ನ್ಯೂಸ್

ಕೆಜಿಎಫ್​, ಪುಷ್ಪನಂತಹ ಚಿತ್ರಗಳು... ಸೌತ್​ ಸಿನಿ ಇಂಡಸ್ಟ್ರಿಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ Rakesh Roshan

ಮುಂಬೈ: ಕಳೆದ ಕೆಲ ವರ್ಷಗಳಿಂದ ಸೌತ್​​ ಸಿನಿಮಾಗಳು ವಿಶ್ವದಾದ್ಯಂತ ಸಾಕಷ್ಟು ಜನಮನ್ನಣೆ ಗಳಿಸುತ್ತಿದ್ದು, ಬಾಕ್ಸ್​ಆಫೀಸ್​ನಲ್ಲಿ ಧೂಳೆಬ್ಬಿಸಿದೆ. ಕೆಜಿಎಫ್​ ಹಾಗೂ ಪುಷ್ಪ ಭಾಗ 1 ಮತ್ತು 2 ಇದಕ್ಕೆ ಜೀವಂತ ನಿದರ್ಶನವಾಗಿದ್ದು, ಬಾಲಿವುಡ್​ ಸ್ಟಾರ್ ನಟರ ಸಿನಿಮಾಗಳು ಕೂಡ ಸೌತ್​ ಚಿತ್ರಗಳ ಮುಂದೆ ಮಂಡಿಯೂರಿದ್ದವು. ಆದರೆ, ಬಾಲಿವುಡ್​ ಮಂದಿಗೆ ಈ ವಿಚಾರ ಇನ್ನೂ ನಿದ್ದೆಗೆಡಿಸಿದ್ದು, ಇದಕ್ಕೆ ಹೃತಿಕ್​ ರೋಷನ್​ ಅವರ ತಂದೆ ರಾಕೇಶ್​ (Rakesh Roshan) ನೀಡಿರುವ ಹೇಳಿಕೆಯೇ ಉತ್ತಮ ಉದಾಹರಣೆಯಾಗಿದೆ.

ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ರಾಕೇಶ್ (Rakesh Roshan)​, ದಕ್ಷಿಣ ಭಾರತದ ಸಿನಿಮಾಗಳು ಹಳೆಯ ಟ್ರೆಂಡ್​ಅನ್ನು ಫಾಲೋ ಮಾಡುತ್ತಿದ್ದು, ಯಾವುದೇ ಹೊಸ ಮಾರ್ಗ ಅನ್ವೇಷಿಸದೆ, ಏಳ್ಗೆ ಕಾಣದ ಕಾರಣ ಯಶಸ್ವಿಯಾಗಿದ್ದಾರೆ. ನಾವು ಹೊಸ ಮಾರ್ಗಗಳನ್ನು ಕಂಡುಕೊಂಡಿದ್ದೇವೆ. ಸವಾಲುಗಳನ್ನು ಸ್ವೀಕರಿಸಿದ್ದೇವೆ. ಆದರೆ, ಅವರಿಂದ ಇದು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.

ಉದಾಹರಣೆಗೆ ಕ ಹೋನಾ ಪ್ಯಾರ್ ಹೇ ಬಳಿಕ ನಾನು ಕೋಹಿ ಮಿಲ್ ಗಯಾ ಸಿನಿಮಾ ಮಾಡಿದೆ. ರೋಹಿತ್​ನನ್ನು ಸೂಪರ್​ ಹೀರೋ ಮಾಡಿದೆ. ನಾವು ಈ ರೀತಿಯ ಸವಾಲನ್ನು ನಾವು ಸ್ವೀಕರಿಸಿದ್ದೇವೆ. ಅವರಿಗೆ ಇದು ಸಾಧ್ಯವಾಗುತ್ತಿಲ್ಲ. ಅವರು ಸೇಫ್ ಆಗಿ ಆಡುತ್ತಿದ್ದಾರೆ ಎಂದು ಹೇಳುವ ಮೂಲಕ ಹೃತಿಕ್​ ರೋಷನ್​ ಅವರ ತಂದೆ ರಾಕೇಶ್​ (Rakesh Roshan) ವಿವಾದದ ಕಿಡಿಯನ್ನ ಹೊತ್ತಿಸಿದ್ದಾರೆ.

2024ರ ಡಿಸೆಂಬರ್​ 05ರಂದು ಬಿಡುಗಡೆಯಾಗಿ ಬಾಕ್ಸ್​ಆಫೀಸ್​ನಲ್ಲಿ ಧೂಳೆಬ್ಬಿಸಿದ್ದ ಪುಷ್ಪ-2 ಚಿತ್ರವು ಸಾವಿರ ಕೋಟಿಗೂ ಅಧಿಕ ಮೊತ್ತವನ್ನು ಬಾಚುವ ಮೂಲಕ ಬಾಕ್ಸ್​ಆಫೀಸ್​ನಲ್ಲಿ ಧೂಳೆಬ್ಬಿಸಿತ್ತು. ಇದೀಗ ರಾಕೇಶ್​ ರೋಷನ್​ ನೀಡಿರುವ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗಿದ್ದು, ಹಿಂದಿ ಚಿತ್ರಗಳಲ್ಲಿ ಸಾಂಗ್, ಫೈಟ್​ ಬಿಟ್ಟರೆ ಬೇರೇನು ಇರುವುದಿಲ್ಲ. ಹೀಗಾಗಿ ಜನ ಹಿಂದಿ ಚಿತ್ರಗಳನ್ನು ನಿರಾಕರಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.