ನ್ಯೂಸ್

ಹೊಸ ಆವೃತ್ತಿಯ ಐಫೋನ್ -17 ಖರೀದಿಸಲು ಆ್ಯಪಲ್ ಸ್ಟೋರ್​ ಬಳಿ ಬಡಿದಾಡಿಕೊಂಡ ಗ್ರಾಹಕರು! Apple Store

Apple Store : ನೂತನ ಐಫೋನ್​ ಸರಣಿ ಐಫೋನ್ -17 ಅನ್ನು ಖರೀದಿಸಲು ಬಂದಿದ್ದ ಅನೇಕ ಗ್ರಾಹಕರು ಅಥವಾ ತಂತ್ರಜ್ಞಾನ ಉತ್ಸಾಹಿಗಳು ಪರಸ್ಪರ ಬಡಿದಾಡಿಕೊಂಡ ಘಟನೆ ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಆ್ಯಪಲ್ ಸ್ಟೋರ್​ನಲ್ಲಿ ಶುಕ್ರವಾರ (ಸೆ.19) ಬೆಳಗ್ಗೆ ನಡೆದಿದೆ.

ಪಿಟಿಐ ಸುದ್ದಿ ಸಂಸ್ಥೆ ಹಂಚಿಕೊಂಡಿರುವ ವಿಡಿಯೋದಲ್ಲಿ, ಆ್ಯಪಲ್ ಸ್ಟೋರ್ ಹೊರಗೆ ಕಿಕ್ಕಿರಿದು ಸೇರಿದ್ದ ನೂರಾರು ಸಂಖ್ಯೆಯ ಗ್ರಾಹಕರು ಪರಸ್ಪರ ಬಡಿದಾಡಿಕೊಳ್ಳುತ್ತಿರುವ ದೃಶ್ಯವನ್ನು ತೋರಿಸಲಾಗಿದೆ. ಅಲ್ಲದೆ, ಆ ಗುಂಪಿನಲ್ಲಿ ಕೆಂಪು ಟೀ-ಶರ್ಟ್ ಧರಿಸಿದ್ದ ಓರ್ವ ವ್ಯಕ್ತಿಯನ್ನು ಸಮವಸ್ತ್ರ ಧರಿಸಿದ ಭದ್ರತಾ ಸಿಬ್ಬಂದಿ ಅಲ್ಲಿಂದ ಹೊರಗೆ ಎಳೆದೊಯ್ಯುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ.

ಇದಿಷ್ಟೇ ಅಲ್ಲದೆ, ವಿಡಿಯೋದಲ್ಲಿ ಬಿಳಿ ಶರ್ಟ್ ಧರಿಸಿದ ಮತ್ತೊಬ್ಬ ಗ್ರಾಹಕ ಮಧ್ಯಪ್ರವೇಶಿಸಿ, ಭದ್ರತಾ ಸಿಬ್ಬಂದಿಯ ಯೋಗಕ್ಷೇಮ ವಿಚಾರಿಸುತ್ತಾನೆ. ಆದರೆ, ಅಕ್ಕಪಕ್ಕದಲ್ಲಿ ಮಾತ್ರ ಘರ್ಷಣೆಗಳು ನಡೆಯುತ್ತಲೇ ಇರುತ್ತವೆ. ಇದೇ ವೇಳೆ ಸಿಬ್ಬಂದಿಯೊಬ್ಬರು ಲಾಠಿ ಎತ್ತಿ ಗ್ರಾಹಕರನ್ನು ನಿಯಂತ್ರಿಸಲು ಪ್ರಯತ್ನಿಸುತ್ತಾರೆ. ಇದರ ನಡುವೆ ಕಪ್ಪು-ಬಿಳುಪು ಶರ್ಟ್ ಧರಿಸಿದ ಓರ್ವ ಗ್ರಾಹಕನನ್ನು ಜನಸಂದಣಿಯಿಂದ ಎಳೆದೊಯ್ದು ದೂರ ತಳ್ಳಲಾಗುತ್ತದೆ. ಈ ಬಾರಿ ಯುದ್ಧ ಸಮವಸ್ತ್ರದಲ್ಲಿರುವ ಸಶಸ್ತ್ರ ಸಿಬ್ಬಂದಿ ಆ ಗ್ರಾಹಕನನ್ನು ಜನಸಂದಣಿಯಿಂದ ಎಳೆದುಕೊಂಡು ಹೋಗುತ್ತಾರೆ. ಸ್ಥಳದಲ್ಲಿ ಭಾರಿ ಹೈಡ್ರಾಮ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಅಂದಹಾಗೆ, ಆ್ಯಪಲ್ ತನ್ನ ಹೊಸದಾಗಿ ಬಿಡುಗಡೆಯಾದ ಐಫೋನ್ 17 ಸರಣಿಯ ಮಾರಾಟವನ್ನು ಭಾರತದಾದ್ಯಂತ ಪ್ರಾರಂಭಿಸಿದೆ. ಇದು ಮುಂಬೈ ಮತ್ತು ದೆಹಲಿಯ ಪ್ರಮುಖ ಅಂಗಡಿಗಳ ಹೊರಗೆ ಹೆಚ್ಚಿನ ಜನಸಂದಣಿ ಮತ್ತು ದೀರ್ಘ ಸರತಿ ಸಾಲುಗಳನ್ನು ಸೃಷ್ಟಿಸಿದೆ. ಮುಂಬೈನಲ್ಲಿ ನಡೆದ ಈ ಘರ್ಷಣೆಗೆ ಸೂಕ್ತ ಭದ್ರತೆಯ ಕೊರತೆಯೇ ಕಾರಣ ಎಂದು ಕೆಲವು ಖರೀದಿದಾರರು ANI ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಅಹಮದಾಬಾದ್‌ನಿಂದ ಬಂದ ಖರೀದಿದಾರ ಮೋಹನ್ ಯಾದವ್, ಬೆಳಗ್ಗೆ 5 ಗಂಟೆಯಿಂದ ಕಾಯುತ್ತಿದ್ದೆ ಮತ್ತು ಅನೇಕ ಜನರು ಸರತಿ ಸಾಲುಗಳನ್ನು ಮುರಿಯಲು ಪ್ರಯತ್ನಿಸಿದರು. ಇದರಿಂದ ಪ್ರವೇಶದ್ವಾರದಲ್ಲಿ ಅವ್ಯವಸ್ಥೆಗೆ ಕಾರಣವಾಯಿತು ಎಂದಿದ್ದಾರೆ. ನಾನು ಬೆಳಿಗ್ಗೆಯಿಂದ ಕಾಯುತ್ತಿದ್ದೇನೆ. ಸರತಿ ಸಾಲಿನಲ್ಲಿ ನಿಂತಿದ್ದೇನೆ ಆದರೆ, ಇಲ್ಲಿನ ಭದ್ರತಾ ಸಿಬ್ಬಂದಿಗೆ ಯಾವುದೇ ಜವಾಬ್ದಾರಿ ಇಲ್ಲ. ಜನರು ಸಾಲುಗಳನ್ನು ಮುರಿದನು ಸುಮ್ಮನಿದ್ದರು. ಭದ್ರತಾ ಅಧಿಕಾರಿಗಳ ಜವಾಬ್ದಾರಿಯ ಕೊರತೆಯಿಂದಾಗಿ ಹಿಂದೆ ನಿಂತಿರುವವರಿಗೆ ಉತ್ಪನ್ನವನ್ನು ಖರೀದಿಸಲು ಅವಕಾಶ ಸಿಗುತ್ತಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.

