ನ್ಯೂಸ್

ವಿಧಾನ ಪರಿಷತ್ ಚುನಾವಣೆ: ನಾಯಕರದೇ ನಾಮಾವಳಿ ಪ್ರಭಾವಳಿ

ಸ್ಥಳೀಯ ಸಂಸ್ಥೆಗಳ ಮೂಲಕ ನಡೆಯುವ ವಿಧಾನಪರಿಷತ್ ಚುನಾವಣೆಗೆ ಬಹುತೇಕ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ನಾಮಕಾವಸ್ತೆಗಷ್ಟೇ. ಇವರ ಗೆಲುವು ಪಕ್ಷದ ಪ್ರಮುಖ ನಾಯಕರ ನಾಮಾವಳಿ ಹಾಗೂ ಪ್ರಭಾವಳಿ ಮೇಲೆ ನಿಂತಿದೆ. ಬೆಂಗಳೂರು ಗ್ರಾಮಾಂತರ ಹಾಗೂ ಮೈಸೂರು-ಚಾಮರಾಜನಗರ ಕ್ಷೇತ್ರಗಳು ಇದಕ್ಕೆ ಹೊರತಲ್ಲ. ಬೆಂ.ಗ್ರಾಮಾಂತರದಲ್ಲಿ ಡಿ.ಕೆ. ಬ್ರದರ್, ಮೈಸೂರಿನಲ್ಲಿ ಸಿದ್ದರಾಮಯ್ಯ ಪ್ರಭಾವ-ಪ್ರತಿಷ್ಠೆ ಒರೆಗೆ ಹಚ್ಚಿದ್ದಾರೆ. ಇವೆರಡೂ ಕ್ಷೇತ್ರಗಳಲ್ಲಿ ಇವರಿಗೆ ಎಚ್.ಡಿ. ಕುಮಾರಸ್ವಾಮಿ ಸಾಂಪ್ರದಾಯಿಕ ಎದುರಾಳಿ ಎಂಬುದು ವಿಶೇಷ.

ಎಚ್​.ಡಿ.ಕುಮಾರಸ್ವಾಮಿ v/s ಡಿ.ಕೆ.ಶಿವಕುಮಾರ್​ ಬ್ರದರ್ಸ್

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು

ಬೆಂಗಳೂರು ಗ್ರಾಮಾಂತರ ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಕ್ಷೇತ್ರಕ್ಕೆ ನಡೆಯುತ್ತಿರುವ ಚುನಾವಣೆ ಅಭ್ಯರ್ಥಿಗಳಿಗಿಂತಲೂ ಇಬ್ಬರು ಪ್ರಮುಖ ರಾಜಕೀಯ ನಾಯಕರ ಪ್ರತಿಷ್ಠೆ ಕಣವಾಗಿ ಮಾರ್ಪಟ್ಟಿದೆ. ಜೆಡಿಎಸ್ ನಾಯಕ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ ಅಭ್ಯರ್ಥಿಗಳು ಎಂಬ ರೀತಿ ಕಣಚಿತ್ರಣ ಕಾಣಿಸಿದ್ದು, ಜಿದ್ದಾಜಿದ್ದಿನ ಪೈಪೋಟಿ ನಡೆದಿದೆ. ವಿಶೇಷವೆಂದರೆ ಈ ಕ್ಷೇತ್ರದಲ್ಲಿ ಬಿಜೆಪಿ ಪ್ರಾಬಲ್ಯ ಬಲು ಕಡಿಮೆ. ಅಂದರೆ ಸ್ಥಳೀಯ ಸಂಸ್ಥೆಯಲ್ಲಿ ಬಿಜೆಪಿ ಜನಪ್ರತಿನಿಧಿಗಳು ಹಾಗೂ ಆ ಪಕ್ಷದ ಒಲವು ಹೊಂದಿದವರು ಬಹಳ ಕಡಿಮೆ. ಇದೇ ಕಾರಣಕ್ಕೆ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಹಿಂದಿನಿಂದಲೂ ಹೋರಾಟ ತೀವ್ರ. ಆದರೆ, ಈ ಬಾರಿ ಬಿಜೆಪಿ ತಾನೂ ಒಂದು ಕೈ ನೋಡುವ ಪ್ರಯತ್ನದಲ್ಲಿದೆ. ಆ ನಿಟ್ಟಿನಲ್ಲಿ ನಿರೀಕ್ಷೆ ಮೀರಿದ ಶ್ರಮಹಾಕುತ್ತಿದೆ.

