ನ್ಯೂಸ್

ಸಿಎಂ ನಿವಾಸದಲ್ಲಿ ಗೂಂಡಾಗಳಿಗೇನು ಕೆಲಸ? ಕೇಜ್ರಿವಾಲ್ ಆಪ್ತನಿಗೆ ಜಾಮೀನು ನಿರಾಕರಿಸಿದ ಸುಪ್ರೀಂಕೋರ್ಟ್

ನವದೆಹಲಿ: ಆಮ್​ ಆದ್ಮಿ ಪಕ್ಷ (ಎಎಪಿ)ದ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ಮೇಲೆ ದೆಹಲಿ ಮುಖ್ಯಮಂತ್ರಿ ನಿವಾಸದಲ್ಲಿ ಹಲ್ಲೆ ಮಾಡಿದ ಪ್ರಕರಣದಲ್ಲಿ ಬಂಧನವಾಗಿರುವ ಸಿಎಂ ಅರವಿಂದ್ ಕೇಜ್ರಿವಾಲ್ ಆಪ್ತ ಬಿಭವ್​ ಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು (ಆಗಸ್ಟ್ 01) ತಿರಸ್ಕರಿಸಿದೆ.

ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ದೀಪಂಕರ್ ದತ್ತ ಮತ್ತು ಉಜ್ಜಲ್ ಭುಯಾನ್ ಒಳಗೊಂಡ ತ್ರಿಸದಸ್ಯ ಪೀಠ, ಬಿಭವ್ ಕುಮಾರ್ ಕೃತ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಮುಖ್ಯಮಂತ್ರಿ ನಿವಾಸವೇನು ಖಾಸಗಿ ಬಂಗಲೆಯೇ ಎಂದು ಪ್ರಶ್ನಿಸಿರುವ ನ್ಯಾಯಾಲಯ ಅಲ್ಲಿ ಗೂಂಡಾಗಳಿಗೇನು ಕೆಲಸ ಎಂದು ಕಿಡಿಕಾರಿದೆ.

ಬಿಭವ್ ಕುಮಾರ್​ಗೆ ಅಧಿಕಾರದ ಮದ ತಲೆಗೇರಿದೆಯೇ? ಅವರು ಗೂಂಡಾಗಳ ರೀತಿ ವರ್ತಿಸಿದ್ದಾರೆ. ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ನಡೆಸುವಾಗ ಅದನ್ನು ಪ್ರಶ್ನಿಸುವವರು ಮುಖ್ಯಮಂತ್ರಿ ನಿವಾಸದಲ್ಲಿ ಯಾರೂ ಇರಲಿಲ್ಲವೇ ಎಂದು ನ್ಯಾಯಾಲಯ ಕೇಳಿದೆ.

ನಾವು ಸಾಮಾನ್ಯವಾಗಿ ಕೊಲೆ ಪ್ರಕರಣಗಳಲ್ಲೂ ಜಾಮೀನು ನೀಡುತ್ತೇವೆ. ಆದರೆ ಈ ಪ್ರಕರಣದಲ್ಲಿ ಜಾಮೀನು ನೀಡಿದರೆ ಆರೋಪಿ ಪ್ರಭಾವಿ ವ್ಯಕ್ತಿಯಾಗಿರುವ ಕಾರಣ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಮತ್ತು ಸಾಕ್ಷಿ ನಾಶ ಮಾಡುವ ಸಾಧ್ಯತೆಯಿರುವುದರಿಂದ ಜಾಮೀನು ನೀಡುವುದಿಲ್ಲ ಎಂದು ತೀರ್ಪು ನೀಡಿದೆ.

ಮೇ 13ರಂದು ದೆಹಲಿ ಮುಖ್ಯಮಂತ್ರಿ ನಿವಾಸದಲ್ಲಿ ಬಿಭವ್ ಕುಮಾರ್ ಹಲ್ಲೆ ನಡೆಸಿದ್ದಾರೆ ಎಂದು ಸ್ವಾತಿ ಮಲಿವಾಲ್ ದೂರು ನೀಡಿದ್ದರು. ಏಳರಿಂದ ಎಂಟು ಬಾರಿ ಕಪಾಳಕ್ಕೆ ಬಾರಿಸಿರುವ ಬಿಭವ್, ಹೊಟ್ಟೆಯ ಭಾಗಕ್ಕೆ ಕಾಲಿನಿಂದ ಒದ್ದಿದ್ದಾರೆ. ಆ ಸಂದರ್ಭದಲ್ಲಿ ನಾನು ಮುಟ್ಟಿನ ಸಮಯದಲ್ಲಿದ್ದೆ. ಹೊಡೆಯಬೇಡಿ ಎಂದು ಬೇಡಿಕೊಂಡರು ಕೂಡ ನಿರಂತರವಾಗಿ ಹಲ್ಲೆ ಮುಂದುವರಿಸಿದರು ಎಂದು ಸ್ವಾತಿ ಆರೋಪಿಸಿದ್ದಾರೆ. (ಏಜೆನ್ಸಿಸ್)