ನ್ಯೂಸ್

ನೀವು ಅಂದುಕೊಂಡ ಹಾಗೆ ಇದು ಆಧಾರ್​ ಕಾರ್ಡ್​ ಅಂತು ಅಲ್ಲವೇ ಅಲ್ಲ...! Aadhaar card

Aadhaar card : ಮದುವೆ ಅನ್ನೋದು ಪ್ರತಿಯೊಬ್ಬರ ಬದುಕಿನಲ್ಲಿ ಮಹತ್ತರ ಘಟ್ಟ. ನೂರಾರು ಕನಸಿನ ಬುತ್ತಿಯೊಂದಿಗೆ ವಧು-ವರರು ದಾಂಪತ್ಯಕ್ಕೆ ಕಾಲಿಡುತ್ತಾರೆ. ಅದಕ್ಕೂ ಮುನ್ನ ಮದ್ವೆ ಹೀಗೆ ನಡೆಯಬೇಕು, ಅಲಂಕಾರ, ಬಟ್ಟೆ, ಊಟ, ಆಭರಣ, ಫೋಟೋ… ಎಲ್ಲದರ ಬಗ್ಗೆಯೂ ವಿಶೇಷ ಕಾಳಜಿಯಿಂದ ಹೊಸತನಕ್ಕೆ ಆದ್ಯತೆ ನೀಡುತ್ತಾ ಆಯ್ಕೆ ಮಾಡುತ್ತಾರೆ.

ಇನ್ನು ಆಮಂತ್ರಣ ಪತ್ರಿಕೆ ವಿನ್ಯಾಸಕ್ಕೂ ಹೆಚ್ಚು ಮಹತ್ವ ಇದ್ದದ್ದೇ. ಇತ್ತೀಚೆಗೆ ಮದುವೆಯ ಆಮಂತ್ರಣ ಪತ್ರಿಕೆಗಳದ್ದೇ ಭಾರಿ ಸದ್ದು. ಪಾಸ್‌ಪೋರ್ಟ್, ರೇಷನ್ ಕಾರ್ಡ್, ದಿನಪತ್ರಿಕೆ, ಟಿವಿ ಜಾಹೀರಾತು, ಪರಿಸರ ಕಾಳಜಿ, ಮೊಬೈಲ್​ ಅಪ್ಲಿಕೇಷನ್​ ಮಾದರಿ, ಲ್ಯಾಪ್​ಟಾಪ್​ ಮಾದರಿಯ ಕಾರ್ಡ್​… ಹೀಗೆ ತರೇಹವಾರಿ ರೀತಿಯ ಆಮಂತ್ರಣ ಪತ್ರಿಕೆಗಳು ಚಾಲ್ತಿಯಲ್ಲಿವೆ. ಇದೀಗ ಆಧಾರ್​ ಕಾರ್ಡ್​ ಮಾದರಿಯ ಆಮಂತ್ರಣ ಪತ್ರಿಕೆ ವೈರಲ್​ ಆಗಿದೆ.

ಆಧಾರ್​ ಕಾರ್ಡ್​ ರೀತಿಯ ಮದುವೆ ಕಾರ್ಡ್ ಅನ್ನು ಸಾಮಾಜಿಕ ಜಾಲತಾಣ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿದೆ. ನೋಡಲು ನಿಖರವಾಗಿ ಆಧಾರ್ ಕಾರ್ಡ್‌ನಂತೆಯೇ ಕಾಣುತ್ತದೆ. ಫಾಂಟ್​ ಶೈಲಿಯ ವಿನ್ಯಾಸ ಕೂಡ ಸಂಪೂರ್ಣವಾಗಿ ಅಧಿಕೃತ ಆಧಾರ್ ಕಾರ್ಡ್‌ನಂತೆ ಡಿಸೈನ್​ ಮಾಡಲಾಗಿದೆ. ಒಂದು ಕ್ಷಣ ನೋಡಿದವರಿಗೆ ಆಧಾರ್​ ಕಾರ್ಡೇ ಇರಬಹುದು ಅಂದುಕೊಳ್ಳುತ್ತಾರೆ. ಆದರೆ, ಸೂಕ್ಷ್ಮವಾಗಿ ಗಮನಿಸಿದರೆ, ಅದು ಮದುವೆ ಕಾರ್ಡ್ ಎಂದು ಅರಿವಾಗುತ್ತದೆ.

ಮಧ್ಯಪ್ರದೇಶದ ಪಿಪಾರಿಯಾ ಗ್ರಾಮದ ವರ ಪ್ರಹ್ಲಾದ್ ಮತ್ತು ವಧು ವರ್ಷಾ ಅವರ ಮದುವೆ ಕಾರ್ಡ್ ಇದಾಗಿದೆ. ಕಾರ್ಡ್‌ನಲ್ಲಿ ಸಾಮಾನ್ಯ ಆಧಾರ್ ಸಂಖ್ಯೆ ಬದಲಿಗೆ ಅವರ ಮದುವೆಯ ದಿನಾಂಕವನ್ನು ಬರೆಯಲಾಗಿದೆ. ಫೋಟೋದ ಜಾಗದಲ್ಲಿ ವಧು-ವರರು ಒಟ್ಟಿಗೆ ಇರುವ ಫೋಟೋವನ್ನು ಅಳವಡಿಸಲಾಗಿದೆ. ಇದಲ್ಲದೆ, ಕೆಳಗೆ ಬಾರ್‌ಕೋಡ್ ಅನ್ನು ಸಹ ಮಾಡಲಾಗಿದೆ. ಇದು 2017, ಜೂನ್ 22ರ ಕಾರ್ಡ್ ಆಗಿದೆ. ಆದರೆ, ಈ ಕಾರ್ಡ್ ಈಗ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗಿದೆ.

ವಿಶೇಷ ಮದುವೆ ಕಾರ್ಡ್‌ ನೋಡಿದ ನೆಟ್ಟಿಗರು ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ. ಇದು ತುಂಬಾ ವಿಭಿನ್ನವಾಗಿದೆ. ಇನ್ನು ಯಾವ್ಯಾವ ರೀತಿಯಲ್ಲಿ ಆಧಾರ್ ಕಾರ್ಡ್ ಮಾಡುತ್ತಾರೋ? ಎಂದೆಲ್ಲ ಕಾಮೆಂಟ್​ ಮಾಡಿದ್ದಾರೆ. ಈ ರೀತಿ ಆಧಾರ್​ ಕಾರ್ಡ್​ ರೀತಿಯಲ್ಲಿ ಮದುವೆ ಕಾರ್ಡ್ ಮಾಡುವುದು ಸರಿಯಲ್ಲ ಎಂದು ಕೆಲ ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)