ಬೆಂಗಳೂರು ಗ್ರಾಮಾಂತರ ಜೆಡಿಎಸ್​ನ ಭದ್ರ ನೆಲೆ. ಕಳೆದ ಬಾರಿ ಕಡಿಮೆ ಅಂತರದಲ್ಲಿ ಸ್ಥಾನ ಕಳೆದುಕೊಂಡಿತ್ತು. ಶ್ರಮ ಹಾಕುವಲ್ಲಿ ಸ್ವಲ್ಪ ಎಡವಿದ್ದರಿಂದ ಕೈಕೈ ಹಿಸುಕಿಕೊಂಡಿತ್ತು. ಆದರೆ ಈ ಬಾರಿ ಕ್ಷೇತ್ರವನ್ನು ವಶ ಮಾಡಿಕೊಳ್ಳಲೇಬೇಕೆಂದು ದಳಪಡೆ ಪ್ರಯತ್ನ ಮಾಡುತ್ತಿದೆ. ಹಾಗೆಯೇ ಒಕ್ಕಲಿಗ ಸಮುದಾಯದ ಹೆಚ್ಚು ಪ್ರತಿನಿಧಿಗಳು ಆರಿಸಿಬಂದಿದ್ದು, ಅದು ತನಗೆ ಅನುಕೂಲವಾಗಬಹುದು ಎಂದು ಜೆಡಿಎಸ್ ಭಾವಿಸಿದೆ.

ಸದ್ಯ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿಗಳಿಗೆ ಆಯ್ಕೆಯಾದ ಸದಸ್ಯರು ಪ್ರಸ್ತುತ ಇಲ್ಲದ ಕಾರಣ ಮತದಾನದಲ್ಲಿ ಒಂದಷ್ಟು ವ್ಯತ್ಯಾಸವಾಗಿ ಫಲಿತಾಂಶ ಊಹಿಸದಂತೆ ಮೇಲ್ನೋಟಕ್ಕೆ ಕಾಣಿಸುತ್ತಿದೆ. ಚುನಾವಣೆ ಪ್ರಕ್ರಿಯೆಯ ಪ್ರಧಾನಘಟ್ಟ ನಾಮಪತ್ರ ಸಲ್ಲಿಕೆ, ಪರಿಶೀಲನೆ ಹಂತ ಮುಗಿದಿದ್ದು, ಮತದಾನಕ್ಕೆ ಇನ್ನು ಎರಡು ವಾರವೂ ಉಳಿದಿಲ್ಲ. ಬಿಜೆಪಿ ಅಭ್ಯರ್ಥಿ ಬಿ.ಸಿ.ನಾರಾಯಣಸ್ವಾಮಿ, ಕಾಂಗ್ರೆಸ್​ನ ಎಸ್.ರವಿ, ಜೆಡಿಎಸ್​ನ ಎಚ್.ಎಂ.ರಮೇಶ್ ಗೌಡ ತಮ್ಮೆಲ್ಲ ಶ್ರಮಹಾಕಿ ಕ್ಷೇತ್ರಾದ್ಯಂತ ಓಡಾಡುತ್ತಿದ್ದಾರೆ. ಪುರಸಭೆ, ನಗರಸಭೆೆ, ಗ್ರಾಮ ಪಂಚಾಯಿತಿ ಸದಸ್ಯರನ್ನು ಎಡತಾಕುತ್ತಿದ್ದು, ತಮ್ಮನ್ನು ಗೆಲ್ಲಿಸುವಂತೆ ಮನವೊಲಿಕೆ ಮಾಡುತ್ತಿದ್ದಾರೆ. ಅವರ ಆಸೆ-ಬೇಡಿಕೆ ಪೂರೈಸುವ ಪ್ರಯತ್ನದಲ್ಲೇ ಒಬ್ಬರಿಗಿಂತ ಒಬ್ಬರು ಪೈಪೋಟಿ ನಡೆಸಿದ್ದಾರೆ.

