ಉತ್ತರಾಖಂಡ: ಅಕ್ರಮ ಮದರಸಾವನ್ನು ಧ್ವಂಸಗೊಳಿಸಿದ ಬೆನ್ನಲ್ಲೇ ನಗರ ಪ್ರದೇಶದಲ್ಲಿ ತೀವ್ರ ಹಿಂಸಾಚಾರ ಭುಗಿಲೆದ್ದಿದ್ದು, ಪೊಲೀಸ್ ಅಧಿಕಾರಿಗಳ ಮೇಲೆ ಕಲ್ಲು ತೂರಿದ್ದಲ್ಲದೆ, ವಾಹನಗಳಿಗೆ ಬೆಂಕಿ ಹಚ್ಚಿರುವ ಘಟನೆ ಉತ್ತರಾಖಂಡದ ಹಲ್ದ್ವಾನಿಯಲ್ಲಿ ವರದಿಯಾಗಿದೆ.
ಇದನ್ನೂ ಓದಿ: ಭಾರತ ತಂಡ ಗೆದ್ದರೂ ಜಂಟಿ ಚಾಂಪಿಯನ್! ಸ್ಯಾಫ್ ಮಹಿಳಾ ಫುಟ್ಬಾಲ್ ಟೂರ್ನಿಯ ಫೈನಲ್ನಲ್ಲಿ ವಿಚಿತ್ರ ತೀರ್ಪು!
ಉತ್ತರಾಖಂಡದ ಹಲ್ದ್ವಾನಿಯಲ್ಲಿ ಅಕ್ರಮ ಮದರಸಾವನ್ನು ಉರುಳಿಸಿದ ಕೆಲವೇ ಗಂಟೆಗಳಲ್ಲಿ ಆಕ್ರೋಶಕ್ಕೊಳಗಾದ ಸ್ಥಳೀಯರು, ಪೊಲೀಸ್ ಅಧಿಕಾರಿಗಳ ಮೇಲೆ ಕಲ್ಲು ತೂರಿ, ಪೊಲೀಸರ ಕಾರು ಸೇರಿದಂತೆ ಇತರೆ ವಾಹನಗಳಿಗೆ ಬೆಂಕಿ ಹಚ್ಚಿ, ಗಲಭೆ ಆರಂಭಿಸಿದ್ದಾರೆ. ಈ ಹಿಂಸಾತ್ಮಕ ಘರ್ಷಣೆಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ.
ಪರಿಸ್ಥಿತಿ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆ ಹಲ್ದ್ವಾನಿಗೆ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಇದಲ್ಲದೆ, ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಹಿರಿಯ ಅಧಿಕಾರಿಗಳೊಂದಿಗೆ ಸಭೆ ಕರೆದಿದ್ದಾರೆ. ಹಲ್ದ್ವಾನಿಯ ಮುನ್ಸಿಪಲ್ ಕಾರ್ಪೊರೇಷನ್ ಬಂಭುಲ್ಪುರ ಪೊಲೀಸ್ ಠಾಣೆ ಬಳಿ ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ನಂಬಲಾದ ಮದರಸಾವನ್ನು ಕೆಡವಲಾಯಿತು. ಈ ಕ್ರಮಕ್ಕೆ ಪ್ರತಿಕ್ರಿಯಿಸಿದ ಸ್ಥಳೀಯರ ಗುಂಪೊಂದು ಪೊಲೀಸ್ ಅಧಿಕಾರಿಗಳ ಮೇಲೆ ಕಲ್ಲು ತೂರಾಟ ನಡೆಸಿದೆ.
ಇದರಿಂದಾಗಿ ಹಲವಾರು ಅಧಿಕಾರಿಗಳಿಗೆ ಗಂಭೀರ ಗಾಯಗಳಾಗಿದ್ದು, ಅನೇಕ ವಾಹನಗಳು ಧ್ವಂಸಗೊಂಡಿವೆ. ದುಷ್ಕರ್ಮಿಗಳು ಟ್ರಾನ್ಸ್‌ಫಾರ್ಮರ್‌ಗೆ ಬೆಂಕಿ ಹಚ್ಚಿದ ಪರಿಣಾಮ ಆ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಕೂಡ ಉಂಟಾಗಿದೆ,(ಏಜೆನ್ಸೀಸ್).