ಏನಾಯ್ತು? ಶ್ರೀಮಂತ ಪಾಟೀಲ್, ಮಹೇಶ್ ಕುಮಟಳ್ಳಿ, ರಾಜರಾಜೇಶ್ವರಿ ನಗರ ಶಾಸಕನ ಪರಿಸ್ಥಿತಿ ಏನಾಗಿದೆ? ಆತ ಮಾಡಬಾರದು ಮಾಡಿ ಈಗ ದಿನಬೆಳಗಾದರೆ ನನ್ನನ್ನು ಸಾಯಿಸಿಬಿಡುತ್ತಾರೆ ಎನ್ನುತ್ತಿದ್ದಾನಂತೆ ಎಂದರು.

ಇವರಲ್ಲಿ ಕೆಲವರು ಪಕ್ಷದಿಂದ ಹೋಗಿದ್ದೇ ಒಳ್ಳೆಯದಾಯ್ತು. ಪಕ್ಷ ಬಿಟ್ಟು ಹೋದವರಿಗೆ ಈಗ ಕಾಂಗ್ರೆಸ್ ಪಕ್ಷವೇ ಸರಿ ಎಂದು ಅರಿವಾಗಿದೆ. ನಾನು ಈಗಲೂ ದಳದ ಕಾರ್ಯಕರ್ತರಿಗೆ ಹೇಳುತ್ತಿದ್ದೇನೆ. ನೀವು ನಿಮ್ಮ ನಾಯಕರನ್ನು ನಂಬಿಕೊಂಡು ಕೂತರೆ ರಾಜಕೀಯ ಭವಿಷ್ಯವಿಲ್ಲ. ಅದು ಪಕ್ಷ ಅಲ್ಲ, ಕೇವಲ ಕುಟುಂಬ. ನನ್ನ ತಮ್ಮನನ್ನು ಸೋಲಿಸಲು ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಅಳಿಯನನ್ನು ಬಿಜೆಪಿಯಿಂದ ನಿಲ್ಲಿಸಿದರು. ನನಗೆ ತಂತ್ರ ಮಾಡಲು ಗೊತ್ತಿಲ್ಲವೇ? ಅದಕ್ಕೆ ಚನ್ನಪಟ್ಟಣದಲ್ಲಿ ಅವರ ಮೊಮ್ಮಗನನ್ನು ಸೋಲಿಸಿದೆವು. ಅವರಿಂದ ಕಲಿತ ಪಾಠವೇ ಬೇಕಾದಷ್ಟಿದೆ ಎಂದರು.