ಇನ್ನು ನವದೆಹಲಿಯ ಸಾಕೇತ್‌ನಲ್ಲಿರುವ ಸೆಲೆಕ್ಟ್ ಸಿಟಿವಾಕ್ ಮಾಲ್‌ನಲ್ಲಿರುವ ಆ್ಯಪಲ್ ಮಳಿಗೆಯ ಹೊರಗೂ ಇದೇ ರೀತಿಯ ಜನದಟ್ಟಣೆ ಕಂಡುಬಂದಿತು. ಅಲ್ಲಿ ಖರೀದಿದಾರರು ಹೊಸ ಐಫೋನ್‌ಗಳನ್ನು ಪಡೆಯಲು ರಾತ್ರಿಯಿಡೀ ಕಾಯುತ್ತಿದ್ದರು. ಹೊಸ ಐಫೋನ್ ಸರಣಿ ಖರೀದಿಸುವ ಮೊದಲಿಗರಲ್ಲಿ ಒಬ್ಬರಾಗಲು ಮಾಲ್ ತೆರೆಯುವವರೆಗೆ ಜನರು ರಸ್ತೆಯ ಹೊರಗೆ ಸರತಿ ಸಾಲಿನಲ್ಲಿ ನಿಂತಿದ್ದರು. ಬೆಂಗಳೂರಿನ ಆ್ಯಪಲ್ ಅಂಗಡಿಯಲ್ಲೂ ಇದೇ ರೀತಿಯ ಅಸ್ತವ್ಯಸ್ತ ಕಂಡುಬಂದಿತು.

ಅಂದಹಾಗೆ, ಆ್ಯಪಲ್ ಕಂಪನಿಯು ಸಾಮಾನ್ಯ ಐಫೋನ್ 17 ಮತ್ತು ಹೊಚ್ಚ ಹೊಸ ಐಫೋನ್ ಏರ್ ಜೊತೆಗೆ ಟಾಪ್ ಮಾಡೆಲ್‌ಗಳಾದ ಐಫೋನ್ 17 ಪ್ರೊ ಮತ್ತು ಪ್ರೊ ಮ್ಯಾಕ್ಸ್ ಅನ್ನು ಬಿಡುಗಡೆ ಮಾಡಿದೆ. ಬೆಲೆಗಳು 82,900 ರೂ.ಗಳಿಂದ 2.3 ಲಕ್ಷ ರೂ.ಗಳವರೆಗೆ ಇವೆ. (ಏಜೆನ್ಸೀಸ್​)