ಈ ಚುನಾವಣೆಯಲ್ಲಿ ಶಾಸಕರ ಪ್ರಾಬಲ್ಯದ ಪರೀಕ್ಷೆಯೂ ಆಗಲಿದೆ. ಈ ಕ್ಷೇತ್ರ ವ್ಯಾಪ್ತಿಯಲ್ಲಿ ಏಳು ವಿಧಾನಸಭಾ ಕ್ಷೇತ್ರ ಬರಲಿದ್ದು, ನಾಲ್ಕು ಕಡೆ ಜೆಡಿಎಸ್ ಶಾಸಕರಿದ್ದಾರೆ. ಕಾಂಗ್ರೆಸ್​ನವರು ಎರಡು ಕಡೆ ಮತ್ತು ಒಂದು ಕಡೆ ಕಾಂಗ್ರೆಸ್ ಬೆಂಬಲಿಸುವ ಪಕ್ಷೇತರ (ಹೊಸಕೋಟೆ) ಶಾಸಕರಿದ್ದಾರೆ. ಆದರೆ ಅದೇ ಕ್ಷೇತ್ರದಲ್ಲಿ ಬಿಜೆಪಿ ಪ್ರತಿನಿಧಿಸುವ ಬೆಂ.ಗ್ರಾ. ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಇದ್ದಾರೆ. ಹೀಗಾಗಿ ಎಂಟು ಮಂದಿಯ ಅಗ್ನಿಪರೀಕ್ಷೆಯೂ ಹೌದು. ಇವರೆಲ್ಲ ತಮ್ಮ ವ್ಯಾಪ್ತಿಯ ಸ್ಥಳೀಯ ಸಂಸ್ಥೆ ಪ್ರತಿನಿಧಿಗಳನ್ನು ಮನವೊಲಿಸಿ ಪಕ್ಷದ ಅಭ್ಯರ್ಥಿಗೆ ಮತಹಾಕುವಂತೆ ಒತ್ತಡ ಹೇರುತ್ತಿದ್ದಾರೆ.

ಕ್ಷೇತ್ರದ ವ್ಯಾಪ್ತಿ: ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ ತಾಲೂಕು ಮತ್ತು ರಾಮನಗರ ಜಿಲ್ಲೆಯ ಮಾಗಡಿ, ರಾಮನಗರ, ಕನಕಪುರ, ಚನ್ನಪಟ್ಟಣ ತಾಲೂಕುಗಳು ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿವೆ. ಈ ಪೈಕಿ 10 ಪುರಸಭೆ, ನಗರಸಭೆಗಳಿವೆ, 228 ಗ್ರಾಮ ಪಂಚಾಯಿತಿಗಳಿವೆ. ಇಲ್ಲಿನ ಜನಪ್ರತಿನಿಧಿಗಳೇ ಮತದಾರರು.

ಯಾರಿಗೆಲ್ಲ ಪ್ರತಿಷ್ಠೆ?: ಎಚ್.ಡಿ.ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್. ಸಚಿವರಾದ ಎಂ.ಟಿ.ಬಿ.ನಾಗರಾಜ್, ಡಾ.ಸಿ.ಎನ್.ಅಶ್ವತ್ಥ ನಾರಾಯಣ,

