ನ್ಯೂಸ್

ಲೋಕ ಸಮರ 2024: ಸಂಯುಕ್ತಾ ಪಾಟೀಲ್​ಗೆ 'ಕೈ'​ ಟಿಕೆಟ್ ಬಹುತೇಕ ಫೈನಲ್​? ಕಣ್ಣೀರಿಟ್ಟ ವೀಣಾ ಕಾಶಪ್ಪನವರ

ಬಾಗಲಕೋಟೆ: ಲೋಕಸಭಾ ಚುನಾವಣೆ 2024ರ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಬಾಗಲಕೋಟೆ ಕ್ಷೇತಕ್ಕೆ ಕೈ ಅಭ್ಯರ್ಥಿಯಾಗಿ ಯಾರು ಹೊರಹೊಮ್ಮಲ್ಲಿದ್ದಾರೆ ಎಂಬ ಪ್ರಶ್ನೆ ಸದ್ಯ ರಾಜಕೀಯ ವಲಯದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಈ ಮಧ್ಯೆ ಸಚಿವ ಶಿವಾನಂದ ಪಾಟೀಲ ಪುತ್ರಿ ಸಂಯುಕ್ತಾ ಪಾಟೀಲ ಮತ್ತು ವೀಣಾ ಕಾಶಪ್ಪನವರ ಮಧ್ಯೆ ಟಿಕೆಟ್​ಗಾಗಿ ಭಾರೀ ಹಣಾಹಣಿ ನಡೆಯುತ್ತಿದೆ. ಸದ್ಯ ಟಿಕೆಟ್​ ಕದನ ಈಗ ಜೋರಾಗಿದ್ದು, ಕಾಂಗ್ರೆಸ್​ ಅಭ್ಯರ್ಥಿಯಾಗಿ ಸಂಯುಕ್ತಾ ಕಣಕ್ಕಿಳಿಯುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಸಂಯುಕ್ತಾಗೆ ಕೈ ಟಿಕೆಟ್​ ಫೈನಲ್ ಎಂಬ ಸುದ್ದಿಯ ಬೆನ್ನಲ್ಲೇ ಅತ್ತ ದೆಹಲಿಯಲ್ಲಿ ವೀಣಾ ಕಾಶಪ್ಪನವರ ಕಣ್ಣೀರಿಟ್ಟಿದ್ದಾರೆ. ಕ್ಷೇತ್ರದಲ್ಲಿ ಸದ್ದಿಲ್ಲದೇ ಓಡಾಡುತ್ತಿರುವ ಸಂಯುಕ್ತಾ ಪಾಟೀಲ ಚುನಾವಣಾ ಕೆಲಸದಲ್ಲಿ ಸಕ್ರಿಯರಾಗಿದ್ದಾರೆ. ಟಿಕೆಟ್ ಫೈನಲ್ ಆಗುವ ಸುಳಿವು ಸಿಕ್ಕ ಹಿನ್ನೆಲೆ ಜಿಲ್ಲೆಯ ಸ್ಥಳೀಯ ನಾಯಕರನ್ನು ಪಾಟೀಲ ಭೇಟಿ ಮಾಡುತ್ತಿದ್ದಾರೆ.

ಬೀಳಗಿ ಪಟ್ಟಣದಲ್ಲಿ ಶಾಸಕ ಜೆ.ಟಿ ಪಾಟೀಲ, ಹಿರಿಯ ನಾಯಕ ಎಸ್. ಆರ್. ಪಾಟೀಲ, ಬಾಗಲಕೋಟೆ ಶಾಸಕ ಹೆಚ್.ವೈ ಮೇಟಿ ಸೇರಿದಂತೆ ಸ್ಥಳೀಯ ನಾಯಕರ ಭೇಟಿಯಾಗುತ್ತಿರುವ ಸಂಯುಕ್ತಾ ಪಾಟೀಲ, ಇನ್ನು ಹಲವು ನಾಯಕರನ್ನು ಭೇಟಿ ಮಾಡಲು ಭರ್ಜರಿ ಓಡಾಟ ನಡೆಸುತ್ತಿದ್ದಾರೆ. ಯಾವುದೇ ಕ್ಷಣದಲ್ಲಿ ಟಿಕೆಟ್ ಘೋಷಣೆಯಾಗುವ ಸಾಧ್ಯತೆಯಿದ್ದು, ಹಿರಿಯ ನಾಯಕರ ವಿಶ್ವಾಸ, ಆಶೀರ್ವಾದ ಪಡೆಯುತ್ತಿದ್ದಾರೆ.