Pahalgam terror attack : ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಪತಿಯನ್ನು ಕಳೆದುಕೊಂಡ ನೌಕಾಪಡೆಯ ಅಧಿಕಾರಿ ವಿನಯ್ ನರ್ವಾಲ್ ಅವರ ಪತ್ನಿ ಹಿಮಾಂಶಿ ಪ್ರಮುಖ ಹೇಳಿಕೆಗಳನ್ನು ನೀಡಿದ್ದಾರೆ.
ವಿನಯ್ ನರ್ವಾಲ್ ಅವರ ಗೌರವಾರ್ಥವಾಗಿ ರಾಷ್ಟ್ರೀಯ ಸಮಗ್ರ ವೇದಿಕೆ ಕಲಾವಿದರು ಮತ್ತು ಕಾರ್ಯಕರ್ತರು ರಕ್ತದಾನ ಶಿಬಿರವನ್ನು ಆಯೋಜಿಸಿದ್ದರು. ಗುರುವಾರ ನಡೆದ ಕಾರ್ಯಕ್ರಮದಲ್ಲಿ ಹಿಮಾಂಶಿ ಕೂಡ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಮುಸ್ಲಿಮರ ಬಗ್ಗೆ ಪ್ರಮುಖ ಹೇಳಿಕೆಗಳನ್ನು ನೀಡಿದರು.
ಕಾಶ್ಮೀರಿಗಳು ಅಥವಾ ಮುಸ್ಲಿಮರ ಬಗ್ಗೆ ತಮಗೆ ಯಾವುದೇ ದ್ವೇಷವಿಲ್ಲ. ನಾವು ಶಾಂತಿಯನ್ನು ಮಾತ್ರ ಬಯಸುತ್ತೇವೆ. ಕೋಮು ಘರ್ಷಣೆಗಳನ್ನು ಕೊನೆಗೊಳಿಸುವಂತೆ ಮನವಿ ಮಾಡಿದ ಹಿಮಾಂಶಿ, ನಮಗೆ ನ್ಯಾಯ ಕೊಡಿಸಿ ಎಂದು ಬಲವಾಗಿ ಒತ್ತಾಯಿಸಿದರು. ಈ ಸಮಯದಲ್ಲಿ ಇಡೀ ದೇಶ ಕೋಪಗೊಂಡಿದೆ. ಆದಾಗ್ಯೂ, ಜನರು ಕಾಶ್ಮೀರಿಗಳು ಅಥವಾ ಮುಸ್ಲಿಮರ ವಿರುದ್ಧ ಹೋಗುವುದನ್ನು ನಾನು ಬಯಸುವುದಿಲ್ಲ. ನಾನು ಶಾಂತಿಯನ್ನು ಮಾತ್ರ ಬಯಸುತ್ತೇನೆ. ತಮ್ಮ ಪತಿ ವಿನಯ್ ನರ್ವಾಲ್ ಕೂಡ ಅದನ್ನೇ ಬಯಸುತ್ತಾರೆ ಎಂದು ಹಿಮಾಂಶಿ ಪ್ರತಿಕ್ರಿಯಿಸಿದ್ದಾರೆ.
ಹಿಮಾಂಶಿ ಗುರುಗ್ರಾಮದ ಪಿಎಚ್‌ಡಿ ವಿದ್ಯಾರ್ಥಿನಿ. ಏಪ್ರಿಲ್ 16 ರಂದು ನೌಕಾಪಡೆಯ ಅಧಿಕಾರಿ ವಿನಯ್ ನರ್ವಾಲ್ ಅವರನ್ನು ವಿವಾಹವಾದರು. ನಂತರ, ಏಪ್ರಿಲ್ 19ರಂದು ಬಹಳ ಅದ್ಧೂರಿಯಾಗಿ ಆರತಕ್ಷತೆ ಕೂಡ ನಡೆಯಿತು. ಬಳಿಕ ಇಬ್ಬರು ತಮ್ಮ ಹನಿಮೂನ್‌ಗಾಗಿ ವಿದೇಶಕ್ಕೆ ಹೋಗಲು ಯೋಜಿಸಿದ್ದರು. ಆದರೆ, ಯೋಜನೆ ಕಾರ್ಯರೂಪಕ್ಕೆ ಬರದ ಕಾರಣ, ಪಹಲ್ಗಾಮ್‌ಗೆ ಪ್ರವಾಸವನ್ನು ಯೋಜಿಸಿದ್ದರು.
ಏಪ್ರಿಲ್ 22 ರಂದು, ಹಿಮಾಂಶಿ ಅವರು ತಮ್ಮ ಪತಿಯೊಂದಿಗೆ ಪಹಲ್ಗಾಮ್ನ ಬೈಸರನ್ ಹುಲ್ಲುಗಾವಲಿನಲ್ಲಿ ಉತ್ತಮ ಸಮಯವನ್ನು ಕಳೆಯುತ್ತಿದ್ದಾಗ, ಬಂದೂಕುಧಾರಿಗಳು ಬಂದೂಕುಗಳಿಂದ ಗುಂಡು ಹಾರಿಸಿದರು. ವಿನಯ್ ನರ್ವಾಲ್‌ಗೆ ಗುಂಡುಗಳು ತಗುಲಿ ಸ್ಥಳದಲ್ಲೇ ಸಾವಿಗೀಡಾದರು. ಹಿಮಾಂಶಿ ತನ್ನ ಗಂಡನ ದೇಹದ ಬಳಿ ಕುಸಿದು ಬಿದ್ದು, ಕಣ್ಣೀರು ಹಾಕಿದರು. ಇದಕ್ಕೆ ಸಂಬಂಧಿಸಿದ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.
ಹರಿಯಾಣದಲ್ಲಿ ಮಿಲಿಟರಿ ಗೌರವಗಳೊಂದಿಗೆ ವಿನಯ್ ನರ್ವಾಲ್ ಅವರ ಅಂತ್ಯಕ್ರಿಯೆ ನಡೆಯಿತು. ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರೊಂದಿಗೆ ಕೇಂದ್ರ ಸಚಿವ ಖಟ್ಟರ್ ಮತ್ತು ಹಲವಾರು ನಾಯಕರು ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಾಂತ್ವಾನ ಹೇಳಿದರು. (ಏಜೆನ್ಸೀಸ್)