

ಮುಂಬೈ: 'ಛೋರೀ' ಹಿಂದಿ ಚಿತ್ರದಲ್ಲಿ ಪ್ರಭಾವೀ ನಟನೆಯೊಂದಿಗೆ ಮೆಚ್ಚುಗೆಗೆ ಪಾತ್ರರಾಗಿರುವ ಬಾಲಿವುಡ್ನ ಯುವತಾರೆ, ನುಸ್ರತ್ ಬರೂಚ. ಈ ಚಿತ್ರದಲ್ಲಿ ಎಂಟು ತಿಂಗಳ ಗರ್ಭಿಣಿಯ ಪಾತ್ರ ಮಾಡಿರುವ ನುಸ್ರತ್, ತಾವು ಈವರೆಗೆ ಮಾಡಿದ ಚಿತ್ರಗಳಲ್ಲಿ ಅತ್ಯಂತ ಕ್ಲಿಷ್ಟವಾದ ಚಿತ್ರ ಇದಾಗಿತ್ತು ಎಂದಿದ್ದಾರೆ.
ಇದು ಹೆಣ್ಣುಮಕ್ಕಳ ಹತ್ಯೆಯ ಸಾಮಾಜಿಕ ಪಿಡುಗಿನ ಬಗ್ಗೆ ಹಾರರ್ ಮಿಶ್ರಣ ಮಾಡಿ ತೆಗೆದಿರುವ ಸಸ್ಪೆನ್ಸ್ ಥ್ರಿಲ್ಲರ್. 2017ರ ಲಾಪಾಛಪೀ ಚಿತ್ರದ ರೀಮೇಕ್ ಆಗಿದ್ದರೂ ಆಕರ್ಷಕ ಚಿತ್ರೀಕರಣದೊಂದಿಗೆ ಒಟಿಟಿ ಪ್ರೇಕ್ಷಕರ ಮನ ಗೆದ್ದಿದೆ. ಅಮೇಜಾನ್ ಪ್ರೈಂನಲ್ಲಿ ನ.26 ಕ್ಕೆ ಬಿಡುಗಡೆಗೊಂಡ ವಿಶಾಲ್ ಫೂರಿಯಾ ನಿರ್ದೇಶನದ ಈ ಚಿತ್ರದಲ್ಲಿ ನಾಯಕಿ ನುಸ್ರತ್ ಮೊದಲಿನಿಂದ ಕೊನೆಯವರೆಗೆ ಕೇಂದ್ರಬಿಂದುವಾಗಿದ್ದಾರೆ.
ಈ ಚಿತ್ರದಲ್ಲಿ ನಟಿಸಲು ತಾವು ಬಹಳಷ್ಟು ತಯಾರಿ ಮಾಡಿಕೊಂಡಿದ್ದಾಗಿ ಅವರು ಹೇಳಿದ್ದಾರೆ. "ಗರ್ಭಿಣಿ ಮಹಿಳೆಯ ಪಾತ್ರದಲ್ಲಿ ನಟಿಸುವುದು ತುಂಬಾ ಕಷ್ಟವಾಗಿತ್ತು" ಎಂದಿರುವ ನುಸ್ರತ್, ಗರ್ಭಿಣಿಯರ ಮ್ಯಾನರಿಸಂಗಳನ್ನು ಮತ್ತು ಪೋಸ್ಚರ್ಗಳನ್ನು ಅರ್ಥೈಸಿಕೊಳ್ಳಲು ತಾವು ಹಲವು ದಿನ ಮನೆಯಲ್ಲಿ ಬಾಡಿಸೂಟ್ ಹಾಕಿಕೊಂಡು ಓಡಾಡಿದ್ದಾಗಿ ವಿವರಿಸಿದ್ದಾರೆ. (ಏಜೆನ್ಸೀಸ್)