ಪಕ್ಷಗಳ ಬಲಾಬಲ

  • ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್ ಕಾಂಗ್ರೆಸ್​ಗೆ ಬಲ. ಸಂಬಂಧಿಯನ್ನೇ ಕಣಕ್ಕಿಳಿಸಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.
  • ಜೆಡಿಎಸ್​ನ ಹೆಚ್ಚಿನ ಮತ ಇದ್ದು, ಇದರ ಲಾಭ ಪಡೆದುಕೊಳ್ಳಲು ದಳಪತಿಗಳು ವಿಶೇಷ ತಂತ್ರ ರೂಪಿಸಿದ್ದಾರೆ. ಬಿಜೆಪಿಯಿಂದ ಹೆಚ್ಚಿನ ಲಾಭವನ್ನೂ ನಿರೀಕ್ಷಿಸಿದ್ದಾರೆ.
  • ಎರಡೂ ಜಿಲ್ಲೆಗಳ ಉಸ್ತುವಾರಿ ಸಚಿವರು ಪಕ್ಷದ ಅಭ್ಯರ್ಥಿ ಗೆಲ್ಲಿಸಿಕೊಂಡು ಬರಲು ಶ್ರಮಿಸುತ್ತಿದ್ದಾರೆ. ಆಡಳಿತ ಪಕ್ಷದ ಅಭ್ಯರ್ಥಿ ಎಂಬ ಕಾರಣಕ್ಕೆ ಲಾಭದ ಆಶಯದಲ್ಲಿದ್ದಾರೆ.

ಸಿದ್ದು-ಕುಮಾರಸ್ವಾಮಿ ಗುದ್ದಾಟ

| ಮಂಜುನಾಥ ಟಿ.ಭೋವಿ ಮೈಸೂರು

ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಎಚ್.ಡಿ.ಕುಮಾರಸ್ವಾಮಿ ಪ್ರತಿಷ್ಠಿತ ಕಣ. ಹೀಗಾಗಿ, ಇಲ್ಲಿ ಅವರ ಪಕ್ಷಗಳ ಅಭ್ಯರ್ಥಿ ನೆಪಮಾತ್ರ. ಈ ಇಬ್ಬರ ಗುದ್ದಾಟದ ನಡುವೆ ಬಿಜೆಪಿಗೆ 2ನೇ ಬಾರಿಗೆ ಖಾತೆ ತೆರೆಯುವ ತವಕ!

ಮೈಸೂರು-ಚಾಮರಾಜನಗರ ವಿಧಾನಪರಿಷತ್ ದ್ವಿಸದಸ್ಯ ಕ್ಷೇತ್ರದ ಚುನಾವಣೆಯ ಸ್ಥೂಲಚಿತ್ರಣವಿದು. ಕಾಂಗ್ರೆಸ್​ನ ಡಿ.ತಿಮ್ಮಯ್ಯ, ಬಿಜೆಪಿಯ ಆರ್.ರಘು, ಜೆಡಿಎಸ್​ನ ಸಿ.ಎನ್.ಮಂಜೇಗೌಡ, ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್, ಮೂವರು ಪಕ್ಷೇತರರು ಸೇರಿ ಅಖಾಡದಲ್ಲಿ 7 ಅಭ್ಯರ್ಥಿಗಳಿದ್ದಾರೆ.

