ವಿಶಾಖಪಟ್ಟಣಂ: ಜಿಲ್ಲೆಯ ಆರ್.ಆರ್. ವೆಂಕಟಪುರಂ ಗ್ರಾಮದ ಸಮೀಪವಿರುವ ಎಲ್.ಜಿ ಪಾಲಿಮರ್ಸ್ ಇಂಡಿಯಾ ಪ್ರವೈಟ್ ಲಿಮಿಟೆಡ್ ಕೆಮಿಕಲ್ ಫ್ಯಾಕ್ಟರಿಯಲ್ಲಿ ಇಂದು (ಗುರುವಾರ) ಬೆಳಗ್ಗೆ ಸಂಭವಿಸಿದ ವಿಷಾನಿಲ ಸೋರಿಕೆ ದುರಂತದಲ್ಲಿ 10 ಮಂದಿ ದಾರುಣವಾಗಿ ಸಾವಿಗೀಡಾಗಿದ್ದಾರೆ.
ಮೂಲಗಳ ಪ್ರಕಾರ ಕಾರ್ಖಾನೆಯಲ್ಲಿ ಸ್ಟೈರೀನ್ ಗ್ಯಾಸ್ ಲೀಕ್ ಆಗಿದ್ದು, ಇದರಿಂದಾಗಿ ಜನರಿಗೆ ಕಣ್ಣು, ಚರ್ಮ ಮತ್ತು ಮೂಗಿನಲ್ಲಿ ಉರಿ ಅನುಭವ ಕಾಣಿಸಿಕೊಂಡಿದ್ದು, ಉಸಿರಾಟದ ತೊಂದರೆಯು ಎದುರಾಗಿದೆ. ಕಾರ್ಖಾನೆ ಸಮೀಪದ ನಿವಾಸಿಗಳಲ್ಲಿ 200ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಾಣಿ-ಪಕ್ಷಿಗಳಿಗೂ ವಿಷಾನಿಲ ಪರಿಣಾಮ ಬೀರಿದ್ದು, ಉಸಿರಾಟದ ತೊಂದರೆಯಿಂದ ನರಳಾಟ ಅನುಭವಿಸಿದ ಹೃದಯ ವಿದ್ರಾವಕ ಘಟನೆಗಳು ನಡೆದಿವೆ. ಇದರ ನಡುವೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಸ್ಥಳೀಯ ನಿವಾಸಿಗಳನ್ನು ಅಲ್ಲಿಂದ ಬೇರೆಡೆಗೆ ಸ್ಥಳಾಂತರಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ #VizagGasLeak ಮತ್ತು #Vizag ಹ್ಯಾಶ್ಟ್ಯಾಗ್ ಮೂಲಕ ದುರಂತ ಸ್ಥಳದ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅಲ್ಲಿನ ಭೀಕರತೆ ಮನಕಲಕುವಂತಿದೆ. ಸಾಕಷ್ಟು ನೆಟ್ಟಿಗರು ಸಂತ್ರಸ್ತರ ನೋವಿಗೆ ಕಂಬನಿ ಮಿಡಿದಿದ್ದಾರೆ.