ಮುಂಬೈ: ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಹೃದಯ ಸಂಬಂಧಿ ಖಾಯಿಲೆಗಳು ಹೆಚ್ಚಾಗಿ ಬಾಧಿಸುತ್ತಿದ್ದು, ವಿಡ್ ಬಳಿಕ ಹಾರ್ಟ್ ಅಟ್ಯಾಕ್ ಪ್ರಕರಣಗಳು ತೀರಾ ಹೆಚ್ಚಿದ್ದು, ಮಕ್ಕಳು, ಯುವಕರು, ವೃದ್ಧರು ಅನ್ನೋ ವ್ಯತ್ಯಾಸವಿಲ್ಲದೆ ಎಲ್ಲಾ ವಯೋಮಾನದವರು ಹೃದಯಾಘಾತಕ್ಕೆ ತುತ್ತಾಗುತ್ತಿದ್ದಾರೆ. ಇದೀಗ ಯುವಕನೋರ್ವ ಕ್ರಿಕೆಟ್ ಆಡುತ್ತಿರುವಾಗಲೇ ಹೃದಯಾಘಾತಕ್ಕೆ ತುತ್ತಾಗಿ ಕೊನೆಯುಸಿರೆಳೆದಿರುವ ಘಟನೆ ಮಹರಾಷ್ಟ್ರದ ರಾಜಧಾನಿ ಮುಂಬೈನ ಮೀರಾ ರೋಡ್ನಲ್ಲಿ ನಡೆದಿದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕ್ರಿಕೆಟ್ ಆಡುತ್ತಿದ್ದ ಸಂದರ್ಭದಲ್ಲಿ ಉತ್ತಮ ಬ್ಯಾಟಿಂಗ್ ಮಾಡುತ್ತಾ ಸಿಕ್ಸರ್ ಬಾರಿಸಿ, ಆ ಖುಷಿಯನ್ನು ಸಂಭ್ರಮಿಸುತ್ತಿರುವಾಗಲೇ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಈ ವಿಡಿಯೋವನ್ನು ಎ.ಎಚ್. ಸಿದ್ದಿಕ್ಕಿ ಎಂಬುವವರು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಆರ್ಸಿಬಿ ಆಟಗಾರ ಆಡಿದಂತಹ ಆ ಮಾತುಗಳೇ ಸ್ಪೋಟಕ ಬ್ಯಾಟಿಂಗ್ಗೆ ಸ್ಪೂರ್ತಿ; ಎಸ್ಆರ್ಎಚ್ ಆಟಗಾರನ ಹೇಳಿಕೆ ವೈರಲ್
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಮೀರಾ ರೋಡ್ನ ಕಾಶಿಮೀರಾ ಪ್ರದೇಶದ ಟರ್ಫ್ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದಾಗ ಯುವಕನಿಗೆ ಹೃದಯಾಘಾತವಾಗಿದೆ. ಕಂಪನಿ ವತಿಯಿಂದ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದ ಯುವಕ ಉತ್ತಮವಾಗಿ ಕ್ರಿಕೆಟ್ ಆಡುತ್ತಿದ್ದ ಯುವಕ ಸಿಕ್ಸರ್ ಬಾರಿಸಿ ಸುಸ್ತಾಗಿ ನಿಂತಿದ್ದಾನೆ. ಈ ವೇಳೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾನೆ. ಕೂಡಲೇ ಸಹ ಆಟಗಾರರು ಆತನನ್ನು ಆಸ್ಪತ್ರೆಗೆ ದಾಖಲಿಸಿದರಾದರು ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಮರಣೋತ್ತರ ಪರೀಕ್ಷೆಯ ವರದಿ ಕೈ ಸೇರಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.