ಟೆಹರಾನ್: ಇರಾನ್ನಲ್ಲಿ ಕಟ್ಟುನಿಟ್ಟಾದ ಡ್ರೆಸ್ ಕೋಡ್ ಇದೆ. ಮಹಿಳೆಯರು ಬಟ್ಟೆ ಧರಿಸುವ ಬಗ್ಗೆ ಸರ್ಕಾರ ಹಲವು ನಿರ್ಬಂಧಗಳನ್ನು ಹೇರಿದೆ. ಕಳೆದ ಹಲವು ವರ್ಷಗಳಿಂದ ಅಲ್ಲಿನ ಮಹಿಳೆಯರು ಈ ನಿರ್ಬಂಧಗಳ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್(Viral Video) ಆಗಿದ್ದು, ಹಿಜಾಬ್ ವಿರುದ್ಧದ ಪ್ರತಿಭಟನೆಯು ಮತ್ತೊಮ್ಮೆ ತೀವ್ರಗೊಂಡಿದೆ ಎಂಬ ಸಂದೇಶವನ್ನು ನೀಡುವಂತಿದೆ.
ಇದನ್ನು ಓದಿ: ಪಟಾಕಿ ವಿಚಾರಕ್ಕೆ ಜಗಳ.. ಕೋಪಗೊಂಡು ಬಾಲ್ಕನಿಯಿಂದ ಸಿಲಿಂಡರ್ ಎಸೆದ ಭೂಪ; ಮುಂದೇನಾಯ್ತು ನೀವೇ ನೋಡಿ | Viral Video
ವೈರಲ್ ಆಗಿರುವ ವಿಡಿಯೋದಲ್ಲಿ ಹುಡುಗಿಯೊಬ್ಬಳು ಅರೆನಗ್ನ ಸ್ಥಿತಿಯಲ್ಲಿ (ಒಳ ಉಡುಪುಗಳನ್ನು ಧರಿಸಿ) ಸಾರ್ವಜನಿಕ ಸ್ಥಳದಲ್ಲಿ ಓಡಾಡುತ್ತಿರುವುದನ್ನು ಕಾಣಬಹುದು.
ಇರಾನ್‌ನ ಇಸ್ಲಾಮಿಕ್ ಆಜಾದ್ ವಿಶ್ವವಿದ್ಯಾನಿಲಯದಲ್ಲಿ ಶನಿವಾರ(ನವೆಂಬರ್ 2) ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಕಟ್ಟುನಿಟ್ಟಾದ ಇಸ್ಲಾಮಿಕ್ ಡ್ರೆಸ್ ಕೋಡ್ ಅನ್ನು ವಿರೋಧಿಸಿ ವಿದ್ಯಾರ್ಥಿನಿ ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿದ್ದಾಳೆ ಎಂದು ಮೂಲಗಳು ಹೇಳಿವೆ.
ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ವಿದ್ಯಾರ್ಥಿನಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ವಿದ್ಯಾರ್ಥಿನಿ ತೀವ್ರ ಮಾನಸಿಕ ಒತ್ತಡಕ್ಕೆ (ಮಾನಸಿಕ ಆರೋಗ್ಯ ಸಮಸ್ಯೆ) ಒಳಗಾಗಿದ್ದಾರೆ ಎಂಬುದು ತಿಳಿಯಿತು. ಅವರನ್ನು ಮನೋವೈದ್ಯಕೀಯ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆದರೆ ಬಂಧನದ ವೇಳೆ ವಿದ್ಯಾರ್ಥಿನಿಗೆ ಏನಾಯಿತು, ಯಾವ ಪೊಲೀಸ್ ಠಾಣೆಯಲ್ಲಿ ಆಕೆಯನ್ನು ವಿಚಾರಣೆಗೊಳಪಡಿಸಲಾಗಿದೆ ಮತ್ತು ಯಾವ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂಬ ಖಚಿತ ಮಾಹಿತಿಯನ್ನು ಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲ. ತನ್ನ ಪ್ರತಿಭಟನೆಯನ್ನು ದಾಖಲಿಸಲು ಆ ಹುಡುಗಿ ಉದ್ದೇಶಪೂರ್ವಕವಾಗಿ ಈ ರೀತಿ ಮಾಡಿದ್ದಾಳೆ ಎಂದು ಸ್ಥಳೀಯ ಮಾಧ್ಯಮಾಗಳು ತಿಳಿಸಿವೆ.
ಮಾಹಿತಿಯ ಪ್ರಕಾರ, ವಿದ್ಯಾರ್ಥಿನಿ ಬಂಧನದ ಸಮಯದಲ್ಲಿ ದೈಹಿಕ ಮತ್ತು ಲೈಂಗಿಕ ದೌರ್ಜನ್ಯವನ್ನೂ ಎದುರಿಸಿದ್ದಾಳೆ ಎಂದು ವಿವಿಧ ಸಂಘಟನೆಗಳು ಹೇಳಿಕೊಂಡಿವೆ. ಹಲವು ಅಂತಾರಾಷ್ಟ್ರೀಯ ಮಹಿಳಾ ಸಂಘಟನೆಗಳು ಹಾಗೂ ಸಾಮಾಜಿಕ ಸಂಘಟನೆಗಳು ವಿದ್ಯಾರ್ಥಿನಿಯನ್ನು ಕೂಡಲೇ ಹಾಗೂ ಬೇಷರತ್ ಬಿಡುಗಡೆಗೆ ಆಗ್ರಹಿಸಿರುವುದು ಗಮನಾರ್ಹವಾಗಿದೆ. ಇದಕ್ಕೂ ಒಂದು ಕಾರಣವಿದೆ. ಅದೇನೆಂದರೆ ಹಿಜಾಬ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ 2022ರಲ್ಲಿ ಹುಡುಗಿಯೊಬ್ಬಳನ್ನು ಪೊಲೀಸರು ಬಂಧಿಸಿದ್ದರು. ಪೊಲೀಸರ ಲಾಠಿ ಪ್ರಹಾರದಿಂದ ಕಸ್ಟಡಿಯಲ್ಲಿ ಆ ಹುಡುಗಿ ಮೃತಪಟ್ಟಿದ್ದಳು.(ಏಜೆನ್ಸೀಸ್)