ನ್ಯೂಸ್

ಜಪಾನ್​ನಲ್ಲಿ ಮೊಳಗಿತು ಕನ್ನಡ ಡಿಂಡಿಮ; ಕುವೆಂಪು ಉತ್ಸವ, ವಿಶ್ವ ಕನ್ನಡ ಸಮ್ಮೇಳನ

ಬೆಂಗಳೂರು: ಕನ್ನಡ ಡಿಂಡಿಮ ಕರ್ನಾಟಕದಾಚೆಗಷ್ಟೇ, ಭಾರತದಾಚೆಯೂ ಮೊಳಗಿದೆ. ಜಪಾನ್​ನಲ್ಲಿ ವಿಶ್ವ ಕನ್ನಡ ಸಮ್ಮೇಳನ ಹಾಗೂ ಕುವೆಂಪು ಉತ್ಸವ ಆಯೋಜಿಸಿದ್ದರಿಂದ ವಿದೇಶದಲ್ಲಿ ಕನ್ನಡದ ಕಂಪು ವ್ಯಾಪಿಸಿದೆ.

ರಾಷ್ಟ್ರಕವಿ ಕುವೆಂಪು ಕಲಾನಿಕೇತನ ಹಾಗೂ ಜಪಾನ್ ಕನ್ನಡ ಸಂಘದ ಆಶ್ರಯದಲ್ಲಿ ಜಪಾನ್​​ನ ಒಸಾಕಾದಲ್ಲಿ ಕುವೆಂಪು ಉತ್ಸವ ಹಾಗೂ ವಿಶ್ವ ಕನ್ನಡ ಸಮ್ಮೇಳನ ಆಯೋಜಿಸಲಾಗಿತ್ತು. ಪತ್ರಕರ್ತ ಜೆ.ಹೆಚ್. ಅನಿಲ್ ಕುಮಾರ್ ಸಮ್ಮೇಳನವನ್ನು ಉದ್ಘಾಟಿಸಿದ್ದು, ವಿದೇಶದಲ್ಲಿ ಕನ್ನಡ ಕಾರ್ಯಕ್ರಮ ನಡೆಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ಅಲ್ಲದೆ ಕುವೆಂಪು ಅವರ ಸಾಹಿತ್ಯ ಮನೆಮಾತಾಗಬೇಕು ಎಂದರು.

ಸಮ್ಮೇಳನಾಧ್ಯಕ್ಷ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಮಾತನಾಡಿ, ಕುವೆಂಪು ಅವರ ಗೀತೆಗಳಲ್ಲಿ ಪ್ರಕೃತಿ ಮಾತೆಯ ಆರಾಧನೆ ಇದೆ, ಕನ್ನಡ ನಾಡು ನುಡಿಯ ಮಹತ್ವವಿದೆ, ದೇಶಾಭಿಮಾನದ ಗೀತೆಗಳಿವೆ. ಇಂತಹ ಪುಣ್ಯ ಪುರುಷರ ಹೆಸರಿನಲ್ಲಿ ಜಪಾನ್ ದೇಶದಲ್ಲಿ ಸಮ್ಮೇಳನ ಆಯೋಜಿಸಿ ನನ್ನನ್ನು ಸಮ್ಮೇಳನಾಧ್ಯಕ್ಷನನ್ನಾಗಿ ಮಾಡಿರುವುದು ನನ್ನ ಪೂರ್ವಜನ್ಮದ ಪುಣ್ಯ ಎಂದರು.

ಕುವೆಂಪು ಅವರ ರಚನೆಯ ಜಯಭರತ ಜನನಿಯ ತನುಜಾತೆ, ಓ ನನ್ನ ಚೇತನ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ, ನೂರು ದೇವರನೆಲ್ಲ ನೂಕಾಚೆ ದೂರ, ಗುಡಿ ಚರ್ಚು ಮಸೀದಿಗಳ ಬಿಟ್ಟು ಹೊರಬನ್ನಿ, ತೇನವಿನ ತೃಣಮಪಿ ನ ಚಲತಿ ಮುಂತಾದ ಗೀತೆಗಳನ್ನು ಹಾಡುವುದಲ್ಲದೆ, ಸೋದಾಹರಣ ಭಾಷಣದ ಮೂಲಕ ವಿವರಿಸಿದರು.

ಕನ್ನಡ ಸಂಸ್ಕೃತಿ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಅಣ್ಣೇಗೌಡ ಮಾತನಾಡಿ, ದೇಶ-ವಿದೇಶಗಳಲ್ಲಿ ಕುವೆಂಪು ಉತ್ಸವ, ಸಮ್ಮೇಳನ ಆಯೋಜಿಸುತ್ತಿರುವ ಪ್ರಕಾಶ್ ಅವರ ಕುವೆಂಪು ಕಲಾನಿಕೇತನದ ಕಾರ್ಯ ಶ್ಲಾಘನೀಯ ಎಂದರು. ಸರ್ಕಾರದ ನೆರವಿನೊಂದಿಗೆ ಮತ್ತಷ್ಟು ಕಾರ್ಯಕ್ರಮ ಹಮ್ಮಿಕೊಳ್ಳಲು ಹೇಳಿದರು.

ಜಪಾನ್ ಕನ್ನಡ ಸಂಘದ ಚಿಡಿಯಾ ಕನಕ್ ಸಮರ್, ಆತ್ಮಾರಾಂ, ಯುಕೊ, ಕೈಜಾಮಾ ಕ್ಯಟೊ, ಮನುಕಾಂಡ್, ಆರ್ ತಿ ಒಸಾಕಾ, ಪ್ರವೀಣ್ ಓಸ್ವಾಲ್, ಕುವೆಂಪು ಕಲಾನಿಕೇತನದ ಅಧ್ಯಕ್ಷ ಡಿ. ಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು. ವಿವಿಧ ಕ್ಷೇತ್ರದ ಸಾಧಕರಿಗೆ ಇದೇ ಸಂದರ್ಭದಲ್ಲಿ ರಾಷ್ಟ್ರಕವಿ ಕುವೆಂಪು ಪ್ರಶಸ್ತಿ ನೀಡಿ ಗೌರವಿಸಲಾಯಿತು.