ಭ್ರಷ್ಟಾಚಾರದಲ್ಲಿ ಸಿಕ್ಕಿಬೀಳುವ, ಕರ್ತವ್ಯಲೋಪ ಎಸಗುವ, ಜವಾಬ್ದಾರಿ ನಿರ್ಲಕ್ಷಿಸುವ ಅಧಿಕಾರಿ, ಸಿಬ್ಬಂದಿಗೆ ಶಿಕ್ಷೆ ಏನು? ಲೋಕಾಯುಕ್ತ ಹೆಸರೇಳಿಕೊಂಡು ಬ್ಲಾ್ಯಕ್ವೆುೕಲ್ ಮಾಡುವವರ ವಿಚಾರದಲ್ಲಿ ಜನರೇನು ಮಾಡಬೇಕು? ಲೋಕಾಯುಕ್ತಕ್ಕೆ ಎಂತಹ ದೂರನ್ನು ಹೇಗೆ ಸಲ್ಲಿಸಬಹುದು ಹಾಗೂ ಲೋಕಾಯುಕ್ತ ಸಂಸ್ಥೆ ಕಾರ್ಯವೈಖರಿ ಬಗ್ಗೆ ‘ವಿಜಯವಾಣಿ’ ಸಂವಾದದಲ್ಲಿ ಲೋಕಾಯುಕ್ತ ನ್ಯಾ.ಬಿ.ಎಸ್. ಪಾಟೀಲ್ ವಿಸõತವಾಗಿ ಹಂಚಿಕೊಂಡಿದ್ದಾರೆ.
ಬೆಂಗಳೂರು: ಅಡಕೆ ಕದ್ದರೂ ಕಳ್ಳ, ಆನೆ ಕದ್ದರೂ ಕಳ್ಳ. ಆದರೆ, ಶಿಕ್ಷೆ ಪ್ರಮಾಣ ಬೇರೆ ಬೇರೆಯಾಗಿರುತ್ತದೆ. ಲೋಕಾಯುಕ್ತ ಸಂಸ್ಥೆಯ ಬಗ್ಗೆ ಸರ್ಕಾರಿ ಅಧಿಕಾರಿ ಮತ್ತು ಸಿಬ್ಬಂದಿಗೆ ಭಯ ಇದೆ. ಹೀಗಾಗಿಯೇ ಜಾಗರೂಕರಾಗಿರುತ್ತಾರೆ. ತಪ್ಪಿತಸ್ಥ ಅಧಿಕಾರಿ ಮತ್ತು ಸಿಬ್ಬಂದಿ ವಿಚಾರದಲ್ಲಿ ಲೋಕಾಯುಕ್ತ ಸಂಸ್ಥೆ ಕಾರ್ಯವೈಖರಿ ಬಗ್ಗೆ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ವ್ಯಾಖ್ಯಾನಿಸಿದ್ದು ಹೀಗೆ.
ಸಂಸ್ಥೆ ರಾಜ್ಯದ ಹಲವು ಜಿಲ್ಲೆಗಳ ಶಾಲೆ, ಹಾಸ್ಟೆಲ್, ವಸತಿ ಶಾಲೆ, ಆಸ್ಪತ್ರೆಗಳಿಗೆ ಭೇಟಿ ಕೊಡುತ್ತಿದ್ದು, ಅಲ್ಲಿ ಏನೆಲ್ಲ ಸಮಸ್ಯೆಗಳಿವೆ ಎಂಬುದನ್ನು ಗಮನಿಸಲಾಗುತ್ತದೆ. ನಂತರ ವರದಿ ನೀಡುವ ಮುಖೇನ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ವಿವರಿಸಿದರು.
