ಮುಂಬೈ: ಕೆನಡಾ ಮೂಲದ ಫೇರ್‌ಫ್ಯಾಕ್ಸ್ ಗ್ರೂಪ್ ಬೆಂಬಲಿತ ಕಂಪನಿಯಾದ ಗೋ ಡಿಜಿಟ್ ಜನರಲ್ ಇನ್ಶುರೆನ್ಸ್ ತನ್ನ ಆರಂಭಿಕ ಸಾರ್ವಜನಿಕ ಕೊಡುಗೆಯನ್ನು (ಐಪಿಒ) ಮೇ 15 ರಂದು ಪ್ರಾರಂಭಿಸಲು ತಯಾರಿ ನಡೆಸುತ್ತಿದೆ. ಈ ಕಂಪನಿಯ ಮಾಹಿತಿ ಪ್ರಕಾರ, ಹೂಡಿಕೆದಾರರು ಮೇ 15 ರಿಂದ 17 ರವರೆಗೆ ಈ ಐಪಿಒದಲ್ಲಿ ಹೂಡಿಕೆ ಮಾಡಲು ಅವಕಾಶವನ್ನು ಪಡೆಯುತ್ತಾರೆ.
ಆಂಕರ್ (ದೊಡ್ಡ) ಹೂಡಿಕೆದಾರರು ಮೇ 14 ರಂದು ಬಿಡ್‌ಗಳನ್ನು ಸಲ್ಲಿಸಬಹುದಾಗಿದೆ. ಈ ಐಪಿಒದಲ್ಲಿ ನೀಡಲಾಗುತ್ತಿರುವ ಷೇರಿಗೆ ಇನ್ನೂ ಬೆಲೆಯನ್ನು ಘೋಷಿಸಲಾಗಿಲ್ಲ. ಆದರೆ, ಈಗಾಗಲೇ ಈ ಐಪಿಒ ಷೇರು ಗ್ರೇ ಮಾರ್ಕೆಟ್‌ನಲ್ಲಿ ಬಿರುಗಾಳಿಯನ್ನು ಸೃಷ್ಟಿಸುತ್ತಿದೆ. ಈಗಾಗಲೇ ಗ್ರೇ ಮಾರ್ಕೆಟ್‌ನಲ್ಲಿ ಈ ಐಪಿಒ ಷೇರಿಗೆ ಪ್ರೀಮಿಯಂ 50 ರೂ. ಇದೆ.
ಈ ಐಪಿಒ ಪ್ರಾರಂಭಿಸಲು ಕಂಪನಿಯು ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾದಿಂದ ಮಾರ್ಚ್ನಲ್ಲಿ ಅನುಮೋದನೆ ಪಡೆಯಲಾಗಿದೆ.
ಈ ಐಪಿಒದಲ್ಲಿ 1,125 ಕೋಟಿ ರೂ. ಮೌಲ್ಯದ ತಾಜಾ ಷೇರುಗಳನ್ನು ನೀಡಲಾಗುತ್ತಿದೆ. ಇದರ ಹೊರತಾಗಿ, ಪ್ರವರ್ತಕ ಗೋ ಡಿಜಿಟ್ ಇನ್ಫೋವರ್ಕ್ಸ್ ಸರ್ವೀಸಸ್ ಮತ್ತು ಅಸ್ತಿತ್ವದಲ್ಲಿರುವ ಷೇರುದಾರರಿಂದ 5.47 ಕೋಟಿ ಈಕ್ವಿಟಿ ಷೇರುಗಳ ಮಾರಾಟದ ಕೊಡುಗೆ (OFS) ಸಹ ಸೇರಿದೆ. ಗೋ ಡಿಜಿಟ್ ಇನ್ಫೋವರ್ಕ್ಸ್ ಸರ್ವೀಸಸ್ ಪ್ರಸ್ತುತ ಕಂಪನಿಯಲ್ಲಿ ಶೇಕಡಾ 83.3 ಪಾಲನ್ನು ಹೊಂದಿದೆ.
ಮಾರ್ಗನ್ ಸ್ಟಾನ್ಲಿ, ಐಸಿಐಸಿಐ ಸೆಕ್ಯುರಿಟೀಸ್, ಆಕ್ಸಿಸ್ ಕ್ಯಾಪಿಟಲ್, ಎಚ್‌ಡಿಎಫ್‌ಸಿ ಬ್ಯಾಂಕ್, ಐಐಎಫ್‌ಎಲ್ ಸೆಕ್ಯುರಿಟೀಸ್, ನುವಾಮಾ ಈ ಐಪಿಒದ ಪ್ರಮುಖ ವ್ಯವಸ್ಥಾಪಕರಾಗಿದ್ದಾರೆ.
ಈ ಕಂಪನಿಯ ಹೂಡಿಕೆದಾರರಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಮತ್ತು ನಟಿ ಅನುಷ್ಕಾ ಶರ್ಮಾ ಕೂಡ ಪಾಲನ್ನು ಹೊಂದಿದ್ದಾರೆ. ಅವರು ಈ ಐಪಿಒದಲ್ಲಿ ಯಾವುದೇ ಷೇರುಗಳನ್ನು ಮಾರಾಟ ಮಾಡುತ್ತಿಲ್ಲ.
ಎಫ್ಎಎಲ್ ಕಾರ್ಪೋರೇಷನ್ ಒಡೆತನದಲ್ಲಿರುವ ಫೇರ್‌ಫ್ಯಾಕ್ಸ್ ಫೈನಾನ್ಶಿಯಲ್ ಹೋಲ್ಡಿಂಗ್ಸ್ ಸಂಸ್ಥೆಯು ಗೋ ಡಿಜಿಟ್‌ನಲ್ಲಿ 45.3% ಪಾಲನ್ನು ಹೊಂದಿದೆ. ಇದಲ್ಲದೆ, ಕಾಮೇಶ್ ಗೋಯಲ್ ಮತ್ತು ಓಬೆನ್ ವೆಂಚರ್ಸ್ ಎಲ್ಎಲ್ಪಿ ಕಂಪನಿಯಲ್ಲಿ 14.96% ಮತ್ತು 39.79% ಪಾಲನ್ನು ಹೊಂದಿವೆ.
2022ರ ವಿತ್ತೀಯ ವರ್ಷದಲ್ಲಿ ನಿವ್ವಳ ನಷ್ಟವು 295 ಕೋಟಿ ರೂ. ಆಗಿದೆ. 2021ರ ವಿತ್ತೀಯ ವರ್ಷದಲ್ಲಿ ಇದು ರೂ. 122 ಕೋಟಿ ಇತ್ತು. 2022ರ ವಿತ್ತೀಯ ವರ್ಷದಲ್ಲಿ ಕಂಪನಿಯ ಒಟ್ಟು ಆದಾಯ 3,841 ಕೋಟಿ ರೂ. ಇದೆ. 2022ರಲ್ಲಿ ಪ್ರೀಮಿಯಂ ಆದಾಯವು 2021ಕ್ಕಿಂತ ಶೇಕಡಾ 62ರಷ್ಟು ಹೆಚ್ಚಾಗಿದೆ.