ಕ್ಷೇತ್ರದಲ್ಲಿ ಮೊದಲಿನಿಂದಲೂ ಕಾಂಗ್ರೆಸ್, ಜೆಡಿಎಸ್ ಪಾರುಪತ್ಯ ಮೆರೆದಿವೆ. ಉಭಯ ಪಕ್ಷಗಳ ತಲಾ ಒಬ್ಬರು ಜಯ ಸಾಧಿಸಿಕೊಂಡು ಬಂದಿದ್ದು, ಬೇರೆಯವರಿಗೆ ಅವಕಾಶವೇ ದೊರೆತಿಲ್ಲ. ಈ ಅಪವಾದದ ನಡುವೆಯೇ 2009ರ ಚುನಾವಣೆಯಲ್ಲಿ ಮಾತ್ರ ಬಿಜೆಪಿ ಜಯಗಳಿಸಿತ್ತು. ಬಳಿಕ ಮತ್ತೆ ಅದಕ್ಕೆ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ಈ ಸಲ ಹೇಗಾದರೂ ಗೆಲ್ಲಬೇಕೆಂಬ ಹಠತೊಟ್ಟಿರುವ ಆಡಳಿತರೂಢ ಬಿಜೆಪಿ, ಅದಕ್ಕಾಗಿ ಕಳೆದ ಬಾರಿ ಸೋತಿದ್ದ ಆರ್.ರಘು ಅವರಿಗೆ ಮತ್ತೊಂದು ಅವಕಾಶ ನೀಡಿದೆ. ತವರು ಕ್ಷೇತ್ರದ ಚುನಾವಣೆಯನ್ನು ಸಿದ್ದರಾಮಯ್ಯ ಮೊದಲ ಬಾರಿಗೆ ಪ್ರತಿಷ್ಠೆಯಾಗಿ ಸ್ವೀಕರಿಸಿದ್ದು, ತಮ್ಮ ಪಕ್ಷದ ಅಭ್ಯರ್ಥಿ ಡಾ.ಡಿ.ತಿಮ್ಮಯ್ಯ ಗೆಲುವಿಗಾಗಿ ಇಲ್ಲೇ ಠಿಕಾಣಿ ಹೂಡಿದ್ದಾರೆ. ಇನ್ನು ಸಿದ್ದರಾಮಯ್ಯರನ್ನು ತವರು ಜಿಲ್ಲೆಯಲ್ಲೇ ಅಣಿಯಲು ಎಚ್.ಡಿ.ಕುಮಾರಸ್ವಾಮಿ ಕೂಡ ಈ ಚುನಾವಣೆಯನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದು, ಕಾಂಗ್ರೆಸ್ ತೊರೆದು ಬಂದ ಸಿ.ಎನ್.ಮಂಜೇಗೌಡರನ್ನು ಸಂಜೆ ಜೆಡಿಎಸ್​ಗೆ ಸೇರಿಸಿಕೊಂಡು ಬೆಳಗಾಗುವ ಹೊತ್ತಿಗೆ ಟಿಕೆಟ್ ಕೊಟ್ಟು ಚುನಾವಣೆಗೆ ಸಜ್ಜುಗೊಳಿಸಿದ್ದಾರೆ.

ಜೆಡಿಎಸ್​ಗೆ ಪ್ರತ್ಯುತ್ತರ ನೀಡಲು ಸಿದ್ಧರಾಗಿರುವ ಸಿದ್ದರಾಮಯ್ಯ, ಮೊದಲ ಪ್ರಾಶಸ್ಱವನ್ನು ಕಾಂಗ್ರೆಸ್​ಗೆ ಬರುವಂತೆ ನೋಡಿಕೊಂಡು, 2ನೇ ಪ್ರಾಶಸ್ಱ ಮತವನ್ನು ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್​ರಿಗೆ ವರ್ಗಾವಣೆ ಮಾಡುವ ಲೆಕ್ಕಾಚಾರ ಹಾಕಿದ್ದು, ಆ ಮೂಲಕ ಜೆಡಿಎಸ್-ಬಿಜೆಪಿ ಸೋಲಿಸಲು ಚಕ್ರವ್ಯೂಹ ರಚಿಸುತ್ತಿದ್ದಾರೆ. ಆದರೆ ಜೆಡಿಎಸ್, ಬಿಜೆಪಿ ಸಿಂಗಲ್ ವೋಟ್ ಕಾರ್ಯತಂತ್ರದ ಮೂಲಕ ಕಾಂಗ್ರೆಸ್ ಅನ್ನು ಕಟ್ಟಿಹಾಕಲು ಮುಂದಾಗಿವೆ. ಇದರಿಂದ ಕ್ಷೇತ್ರದಲ್ಲಿ 3 ಪಕ್ಷಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ ಎನ್ನಬಹುದು.