ನನ್ನ ಹೆಸರಲ್ಲೇ ಬ್ಲ್ಯಾಕ್ಮೇಲ್: ನನ್ನ ಹೆಸರೇಳಿ ಕೊಂಡೇ ವ್ಯಕ್ತಿಯೊಬ್ಬ ಸರ್ಕಾರಿ ಅಧಿಕಾರಿ ಬಳಿ ಸುಲಿಗೆಗೆ ಯತ್ನಿಸಿದ್ದ. ಲೋಕಾಯುಕ್ತ ನ್ಯಾಯ ಮೂರ್ತಿ ಬಿ.ಎಸ್. ಪಾಟೀಲ್ ಅವರೇ ಕರೆ ಮಾಡುತ್ತಿದ್ದಾರೆ ನೋಡಿ ಎಂದು ಅವರಿಗೆ ಮೊಬೈಲ್ ತೋರಿಸಿದ್ದ. ಆಗ ಆ ಅಧಿಕಾರಿಗೆ ಅನುಮಾನ ಬಂದು ಗಮನಕ್ಕೆ ತಂದರು. ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದೆ. ಕರೆ ಮಾಡಿದರೆ ಬಿ.ಎಸ್.ಪಾಟೀಲ್ ಲೋಕಾಯುಕ್ತ ನ್ಯಾಯಮೂರ್ತಿ ಎಂದೇ ಹೆಸರು ಬರುವಂತೆ ಸೆಟ್ಟಿಂಗ್ ಮಾಡಿಕೊಂಡಿದ್ದ ಎಂಬ ವಿಚಾರವನ್ನು ಪಾಟೀಲ್ ವಿವರಿಸಿದರು. ಇದೇ ರೀತಿ ಸುಲಿಗೆ ಮಾಡುತ್ತಿದ್ದ ಆಂಧ್ರದ ಒಂದು ತಂಡವನ್ನೂ ಬಂಧಿಸಲಾಯಿತು. ಆರೋಪಿಗಳನ್ನು ಬಂಧಿಸಿದ ಅಧಿಕಾರಿಗಳಿಗೆ ಇತ್ತೀಚೆಗೆ ಲೋಕಾಯುಕ್ತ ಕೇಂದ್ರ ಕಚೇರಿಯಲ್ಲಿ ನಡೆದ ತರಬೇತಿ ಕಾರ್ಯಾಗಾರದಲ್ಲಿ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು. ಲೋಕಾಯುಕ್ತ ಹೆಸರಲ್ಲಿ ಬ್ಲಾ್ಯಕ್ವೆುೕಲ್ ಮಾಡುವ, ಮೋಸ ಮಾಡಲು ಯತ್ನಿಸುವವರ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಬಹುದು. ಆರೋಪಿಗಳನ್ನು ಬಂಧಿಸಲು ನೆರವಾಗಿದ್ದಕ್ಕೆ ಅವರಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಗುವುದು ಎಂದು ಲೋಕಾಯುಕ್ತರು ತಿಳಿಸಿದರು.
ನಮ್ಮಲ್ಲೂ ಮೀರ್ ಸಾದಿಕ್ಗಳಿದ್ದಾರೆ: ದಾಳಿ ಮಾಹಿತಿ ಸೋರಿಕೆ ಮಾಡುವ ಮೀರ್ ಸಾದಿಕ್ಗಳು ನಮ್ಮಲ್ಲೂ ಇದ್ದಾರೆ. ನಮ್ಮ ಅಧಿಕಾರಿಗಳೇ ಬೆದರಿಸಿ ಸುಲಿಗೆ ಮಾಡುವುದು ಕಂಡು ಬಂದರೆ ಅವರನ್ನೂ ಬಂಧಿಸುವಂತೆ ಸೂಚಿಸಲಾಗುವುದು. ಸುಳ್ಳು ದೂರು ನೀಡುವವರ ವಿರುದ್ಧವೂ ಕ್ರಮ ಜರುಗಿಸಲಾಗುತ್ತದೆ. ಅಧಿಕಾರಿಗಳ ವಿರುದ್ಧ ದೂರು ಕೇಳಿ ಬಂದಾಗ ಮಾಹಿತಿ ಕಲೆ ಹಾಕಿದ ನಂತರವೇ ದಾಳಿ ನಡೆಸಲಾಗುವುದು ಎಂದು ಬಿ.ಎಸ್.ಪಾಟೀಲ್ ಹೇಳಿದರು.
