ನ್ಯೂಸ್

ಕರೂರು ಕಾಲ್ತುಳಿತ ದುರಂತ: ಮೃತರ ಕುಟುಂಬಸ್ಥರ ಕಾಲಿಗೆ ಬಿದ್ದು ಕ್ಷಮೆ ಕೋರಿದ ನಟ ವಿಜಯ್​! Karur tragedy

ಚೆನ್ನೈ: ತಮಿಳಗ ವೆಟ್ರಿ ಕಳಗಂ ಪಕ್ಷದ ಸಂಸ್ಥಾಪಕ, ಅಧ್ಯಕ್ಷ ಹಾಗೂ ನಟ ವಿಜಯ್ ಅವರು ಕರೂರು ಕಾಲ್ತುಳಿತ ದುರಂತದಲ್ಲಿ ( Karur tragedy ) ಮೃತಪಟ್ಟವರ ಕುಟುಂಬಸ್ಥರನ್ನು ಮುಖಾಮುಖಿ ಭೇಟಿಯಾಗಿ ಕ್ಷಮೆಯಾಚಿಸಿರುವುದಾಗಿ ವರದಿಯಾಗಿದೆ.

ಸಂತ್ರಸ್ತ ಕುಟುಂಬಸ್ಥರನ್ನು ಮಾಮಲ್ಲಪುರಂನ ಪೂಂಚೇರಿ ಪ್ರದೇಶದ ಖಾಸಗಿ ಹೋಟೆಲ್‌ಗೆ ಕರೆಸಿಕೊಂಡ ನಟ ವಿಜಯ್​, ಕಾಲಿಗೆ ಬಿದ್ದು ಕ್ಷಮೆ ಕೋರಿದ್ದಾರೆ ಎಂದು ಹೇಳಲಾಗಿದೆ. ದುರಂತದ ಬೆನ್ನಲ್ಲೇ ಸಂತ್ರಸ್ತರ ಕುಟುಂಬಗಳನ್ನು ಭೇಟಿ ಮಾಡದಿರಲು ಕಾರಣ ಏನೆಂಬುದನ್ನು ಸಹ ಇದೇ ಸಂದರ್ಭದಲ್ಲಿ ನಟ ವಿಜಯ್ ವಿವರಿಸಿದ್ದಾರೆ.

ದುರಂತ ಸಂಭವಿಸಿದ ಒಂದು ತಿಂಗಳ ನಂತರ, ಅದೇ ದಿನದಂದು ವಿಜಯ್ ಅವರು ಸಂತ್ರಸ್ತರ ಕುಟುಂಬಗಳನ್ನು ಭೇಟಿಯಾಗಿದ್ದಾರೆ. ಸೆಪ್ಟೆಂಬರ್ 27 ರಂದು ಈ ದುರಂತ ಸಂಭವಿಸಿತು. ಸಂತ್ರಸ್ತರ ವೈದ್ಯಕೀಯ ವೆಚ್ಚ, ಶಿಕ್ಷಣ ವೆಚ್ಚ ಇತ್ಯಾದಿಗಳನ್ನು ಭರಿಸುವುದಾಗಿ ವಿಜಯ್ ಸಭೆಯಲ್ಲಿ ಘೋಷಿಸಿದರು.

ಪಕ್ಷದ ಕಾರ್ಯಕರ್ತರು ಈ ಹೋಟೆಲ್‌ನಲ್ಲಿ ಅಗತ್ಯ ವ್ಯವಸ್ಥೆಗಳನ್ನು ಮೊದಲೇ ಮಾಡಿದ್ದರು. ಸಂತ್ರಸ್ತರ ಕುಟುಂಬಸ್ಥರನ್ನು ಕರೂರಿನಿಂದ ಬಸ್ ಮೂಲಕ ಕರೆತರಲಾಗಿತ್ತು. 200ಕ್ಕೂ ಹೆಚ್ಚು ಜನರು ಆಗಮಿಸಿದ್ದರು ಎಂದು ವರದಿಯಾಗಿದೆ. ವಿಜಯ್ ಅವರು ಅವರಿಗೆಲ್ಲ ಆಹಾರ ನೀಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ವಿಜಯ್ ಅವರು ಬೆಳಗ್ಗೆ 9 ರಿಂದ ಸಂಜೆ 6:30 ರವರೆಗೆ ಅವರೊಂದಿಗೆ ಸಮಯ ಕಳೆದರು. ಈ ಮಧ್ಯೆ, ಸಂತ್ರಸ್ತರನ್ನು ಹೋಟೆಲ್‌ಗೆ ಕರೆತಂದಿದ್ದಕ್ಕಾಗಿ ವಿಜಯ್ ವಿರುದ್ಧ ಪಕ್ಷದೊಳಗಡೆಯೇ ಅಸಮಾಧಾನ ಹೆಚ್ಚುತ್ತಿದೆ ಎನ್ನಲಾಗಿದೆ. ಸಂತ್ರಸ್ತರನ್ನು ನೇರವಾಗಿ ಭೇಟಿಯಾಗದೆ ಅವರನ್ನು ಕರೆದು ಸಹಾಯ ನೀಡುವುದು ನಿಜವಾದ ನಾಯಕನ ಕೆಲಸವಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಸಂತ್ರಸ್ತರನ್ನು ಹೋಟೆಲ್​ಗೆ ಕರೆಸಿದ್ದನ್ನೇ ರಾಜಕೀಯ ಅಸ್ತ್ರವಾಗಿ ಇತರೆ ಪಕ್ಷಗಳು ಬಳಸಿಕೊಳ್ಳುತ್ತವೆ ಎಂಬ ಆತಂಕವೂ ಕಾರ್ಯಕರ್ತರಲ್ಲಿ ಇದೆ.

ಅಂದಹಾಗೆ, ತಮಿಳು ನಾಯಕ ವಿಜಯ್ ತಮ್ಮ ಟಿವಿಕೆ ಪಕ್ಷದ ಪರವಾಗಿ ಸೆ.27ರಂದು ಆಯೋಜಿಸಿದ್ದ ಸಾರ್ವಜನಿಕ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ಆಹಾರ ಅಥವಾ ನೀರಿಲ್ಲದೆ ಸಾವಿರಾರು ಜನರು ಗಂಟೆಗಟ್ಟಲೆ ಬಿಸಿಲಿನಲ್ಲಿ ಕಾದಿದ್ದರಿಂದ ಉದ್ವಿಗ್ನತೆ ಉಂಟಾಗಿತ್ತು. ವಿಜಯ್​ ಆಗಮಿಸಿ, ಮಾತನಾಡಿ ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಕಾಲ್ತುಳಿತ ಸಂಭವಿಸಿ 40 ಜನರು ಸಾವಿಗೀಡಾಗಿದರು. ಅಲ್ಲದೆ, ಹಲವಾರು ಮಂದಿ ಗಂಭೀರವಾಗಿ ಗಾಯಗೊಂಡರು. (ಏಜೆನ್ಸೀಸ್​)