ಗ್ರಾಪಂನಲ್ಲಿ ಕಾಂಗ್ರೆಸ್ ಹಿಡಿತ: ಮೈಸೂರು, ಚಾಮರಾಜನಗರ ಜಿಲ್ಲೆಯ ಗ್ರಾಪಂಗಳ ಮೇಲೆ ಕಾಂಗ್ರೆಸ್ ಹಿಡಿತ ಬಿಗಿಯಾಗಿದೆ. 2ನೇ ಸ್ಥಾನದಲ್ಲಿ ಜೆಡಿಎಸ್ ಇದೆ. ಹೆಚ್ಚಿನ ಗ್ರಾಪಂ ಸದಸ್ಯರ ಬೆಂಬಲವಿಲ್ಲದ ಬಿಜೆಪಿ ಹೆಚ್ಚು ಕಸರತ್ತು ಮಾಡಬೇಕಾಗಿದೆ. ಪಕ್ಷವಾರು ಮತದಾರರು ಇರುವ ತಾಪಂ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಸೇರಿ ಇನ್ನಿತರ ಸ್ಥಳೀಯ ಸಂಸ್ಥೆಗಳಲ್ಲೂ ಕೈ ಪಡೆ ಮುಂದೆ ಇದೆ. ಇಬ್ಬರು ಬಿಜೆಪಿ ಸಂಸದರಿದ್ದಾರೆ. ಮೈಸೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಪೈಕಿ 5 ಕಡೆ ಜೆಡಿಎಸ್, ತಲಾ 3 ಕಡೆ ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರಿದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲಿ ತಲಾ ಇಬ್ಬರು ಕಾಂಗ್ರೆಸ್-ಬಿಜೆಪಿ ಶಾಸಕರು (ಬಿಎಸ್​ಪಿ ಎನ್.ಮಹೇಶ್ ಸೇರಿ) ಇದ್ದಾರೆ. ಆದರೆ ಜೆಡಿಎಸ್ ಶಾಸಕರಿಲ್ಲ. ಸ್ಥಳೀಯ ಸಂಸ್ಥೆಗಳಲ್ಲೂ ಈ ಪಕ್ಷದ ಬೆಂಬಲಿತ ಸದಸ್ಯರೂ ಕಡಿಮೆ.

ಕಾಂಚಾಣದ ಪ್ರಭಾವಳಿ: ಸಂಖ್ಯಾಬಲಕ್ಕಿಂತ ಕಾಂಚಾಣ ಕರಾಮತ್ತು ಹೆಚ್ಚು ಕೆಲಸ ಮಾಡುತ್ತದೆ. ಕಳೆದ ಬಾರಿ ಪ್ರತಿ ಮತಕ್ಕೆ 25 ಸಾವಿರ ರೂ. ಹಾಗೂ 15 ಸಾವಿರ ರೂ. ಹಂಚಿಕೆ ಮಾಡಿದ್ದು, ಕಳೆದ ಬಾರಿಗಿಂತ ಈ ಸಲ ಹೆಚ್ಚಿನ ಹಣದ ಹೊಳೆ ಹರಿಯುವುದು ನಿಶ್ಚಿತ. ಅದಕ್ಕಾಗಿ, ಮೂರು ಪ್ರಮುಖ ಪಕ್ಷಗಳು ಹಣವಂತರಿಗೆ ಟಿಕೆಟ್ ನೀಡಿ ಕಾದಾಟಕ್ಕೆ ನಿಲ್ಲಿಸಿದ್ದು, ಯಾರು ಹೆಚ್ಚು ಹಣ ಹಂಚುತ್ತಾರೋ ಅದರ ಮೇಲೆ ಫಲಿತಾಂಶ ನಿರ್ಧಾರವಾಗಲಿದೆ.