ಆಸ್ಪತ್ರೆಗಳಿಗೆ ದಿಢೀರ್ ಭೇಟಿ: ಹಲವು ಸರ್ಕಾರಿ ಆಸ್ಪತ್ರೆಗಳಿಗೆ ದಿಢೀರ್ ಭೇಟಿ ನೀಡಲಾಗಿತ್ತು. ಕೆಲವು ಕಡೆ ಬೆಡ್ ಇನ್ನೂ ಕೆಲವೆಡೆ ಔಷಧ ಇಲ್ಲದಿರುವುದು ಕಂಡು ಬಂತು. ಇಂಡೆಂಟ್ ಹಾಕಿಸಿಕೊಂಡು ಔಷಧ ತರಿಸಿಕೊಂಡಿದ್ದರೂ ಅವುಗಳನ್ನು ಯಾರಿಗೆ ವಿತರಣೆ ಮಾಡಲಾಯಿತು ಎಂಬುದರ ದಾಖಲೆಗಳೇ ಇರಲಿಲ್ಲ. ದಾಖಲೆಗಳು ಇಲ್ಲದಿದ್ದರೆ ಅವ್ಯವಹಾರ ಹೇಗೆ ನಡೆಯುತ್ತದೆ ಎಂದು ಗೊತ್ತಾಗಲ್ಲ. ಸರಿಯಾಗಿ ರಿಜಿಸ್ಟರ್ ನಿರ್ವಹಣೆ ಮಾಡಿರಲಿಲ್ಲ. ಇನ್ನು ಮುಂದೆ ಔಷಧ ಕೊಟ್ಟಿದ್ದರ ಬಗ್ಗೆ ದಾಖಲೆ ಇಡಲು ಕ್ರಮ ಕೈಗೊಳ್ಳಲಾಗಿದೆ. ಲೋಕಾಯುಕ್ತವು ಬರೀ ಪ್ರಕರಣ ದಾಖಲಿಸುವುದಲ್ಲ. ಬದಲಿಗೆ ಏನು ಕ್ರಮ ಆಗಿದೆ? ಏನು ಅನುಷ್ಠಾನ ಆಗಿದೆ ಎಂದು ವರದಿ ಕೊಡಲಾಗುತ್ತದೆ ಎಂದರು.
ಸಮಸ್ಯೆಗಳಿಗೆ ಪರಿಹಾರ: ಬೆಂಗಳೂರಲ್ಲಿ ತಹಸೀಲ್ದಾರ್ ಕಚೇರಿಗಳಲ್ಲಿ ಕಡತ ವಿಲೇವಾರಿ ದೂರುಗಳು ಬಂದ ಹಿನ್ನೆಲೆಯಲ್ಲಿ 8 ತಂಡ ಮಾಡಿ ಒಂದೇ ದಿನ ಪರಿಶೀಲಿಸಿ ವಾರಂಟ್ ಜಾರಿ ಮಾಡಲಾಯಿತು. ಏಕೆ ಕಡತ ವಿಲೇವಾರಿ ಮಾಡುತ್ತಿಲ್ಲ ಎಂದು ನೋಟಿಸ್ ಕೊಡಲಾಯಿತು. ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆಗಳನ್ನು ಪರಿಹರಿಸುವುದಾಗಿ ವರದಿ ಕೊಟ್ಟಿದ್ದಾರೆ. ಅದೇ ರೀತಿ ಸಂಡೂರಿನಲ್ಲಿ ಕಲುಷಿತ ನೀರು ಸೇವಿಸಿ ಕೆಲವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಯಿತು. ನಮ್ಮ ಡಿವೈಎಸ್ಪಿ ಭೇಟಿ ಕೊಟ್ಟು ದುರಂತಕ್ಕೆ ಕಾರಣವೇನು ಎಂಬುದನ್ನು ವಿಚಾರಿಸಿ, ರಿಪೋರ್ಟ್ ಹಾಕಿದರು. ಅದರ ಆಧಾರದ ಮೇಲೆ ಪ್ರಕರಣ ದಾಖಲಿಸಲಾಯಿತು. ಈ ಬಗ್ಗೆ ಅಧಿಕಾರಿಗಳ ವಿವರಣೆ ಕೇಳಲಾಯಿತು ಎಂದು ವಿವರಿಸಿದರು.
