ನ್ಯೂಸ್

ರಿಪಬ್ಲಿಕ್ ಸ್ಟುಡಿಯೋದಲ್ಲಿ 'ವಿಜಯಾನಂದ' ಚಿತ್ರತಂಡ; ಡಿ. 9ರಂದು ಅದ್ಧೂರಿ ಬಿಡುಗಡೆ..

ಬೆಂಗಳೂರು: ವಿಆರ್​​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್​ ಡಾ. ವಿಜಯ ಸಂಕೇಶ್ವರ ಅವರ ಜೀವನಾಧಾರಿತ 'ವಿಜಯಾನಂದ' ಸಿನಿಮಾ ಡಿ. 9ರಂದು ಅದ್ಧೂರಿಯಾಗಿ ಜಗತ್ತಿನಾದ್ಯಂತ ಬಿಡುಗಡೆ ಆಗಲಿದ್ದು, ಈಗಾಗಲೇ ದೇಶಾದ್ಯಂತ ಪ್ರಮೋಷನಲ್ ಇವೆಂಟ್ಸ್​ ಕೂಡ ನಡೆಸಿದೆ.

ವಿಆರ್​ಎಲ್ ಫಿಲಂ ಪ್ರೊಡಕ್ಷನ್ಸ್ ಬ್ಯಾನರ್​ನಲ್ಲಿ, ವಿಆರ್​ಎಲ್​ ಸಮೂಹ ಸಂಸ್ಥೆಗಳ ಎಂಡಿ ಡಾ.ಆನಂದ ಸಂಕೇಶ್ವರ ಅವರು ನಿರ್ವಿುಸಿರುವ ಈ ಸಿನಿಮಾ ಬಹುಭಾಷೆಗಳಲ್ಲಿ ತೆರೆ ಕಾಣಲಿದೆ. ಅಲ್ಲದೆ ಈ ಚಿತ್ರದ ಬಗ್ಗೆ ಈಗಾಗಲೇ ವ್ಯಾಪಕ ಪ್ರಮೋಷನ್ಸ್​ ನಡೆದಿದ್ದು, ಚಿತ್ರತಂಡ ಕರ್ನಾಟಕ ಮಾತ್ರವಲ್ಲದೆ, ದೇಶಾದ್ಯಂತ ಸಂಚರಿಸಿ ಸಿನಿಮಾ ಕುರಿತ ಮಾಹಿತಿಗಳನ್ನು ಹಂಚಿಕೊಂಡಿದೆ.

ಅಹಮದಾಬಾದ್, ಲಖನೌ, ಇಂದೋರ್, ದೆಹಲಿ, ಹೈದರಾಬಾದ್, ಕೊಚ್ಚಿ, ಚೆನ್ನೈ, ಮುಂಬೈಗಳಲ್ಲಿ ಡಾ.ಆನಂದ ಸಂಕೇಶ್ವರ ಅವರ ನೇತೃತ್ವದಲ್ಲಿ ಚಿತ್ರತಂಡ ಸಂಚರಿಸಿದ್ದು, ಈ ಮಹಾನಗರಗಳಲ್ಲಿ ಸುದ್ದಿಗೋಷ್ಠಿ ನಡೆಸಿ ಪ್ರಮೋಷನಲ್ ಇವೆಂಟ್​​ಗಳಲ್ಲಿ ಭಾಗಿಯಾಗಿ ಸಿನಿಮಾ ಕುರಿತ ಆಸಕ್ತಿಕರ ಅಂಶಗಳನ್ನು ಹಂಚಿಕೊಂಡಿದೆ.

ಹೀಗೆ ಮುಂಬೈನಲ್ಲಿ ಭಾಗಿಯಾಗಿದ್ದ ತಂಡವು ಖ್ಯಾತ ಪತ್ರಕರ್ತ ಅರ್ನಾಬ್​ ಗೋಸ್ವಾಮಿ ನೇತೃತ್ವದ ರಿಪಬ್ಲಿಕ್ ಟಿವಿ ಸ್ಟುಡಿಯೋಗೂ ಭೇಟಿ ನೀಡಿದೆ. ಮಾತ್ರವಲ್ಲ, ಅಲ್ಲಿನ ವಿಶೇಷ ಕಾರ್ಯಕ್ರಮದಲ್ಲಿ ಚಿತ್ರತಂಡ ಭಾಗಿಯಾಗಿದೆ. ಈ ಸಂದರ್ಭದಲ್ಲಿ ಡಾ.ಆನಂದ ಸಂಕೇಶ್ವರ ಅವರಿಂದ ಸಿನಿಮಾ ಕುರಿತು ಹಲವು ಸಂಗತಿಗಳನ್ನು ಅರ್ನಾಬ್ ಗೋಸ್ವಾಮಿ ಕೇಳಿ ತಿಳಿದು ಸಂತೋಷ ವ್ಯಕ್ತಪಡಿಸಿದರು. ಅಲ್ಲದೆ ಇಡೀ ಚಿತ್ರತಂಡಕ್ಕೆ ಶುಭ ಕೋರಿ ಸಿನಿಮಾಗೆ ಯಶಸ್ಸು ಹಾರೈಸಿದರು.

ಚಿತ್ರದಲ್ಲಿ ಡಾ. ವಿಜಯ ಸಂಕೇಶ್ವರ ಪಾತ್ರದಲ್ಲಿ ನಿಹಾಲ್ ರಜಪೂತ್ ನಟಿಸಿದ್ದು, ಶ್ರೀಮತಿ ಲಲಿತಾ ಸಂಕೇಶ್ವರ ಪಾತ್ರದಲ್ಲಿ ಸಿರಿ ಪ್ರಹ್ಲಾದ್ ಅಭಿನಯಿಸಿದ್ದಾರೆ. ಡಾ. ಆನಂದ ಸಂಕೇಶ್ವರ ಪಾತ್ರದಲ್ಲಿ ಭರತ್ ಬೋಪಣ್ಣ ಅಭಿನಯಿಸಿದ್ದು, ಉಳಿದಂತೆ ಅನಂತ್ ನಾಗ್, ರವಿಚಂದ್ರನ್, ವಿನಯ ಪ್ರಸಾದ್, ಅರ್ಚನಾ ಕೊಟ್ಟಿಗೆ ಪ್ರಮುಖ ತಾರಾಗಣದಲ್ಲಿದ್ದಾರೆ.