ಕೊಲ್ಕತಾ : ಕರೊನಾ ಬಗೆಗಿನ ಆತಂಕದ ನಡುವೆಯೂ ದೇಶದ ನಾಲ್ಕು ರಾಜ್ಯಗಳಲ್ಲಿ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯ ಸಿದ್ಧತೆ ಭರದಿಂದ ಸಾಗಿದೆ. ಪಶ್ಚಿಮ ಬಂಗಾಳದಲ್ಲಿ ಮುಂಬರುವ ಚುನಾವಣೆಗೆ ಎಲ್ಲಾ ಪಕ್ಷಗಳೂ ಭಾರೀ ಮಟ್ಟದಲ್ಲಿ ಪ್ರಚಾರ ಸಭೆಗಳನ್ನು ನಡೆಸುತ್ತಿವೆ.
ಬಿಜೆಪಿ ಪರ ಸ್ಟಾರ್ ಕಾಂಪೇನರ್ ಆದ ಪ್ರಧಾನಿ ನರೇಂದ್ರ ಮೋದಿ ಕೂಡ ಹಲವು ಪ್ರಚಾರ ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಇಂದು ಬಂಗಾಳದ ಬಂಕುರಾದಲ್ಲಿ ಅಂಥದ್ದೊಂದು ಬೃಹತ್ ರಾಲಿಯಲ್ಲಿ ಭಾಗವಹಿಸಲು ತೆರಳಿದಾಗ, ನೆರೆದಿದ್ದ ಜನಸ್ತೋಮವನ್ನು ನೋಡಿ ಮೂಕವಿಸ್ಮಿತರಾಗಿರುವ ಮೋದಿ, ಆ ದೃಶ್ಯವನ್ನು ಸೆರೆಹಿಡಿದಿದ್ದಾರೆ.
ಸಾವಿರಾರು ಜನರು ಚುನಾವಣಾ ಸಭೆಯಲ್ಲಿ ಮೋದಿ ಅವರ ಆಗಮನವನ್ನು ಕಾಯುತ್ತಿರುವುದು, ಕಾರ್ಯಕ್ರಮದ ಸ್ಥಳಕ್ಕೆ ದೂರದೂರದಿಂದ ತಂಡೋಪತಂಡವಾಗಿ ಜನರು ನಡೆದು ಬರುತ್ತಿರುವುದು ಹೆಲಿಕಾಪ್ಟರ್ನಿಂದ ತೆಗೆದಿರುವ ವಿಡಿಯೋ ತುಣುಕಿನಲ್ಲಿ ದಾಖಲಾಗಿದೆ. ಈ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ 'ಬಂಕುರಾ ರಾಲಿಯ ಕೆಲವು ಕ್ಷಣಗಳ ಮುನ್ನ... ಈ ಉತ್ಸಾಹದಿಂದ ನಾನು ವಿನಮ್ರಗೊಂಡಿದ್ದೇನೆ' ಎಂದು ಟಿಪ್ಪಣಿ ಬರೆದು, ಪ್ರಧಾನಿ ಮೋದಿ ಶೇರ್ ಮಾಡಿದ್ದಾರೆ. (ಏಜೆನ್ಸೀಸ್)