ಜಿಟಿಡಿ ಸಂದೇಶ ಯಾರ ಕಡೆ?: ಜೆಡಿಎಸ್​ನಿಂದ ದೂರವಾಗಿರುವ ಚಾಮುಂಡೇಶ್ವರಿ ಶಾಸಕ ಜಿ.ಟಿ.ದೇವೇಗೌಡ ಒಲವು ಯಾರ ಕಡೆಗೆ ಎಂಬುದು ಕುತೂಹಲ ಮೂಡಿದೆ. ಸಿದ್ದರಾಮಯ್ಯ ಅವರೊಂದಿಗೆ ಬಹಿರಂಗವಾಗಿ ವೇದಿಕೆ ಹಂಚಿಕೊಂಡು ಕಾಂಗ್ರೆಸ್ ಸೇರುವ ಸುಳಿವು ನೀಡಿದ್ದಾರೆ. ಮೈಸೂರು, ಹುಣಸೂರು ತಾಲೂಕಿನಲ್ಲಿ ಹಿಡಿತ ಹೊಂದಿರುವ ಅವರು ನಿರ್ಣಾಯಕರಾಗಿದ್ದಾರೆ. ಸಂದೇಶ್ ನಾಗರಾಜ್ ಜೆಡಿಎಸ್ ಬೆಂಬಲಿಸದಿದ್ದರೆ ಮುಂದೆ ಅವರ ಕುಟುಂಬದ ರಾಜಕೀಯದ ವಿರುದ್ಧ ಪ್ರತೀಕಾರ ತೀರಿಸುವ ಎಚ್ಚರಿಕೆಯನ್ನು ಜೆಡಿಎಸ್ ಸ್ಥಳೀಯ ಮುಖಂಡರು ನೀಡಿದ್ದು, ಸಂದೇಶ್ ನಡೆಯೂ ಕುತೂಹಲ ಕೆರಳಿಸಿದೆ.

ಹಾಲಿಗಳು ಇಲ್ಲದ ಕಣ: ಹಾಲಿ ಸದಸ್ಯರಾದ ಕಾಂಗ್ರೆಸ್​ನ ಧರ್ಮಸೇನ, ಜೆಡಿಎಸ್​ನ ಸಂದೇಶ್ ನಾಗರಾಜ್​ಗೆ ಟಿಕೆಟ್ ಕೈತಪ್ಪಿರುವುದರಿಂದ ನೇಪಥ್ಯಕ್ಕೆ ಸರಿದಿದ್ದಾರೆ. ಇವರ ಸ್ಥಾನದಲ್ಲಿ ಹೊಸಮುಖಗಳು ಜಯಕ್ಕಾಗಿ ಓಡುತ್ತಿದ್ದಾರೆ. ಇದರೊಂದಿಗೆ ಕಳೆದ ಬಾರಿ ಸೋತಿದ್ದ ಬಿಜೆಪಿಯ ಅಭ್ಯರ್ಥಿಯೂ ಇದ್ದಾರೆ.

ಮಹಿಳಾ ಮತಗಳೇ ಅಧಿಕ: ಒಟ್ಟು 6,792 ಮತದಾರರಿದ್ದು, ಮೈಸೂರು ಜಿಲ್ಲೆಯಲ್ಲೇ 4,517, ಚಾಮರಾಜನಗರ ಜಿಲ್ಲೆಯಲ್ಲಿ 2,275 ಮತದಾರರಿದ್ದಾರೆ. 3,517 ಮಹಿಳೆಯರಿದ್ದರೆ, ಪುರುಷರ ಸಂಖ್ಯೆ 3,275.

2015ರ ಚುನಾವಣೆ

  • ಆರ್. ಧರ್ಮಸೇನ (ಕಾಂಗ್ರೆಸ್)- 3037 ಜಯ
  • ಸಂದೇಶ್ ನಾಗರಾಜು (ಜೆಡಿಎಸ್)-2257 (ದ್ವಿತೀಯ ಪ್ರಾಶಸ್ಱ ಮತ ಸೇರಿ 2632) ಜಯ
  • ಆರ್. ರಘು (ಬಿಜೆಪಿ)-1828 (ದ್ವಿತೀಯ ಪ್ರಾಶಸ್ಱ ಮತ ಸೇರಿ -2045) ಸೋಲು