ಕ್ರಿಕೆಟ್ ಆಡಲು ಹೋಗಿದ್ದ ಸಿಬ್ಬಂದಿ: ಇತ್ತೀಚೆಗೆ ತಹಸೀಲ್ದಾರ್ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿದಾಗ ಮೂವತ್ತೆಂಟು ಸಿಬ್ಬಂದಿ ಕ್ರಿಕೆಟ್ ಆಡಲು ಹೋಗಿದ್ದರು. ಅವರ್ಯಾರೂ ಅನುಮತಿ ಪಡೆದಿರಲಿಲ್ಲ. ಇದು ಆಡಳಿತ ವೈಫಲ್ಯ ಅಲ್ಲದೇ ಮತ್ತಿನ್ನೇನು? ನಾವು ನೋಟಿಸ್ ನೀಡಿದೆವು. ಇಂತಹ ಕ್ರಮದಿಂದ ಆಡಳಿತದಲ್ಲಿ ಚುರುಕು ತರಲು ಸಾಧ್ಯವಿದೆ. ಅದೇ ರೀತಿ ಭೂ ದಾಖಲೆಗಳು ಮತ್ತು ಸರ್ವೆ ಸೆಟ್ಲಮೆಂಟ್ ಸಹಾಯಕ ನಿರ್ದೇಶಕರ ಕಚೇರಿಗಳಿಗೆ (ಎಡಿಎಲ್ಆರ್) ಭೇಟಿ ನೀಡಲಾಯಿತು. ಅಲ್ಲಿದ್ದ ಸರ್ವೆಯರ್ ಕಡತಗಳನ್ನು ಬಾಕಿ ಇಟ್ಟುಕೊಂಡಿದ್ದ ಬಗ್ಗೆ ಅನೇಕ ದೂರುಗಳು ಬಂದಿದ್ದವು. ಅವರು ತಮಗೆ ವಹಿಸಿದ ಕೆಲಸ ಮಾಡುತ್ತಿರಲಿಲ್ಲ. ನಾವು ಬಿಸಿ ಮುಟ್ಟಿಸಿದ ನಂತರ ಸುಮಾರು 900 ಪ್ರಕರಣ ವಿಲೇವಾರಿ ಮಾಡಿದರು.
ಜಾಗೃತಿ ಮೂಡಿಸಲು ಕರಪತ: ಲೋಕಾಯುಕ್ತ ಕಾಯ್ದೆಯಡಿ ಯಾವೆಲ್ಲ ಪ್ರಕರಣ ದಾಖಲಿಸಬಹುದು ಎಂಬುದನ್ನು ಸಾರ್ವಜನಿಕರಿಗೆ ತಿಳಿಸಿಕೊಡಲು ಕರಪತ್ರ ಹಂಚಲಾಗುತ್ತದೆ. ಅದರಲ್ಲಿರುವ ಅಂಶಗಳನ್ನು ಜನರಿಗೆ ತಿಳಿಸಿ ಹೇಳಲಾಗುತ್ತದೆ. ಲೋಕಾಯುಕ್ತ ವೆಬ್ಸೈಟ್ನಲ್ಲೂ ಕರಪತ್ರ ಮತ್ತು ದೂರಿನ ಅರ್ಜಿ ಇದ್ದು ಸಾರ್ವಜನಿಕರು ಡೌನ್ಲೋಡ್ ಮಾಡಿಕೊಂಡು ಸಲ್ಲಿಸಬಹುದಾಗಿದೆ. ಲೋಕಾಯುಕ್ತ ಅಧಿಕಾರಿಗಳು ತಿಂಗಳಿಗೊಮ್ಮೆ ತಾಲೂಕು ಮಟ್ಟದಲ್ಲಿ ಭೇಟಿ ಕೊಟ್ಟು ಜನರ ಸಮಸ್ಯೆಗಳನ್ನು ಆಲಿಸಬೇಕು ಎಂದು ಸೂಚಿಸಲಾಗಿದೆ. ಅಧಿಕಾರಿಗಳು ಭೇಟಿ ದಿನಾಂಕವನ್ನು ಪತ್ರಿಕೆಯಲ್ಲಿ ಪ್ರಕಟಿಸಬೇಕೆಂದು ಸೂಚಿಸಲಾಗಿದೆ ಎಂದು ಲೋಕಾಯುಕ್ತರು ಮಾಹಿತಿ ಹಂಚಿಕೊಂಡರು.
