Vipers : ಅತ್ಯಂತ ಅಪಾಯಕಾರಿ ಹಾವುಗಳಲ್ಲಿ ವೈಪರ್ ಅಥವಾ ಮಂಡಲ ಹಾವು ಕೂಡ ಒಂದು. ತನ್ನ ಹಾದಿಯಲ್ಲಿ ಎದುರಾಗುವ ಯಾರೇ ಆಗಲಿ ಇದು ಮಿಂಚಿನಂತೆ ಮತ್ತು ಅನಿರೀಕ್ಷಿತವಾಗಿ ದಾಳಿ ಮಾಡುವ ಗುಣವನ್ನು ಹೊಂದಿದೆ. ಅಷ್ಟೇ ಅಲ್ಲ, ಮಂಡಲ ಹಾವು ಕಚ್ಚಿದರೆ ಸಾವು ಖಚಿತ ಎಂಬ ಮಾತಿದೆ. ಈ ವೈಪರ್ ತನ್ನ ದೇಹವನ್ನು 360 ಡಿಗ್ರಿ ತ್ವರಿತವಾಗಿ ತಿರುಗಿಸುವ ಸಾಮರ್ಥ್ಯ ಹೊಂದಿದೆ.
ಅಂದಹಾಗೆ ವೈಪರ್, ನಮ್ಮ ದೇಶದ ಅತ್ಯಂತ ಸಾಮಾನ್ಯ ಹಾವಿನ ಜಾತಿಗಳಲ್ಲಿ ಒಂದಾಗಿದೆ. ಈ ವೈಪರ್‌ಗಳು ಡಿಸೆಂಬರ್ ಮತ್ತು ಜನವರಿ ತಿಂಗಳುಗಳಲ್ಲಿ ಹೆಚ್ಚಾಗಿ ಹೊರಗಿನ ಪ್ರದೇಶಗಳಲ್ಲಿ ಕಂಡುಬರುತ್ತವೆ. ಏಕೆಂದರೆ, ಈ ವೈಪರ್‌ಗಳು ಸಾಮಾನ್ಯವಾಗಿ ಈ ತಿಂಗಳುಗಳಲ್ಲಿ ಮೇಟಿಂಗ್ ಮಾಡುತ್ತವೆ. ಹೀಗಾಗಿ ಗಂಡು ಹಾವುಗಳು, ಹೆಣ್ಣು ಹಾವುಗಳನ್ನು ಹುಡುಕಿಕೊಂಡು ಅಲೆದಾಡುತ್ತವೆ.
ಅಚ್ಚರಿಯ ಸಂಗತಿ ಏನೆಂದರೆ, ಒಂದು ಹೆಣ್ಣು ಹಾವನ್ನು ಮೂರ್ನಾಲ್ಕು ಗಂಡು ಹಾವುಗಳು ಹಿಂಬಾಲಿಸುತ್ತವೆ. ಹೀಗಾಗಿ ಈ ತಿಂಗಳುಗಳಲ್ಲಿ ಇವುಗಳ ಚಲನವಲನ ಅತ್ಯಧಿಕವಾಗಿರುತ್ತದೆ. ಈ ಸಮಯದಲ್ಲಿಯೇ ಮನೆಗಳಲ್ಲಿ ರಾಶಿ ಹಾಕಿರುವ ವಸ್ತುಗಳು, ಕಸದಿಂದ ಆವೃತ್ತವಾಗಿರುವ ಪ್ರದೇಶ ಅಥವಾ ಸ್ವಚ್ಛಗೊಳಿಸಿದೇ ಒಂದೇ ಕಡೆ ಬಿದ್ದಿರುವ ವಸ್ತುಗಳಲ್ಲಿ ಈ ಹಾವುಗಳು ನುಸುಳುವ ಸಾಧ್ಯತೆ ಇರುತ್ತದೆ. ಹೀಗಾಗಿ ನಿಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ತುಂಬಾ ಉತ್ತಮ.
ಆಹಾರದ ತ್ಯಾಜ್ಯಗಳನ್ನು ಮನೆಯ ಹೊರಗೆ ಎಸೆಯುವುದನ್ನು ಸಹ ತಪ್ಪಿಸಬೇಕು. ಇಲ್ಲವಾದರೆ, ವೈಪರ್‌ಗಳಿಗೆ ಬೇಟೆಯಾಡಲು ಅಥವಾ ದಾಳಿ ಮಾಡಲು ಅಡಗಿಕೊಳ್ಳಲು ಸ್ಥಳ ಸಿಕ್ಕಿದಂತಾಗುತ್ತದೆ. ಅಂದಹಾಗೆ ನಾಗರಹಾವು ಸೇರಿದಂತೆ ಇತರ ಹಾವುಗಳು ಮನುಷ್ಯರ ಅಥವಾ ಇತರ ಜೀವಿಗಳ ಹೆಜ್ಜೆಗಳನ್ನು ಕೇಳಿದರೆ ಸಾಕು ಆ ಪ್ರದೇಶದಿಂದ ದೂರ ಸರಿಯುತ್ತವೆ. ಆದರೆ, ವೈಪರ್‌ಗಳು ಭಯದಿಂದ ಹಿಂದೆ ಸರಿಯುವುದಿಲ್ಲ ಬದಲಾಗಿ ಏನಾಗುತ್ತಿದೆ ಎಂಬುದನ್ನು ನೋಡಲು ತಮ್ಮನ್ನು ತಾವು ಮರೆ ಮಾಡಿಕೊಳ್ಳುತ್ತವೆ.
ಮಣ್ಣಿನ ಬಣ್ಣವನ್ನೇ ಹೋಲುವ ಮಂಡಲ ಹಾವನ್ನು ಗುರುತಿಸಲು ಸಹ ಕಷ್ಟವಾಗುತ್ತದೆ. ಮಣ್ಣಿನ ಅಡಿಯಲ್ಲಿ ಅವಿತಿರುವಾಗ ಸುಲಭವಾಗಿ ಕಣ್ಣಿಗೆ ಕಾಣುವುದಿಲ್ಲ. ಗೊತ್ತಿಲ್ಲದೆ ಕಾಲಿಟ್ಟರೆ ಕಚ್ಚುವುದಂತೂ ಖಚಿತ. ನಾಗರಹಾವು ಕಚ್ಚಿದವರನ್ನು ಉಳಿಸಬಹುದು ಆದರೆ, ವೈಪರ್ ಕಡಿತದಿಂದ ಜೀವವನ್ನು ಉಳಿಸುವುದು ತುಂಬಾನೇ ಕಷ್ಟವೆಂದು ವೈದ್ಯರು ಸಹ ಹೇಳುತ್ತಾರೆ. ಹೀಗಾಗಿ ಈ ಎರಡು ತಿಂಗಳಲ್ಲಿ ತುಂಬಾ ಜಾಗರೂಕರಾಗಿರುವುದು ಒಳ್ಳೆಯದು. (ಏಜೆನ್ಸೀಸ್)