ರಾಯ್ಪುರ: 'ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ...' ಎಂಬ ಗೀತೆ ಕೇಳಿದಂತೆಯೇ ಕನ್ನಡಪ್ರೇಮಿಗಳಲ್ಲಿ ರೋಮಾಂಚನವಾಗುವುದುಂಟು. ಕರ್ನಾಟಕದ ನಾಡಗೀತೆಯಾದ ಈ ಹಾಡಿನ ಮಾದರಿಯಲ್ಲಿ ದೇಶದ ಇತರ ರಾಜ್ಯಗಳಿಗೂ ರಾಜ್ಯಗೀತೆಗಳಿರುವುದು ಸರಿಯಷ್ಟೆ. ನವರಾಜ್ಯವಾದ ಛತ್ತೀಸಗಡದ 'ರಾಜ್ ಗೀತ್'ಅನ್ನು ಕೇಳುವ ಅವಕಾಶ ಇದೀಗ ಜಗತ್ತಿನ ವಿವಿಧೆಡೆಯ ನೆಟ್ಟಿಗರಿಗೆ ಸಿಕ್ಕಿದೆ.
ಛತ್ತೀಸಗಡದ ಸಿಎಂ ಭೂಪೇಶ್ ಬಘೇಲ್ ಅವರು ಬಾಲಕನೊಬ್ಬ ರಾಜ್ಯಗೀತೆಯನ್ನು ಹಾಡಿರುವ ವಿಡಿಯೋ ತುಣುಕನ್ನು ಇತ್ತೀಚೆಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ "ಅರ್ಪಾ ಪೈರೀ ಕೆ ಧಾರ್, ಮಹಾನದೀ ಹೇ ಅಪಾರ್...' ಎಂಬ ಸುಮಧುರ ನಾದವುಳ್ಳ ಗೀತೆಯನ್ನು ಅಂಧ ಬಾಲಕನೊಬ್ಬ ಹಾಡಿರುವುದು ವಿಶೇಷ. "ಈ ಬಾಲಕನ ಹಾಡನ್ನು ಕೇಳುತ್ತಲೇ ಇರೋಣ ಎನ್ನಿಸುತ್ತಿದೆ" ಎಂದು ಬರೆದಿರುವ ಸಿಎಂ ಭೂಪೇಶ್ ಬಘೇಲ್ ಅವನಿಗೆ ಶುಭ ಹಾರೈಸಿದ್ದಾರೆ.
"ಮೈಸೆಲ್ಫ್ ಧರ್ಮೇಂದ್ರ ದಾಸ್ ಮಹಂತ್" ಎಂದು ಪರಿಚಯ ಮಾಡಿಕೊಂಡು ಸುಶ್ರಾವ್ಯವಾಗಿ ಹಾಡುವ ಈ ಬಾಲಕ, ರಾಜ್ಯದ ಜಂಜ್ಗೀರ್-ಚಂಪಾ ಜಿಲ್ಲೆಯ ಅಂಧರ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದಾನೆ. ವೈರಲ್ ಆಗಿ ಸಹಸ್ರಾರು ವೀಕ್ಷಣೆಗಳನ್ನು ಪಡೆದಿರುವ ಈ ವಿಡಿಯೋ ತುಣುಕು ನೆಟ್ಟಿಗರ ಮೆಚ್ಚುಗೆ ಗಳಿಸಿದೆ. (ಏಜೆನ್ಸೀಸ್)