30 ಬೆಡ್ ಆಸ್ಪತ್ರೆಯಲ್ಲಿ ವೈದ್ಯರಿರಲಿಲ್ಲ: ವಿಜಯಪುರದಿಂದ ಬರುವಾಗ ಹುನುಗುಂದ ಬಳಿಯ ಸರ್ಕಾರಿ ಆಸ್ಪತ್ರೆಗೆ ಹೋಗಿದ್ದೆ. ಆಗ ಒಬ್ಬ ವ್ಯಕ್ತಿ ನನ್ನ ಬಳಿ ಕಣ್ಣೀರು ಹಾಕಿದ. ಸರ್ ಮಡದಿ ಗರ್ಭಿಣಿಯಾಗಿದ್ದು, ಆಸ್ಪತ್ರೆಗೆ ದಾಖಲಿಸಲು ಕರೆತಂದೆ. ಇಲ್ಲಿ ಯಾರೂ ದಾಖಲಿಸಿಕೊಳ್ಳುತ್ತಿಲ್ಲ ಎಂದು ಅಳಲು ತೋಡಿಕೊಂಡ. ಸಿಬ್ಬಂದಿ ವಿಚಾರಿಸಿದಾಗ ಒಂದೂವರೆ ವರ್ಷದಿಂದ ಸ್ತ್ರೀರೋಗ ತಜ್ಞರು ಇಲ್ಲ ಎಂಬ ವಿಚಾರ ತಿಳಿಯಿತು. 30 ಬೆಡ್ಗಳ ಉತ್ತಮ ಸೌಕರ್ಯವುಳ್ಳ ಆಸ್ಪತ್ರೆ ಇದ್ದರೂ ತಜ್ಞರು ಇರದಿದ್ದಕ್ಕೆ ಬೇಸರವಾಯಿತು. ಕೂಡಲೇ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ವಿರುದ್ಧ ಪ್ರಕರಣ ದಾಖಲಿಸಿ, ಖಾಲಿ ಇರುವ ಕಡೆ ವೈದ್ಯರ ನೇಮಕ ಮಾಡಬೇಕೆಂದು ಶಿಫಾರಸು ಮಾಡಿದೆ. 3 ತಿಂಗಳ ಬಳಿಕ ಭೇಟಿ ನೀಡಿದಾಗ ವೈದ್ಯರನ್ನು ನೇಮಿಸಿರುವು ಕಂಡುಬಂತು ಎಂದು ಲೋಕಾಯುಕ್ತರು ನೆನಪಿಸಿಕೊಂಡರು.
770 ಸುಮೋಟೋ ಕೇಸ್: 2022 ಸೆ.10 ರಿಂದ 2024ರ ಅವಧಿಯಲ್ಲಿ 103 ರೇಡ್, 333 ಟ್ರಾ್ಯಪ್ ಮಾಡಲಾಗಿದೆ. ಇತರ 50 ಸೇರಿ ಒಟ್ಟು 486 ಪ್ರಕರಣಗಳ ಕಾರ್ಯಾಚರಣೆ ನಡೆಸಲಾಗಿದೆ. ಒಟ್ಟು 57 ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. 103 ಪ್ರಕರಣ ರದ್ದಾಗಿದೆ. ಒಟ್ಟು 203 ಪ್ರಕರಣ ಇತ್ಯರ್ಥ ಪಡಿಸಲಾಗಿದೆ. ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ ನನ್ನ ಅಧಿಕಾರ ಅವಧಿಯಲ್ಲಿ 770 ಸುಮೋಟೋ ಕೇಸ್ಗಳನ್ನು ಹಾಕಿದ್ದೇವೆ. 15 ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಇದು ಲೋಕಾಯುಕ್ತದ ಮೇಲೆ ಜನರಿಗಿರುವ ನಂಬಿಕೆ ಸೂಚಿಸುತ್ತದೆ ಎಂದು ಲೋಕಾಯುಕ್ತರು ವಿಶ್ವಾಸ ವ್ಯಕ್ತಪಡಿಸಿದರು.