ನ್ಯೂಸ್

ಆರ್‌ಎಂಸಿ ಯಾರ್ಡ್‌ನಲ್ಲಿ ಟೊಮ್ಯಾಟೋ ವಾಹನ ಕಳ್ಳತನ ಪ್ರಕರಣ: ಪೊಲೀಸರ ಬಲೆಗೆ ಬಿದ್ದ ಗಂಡ-ಹೆಂಡತಿ!

ಬೆಂಗಳೂರು: ಟೊಮ್ಯಾಟೋ ತುಂಬಿದ್ದ ವಾಹನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್​ಎಂಸಿ ಯಾರ್ಡ್ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಭಾಸ್ಕರ್ ಹಾಗೂ ಆತನ ಪತ್ನಿ ಸಿಂಧುಜಾ ಎಂದು ಗುರುತಿಸಲಾಗಿದೆ. ರಾಕಿ, ಮಹೇಶ್​ ಹಾಗೂ ಕುಮಾರ್ ಎಸ್ಕೇಪ್​ ಆಗಿದ್ದು, ಅವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಸಿಂಧುಜಾ ಹಾಗೂ ಭಾಸ್ಕರ್, ಕಳ್ಳತನ ಮಾಡಲು ರಾಕಿ ಮನೆಯಲ್ಲಿ ಪ್ಲ್ಯಾನ್​ ಮಾಡಿದ್ದರು. ಟೊಮ್ಯಾಟೋ ದುಬಾರಿ ಆಗಿರುವ ಹಿನ್ನೆಲೆಯಲ್ಲಿ ಯಶವಂತಪುರದ ಆರ್​ಎಂಸಿ ಯಾರ್ಡ್ ಬಳಿಯಿಂದ ಟೊಮ್ಯಾಟೋ ತುಂಬಿದ್ದ ಗೂಡ್ಸ್ ವಾಹನವನ್ನು ಕದ್ದು, ಪರಾರಿಯಾಗಿದ್ದರು. ಬಳಿಕ ಚೆನ್ನೈ ಮಾರುಕಟ್ಟೆಯಲ್ಲಿ ಟೊಮ್ಯಾಟೋ ಮಾರಾಟ ಮಾಡಿದ್ದರು. ಇದಾದ ಬಳಿಕ ಖಾಲಿ ವಾಹನವನ್ನು ತಂದು ಪೀಣ್ಯ ಬಳಿ ನಿಲ್ಲಿಸಿ, ಬೇರೆ ಕಾರಿನಲ್ಲಿ ಎಸ್ಕೇಪ್ ಆಗಿದ್ದರು.

ಈ ಸಂಬಂಧ ವಾಹನ ಮಾಲೀಕ ಮತ್ತು ಟೊಮ್ಯಾಟೋ ರೈತ ದೂರು ದಾಖಲಿಸಿದ್ದ. ತನಿಖೆ ಆರಂಭಿಸಿದ ಪೊಲೀಸರಿಗೆ ಆರೋಪಿಗಳ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ನಂಬರ್ ಪ್ಲೇಟ್​ ಇಲ್ಲದ ಕಾರಿನಲ್ಲಿ ಆರೋಪಿಗಳು ಪರಾರಿಯಾಗಿದ್ದರಿಂದ ಪೊಲೀಸರಿಗೆ ಈ ಪ್ರಕರಣ ತಲೆನೋವಾಗಿ ಪರಿಣಮಿಸಿತ್ತು. ಕೊನೆಗೂ ಸಿಸಿಟಿವಿಯನ್ನು ಸೂಕ್ಷ್ಮವಾಗಿ ಪರಿಶೀಲನೆ ನಡೆಸಿ, ಕೊನೆಗೂ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. (ದಿಗ್ವಿಜಯ ನ್ಯೂಸ್​)