ನ್ಯೂಸ್

VIDEO| ಕೆಎಂಎಫ್ ಗೆ ರೈತರು ಪೂರೈಸುವ ಹಾಲಿಗೆ ರಾಜ್ಯಾದ್ಯಂತ ಶೀಘ್ರ ಏಕರೂಪದ ದರ: ಬಾಲಚಂದ್ರ ಜಾರಕಿಹೊಳಿ

ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಲಕ್ಕೆ ಹಾಲು ಪೂರೈಸುವ ರೈತರಿಗೆ ರಾಜ್ಯದೆಲ್ಲೆಡೆ ಏಕರೂಪದ ದರ ನಿಗದಿಪಡಿಸಲಾಗುವುದು ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.

ವಿಜಯವಾಣಿ- ದಿಗ್ವಿಜಯ ನ್ಯೂಸ್ ಗುರುವಾರ ಏರ್ಪಡಿಸಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ರಾಜ್ಯದಲ್ಲಿ ಈಗ ರೈತರು ಪೂರೈಸುತ್ತಿರುವ ಹಾಲಿಗೆ ಒಂದೊಂದು ಕಡೆ ಒಂದೊಂದು ದರ ನೀಡಲಾಗುತ್ತಿದೆ. ಎಲ್ಲ 14 ಒಕ್ಕೂಟಗಳಲ್ಲೂ ಒಂದೇ ದರ ನೀಡಬೇಕೆಂಬ ಬೇಡಿಕೆ ಬಹು ದಿನಗಳಿಂದ ಇದ್ದು, ಆದಷ್ಟು ಶೀಘ್ರವಾಗಿ ಅದನ್ನು ಈಡೇರಿಸಲಾಗುವುದು" ಎಂದರು.

"ಕರೊನಾದಿಂದ ಹಾಲಿನ ಮಾರಾಟ ಪ್ರಮಾಣದ ಮೇಲೆ ಸಾಕಷ್ಟು ಪರಿಣಾಮವಾಗಿದೆ. ಆದರೂ ಗ್ರಾಹಕರಿಗೆ ಮತ್ತು ರೈತರಿಗೆ ತೊಂದರೆ ಆಗದಂತೆ ಕೆಎಂಎಫ್ ಕಾರ್ಯ ನಿರ್ವಹಿಸಿದೆ. ಇದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನೀಡಿದ ಪ್ರೋತ್ಸಾಹವೂ ಒಂದು ಕಾರಣ" ಎಂದು ವಿವರಿಸಿದರು.

"ರೈತರು ಮತ್ತು ನೌಕರರು ಸಂಸ್ಥೆಯ ಎರಡು ಕಣ್ಣುಗಳಿದ್ದಂತೆ. ಕರೊನಾ ಲಾಕ್ ಡೌನ್ ನಲ್ಲಿಯೂ ನಿರಂತರ ಕೆಲಸ ಮಾಡಿದ ಕೆಎಂಎಫ್ ನೌಕರರಿಗೆ ಮತ್ತು ಕಾರ್ಮಿಕರಿಗೆ ಸಂಬಳದ ಜತೆ ಹೆಚ್ಚುವರಿ ಹಣವನ್ನು ನೀಡಲು ಆದೇಶ ಹೊರಡಿಸಲಾಗಿದೆ" ಎಂದು ಹೇಳಿದರು.

ರಾಜ್ಯದ ನಾನಾ ಕಡೆಗಳಿಂದ ಬಂದ ನೂರಾರು ಕರೆಗಳಿಗೆ ಕೆಎಂಎಫ್ ಅಧ್ಯಕ್ಷರು ಸಮರ್ಪಕ ಉತ್ತರಗಳನ್ನು ನೀಡಿದರು. ಫೋನ್ ಇನ್ ಕಾರ್ಯಕ್ರಮದ ಸಂಪೂರ್ಣ ಮಾಹಿತಿ ಶುಕ್ರವಾರದ 'ವಿಜಯವಾಣಿ' ಸಂಚಿಕೆಯಲ್ಲಿ ಪ್ರಕಟವಾಗಲಿದೆ.