ನ್ಯೂಸ್

ವಿಧಾನಸಭೆ ಪ್ರತಿಪಕ್ಷ ನಾಯಕನ ಆಯ್ಕೆಗೆ ಕ್ಷಣಗಣನೆ..!

ಬೆಂಗಳೂರು: ಇಂದಿನಿಂದ ವಿಧಾನಸಭೆಯಲ್ಲಿ ಅಧಿವೇಶನ ಶುರುವಾಗಲಿದ್ದು ವಿರೋಧ ಪಕ್ಷದ ನಾಯಕನ ಆಯ್ಕೆಗೆ ಕ್ಷಣಗಣನೆ ಶುರುವಾಗಿದೆ. ಈ ಹಿಂದೆ ವಿರೋಧಪಕ್ಷದ ನಾಯಕನ ಆಯ್ಕೆ ಮಾಡಲು ಬಿಜೆಪಿ ಇನ್ನೂ ಹೆಣಗಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್​ನ ಅನೇಕ ನಾಯಕರು ಟೀಕೆ ಮಾಡಿದ್ದರು. ಅದಕ್ಕೆ ಮಾಜಿ ಸಿಎಂ ಬೊಮ್ಮಾಯಿ, ತಡ ಏನೂ ಆಗಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಇಂದು ರಾಜ್ಯಪಾಲರ‌ ಭಾಷಣದ‌ ಬಳಿಕ ಶಾಸಕಾಂಗ ಸಭೆ ನಡೆಸಲು ರಾಜ್ಯ‌ ಬಿಜೆಪಿ ನಿರ್ಧಾರ ಮಾಡಿದ್ದು ವೀಕ್ಷಕರಾಗಿ ಮನ್ಸೂಕ್ ಮಾಂಡವಿಯ ಹಾಗೂ ವಿನೋದ್ ತಾವಡೆ ಆಗಮಿಸಿದ್ದಾರೆ. ಈ ಸಭೆಯಲ್ಲಿ ವಿರೋಧಪಕ್ಷದ ನಾಯಕನನ್ನು ಬಿಜೆಪಿ ಆಯ್ಕೆ ಮಾಡುವ ಸಾಧ್ಯತೆ ಬಹಳ ಹೆಚ್ಚಿರುತ್ತದೆ.

ಇಂದಿನಿಂದ ವಿಧಾನಸಭೆ ಅಧಿವೇಶನ ಹಿನ್ನೆಲೆಯಲ್ಲಿ ವಿಧಾನಸೌಧದ ಸುತ್ತ ಎರಡು ಕೀ.ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ನಗರ ಪೊಲೀಸ್ ಆಯುಕ್ತರು ಅದೇಶ ಮಾಡಿದ್ದಾರೆ. ಅಧಿವೇಶನ ಮುಗಿಯುವವರೆಗೂ ಎರಡು ಕಿಲೋಮೀಟರ್ ವ್ಯಾಪ್ತಿಯಲ್ಲಿ ಪ್ರತಿಭಟನೆ, ರ್ಯಾಲಿ, ಧರಣಿ ಮುಂತಾದವುಗಳನ್ನು ನಡೆಸುವಂತಿಲ್ಲ. ಐದು ಜನರು ಗುಂಪು ಸೇರುವಂತಿಲ್ಲ.

ವಿಧಾನಸೌಧ ಸುತ್ತಮುತ್ತ ಭಾರೀ ಬಂದೋಬಸ್ತ್ ಏರ್ಪಡಿಸಲಾಗಿದ್ದು ಕೇಂದ್ರ ವಿಭಾಗದ ಡಿಸಿಪಿ‌ ನೇತೃತ್ವದಲ್ಲಿ ಭದ್ರತೆಯನ್ನು ಒದಗಿಸಲಾಗಿದೆ. ಮೂವರು ಡಿಸಿಪಿ, 15 ಎಸಿಪಿ, 80 ಇನ್ಸ್​ಪೆಕ್ಟರ್ ಸೇರಿದಂತೆ ಒಟ್ಟು 1500 ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ.