ನ್ಯೂಸ್

ವಂದೇ ಭಾರತ ಎಕ್ಸ್​ಪ್ರೆಸ್​​ ರೈಲಿನಲ್ಲಿ ಕೊಟ್ಟ ಆಹಾರದಲ್ಲಿತ್ತು ಜಿರಳೆ! ರೈಲ್ವೆ ಇಲಾಖೆ ವಿರುದ್ಧ ಪ್ರಯಾಣಿಕ ಗರಂ

ನವದೆಹಲಿ: ಜೂನ್​ 18ರಂದು ಭೋಪಾಲ್​ನಿಂದ ಆಗ್ರಾಗೆ ಚಲಿಸುತ್ತಿದ್ದ ವಂದೇ ಭಾರತ ಎಕ್ಸ್​ಪ್ರೆಸ್​ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರಿಗೆ ತಮಗೆ ನೀಡಲಾದ ಆಹಾರದಲ್ಲಿ ಜಿರಳೆ ಪತ್ತೆಯಾದ ಘಟನೆ ಭಾರೀ ಅಚ್ಚರಿ ಮೂಡಿಸಿದ್ದು, ಊಟವನ್ನು ಕೈಬಿಟ್ಟು, ಅದರ ಫೋಟೋವನ್ನು ತೆಗೆದು, ರೈಲ್ವೆ ಇಲಾಖೆಯನ್ನು ತರಾಟೆಗೆ ತೆಗೆದುಕೊಳ್ಳುವಂತೆ ಮಾಡಿತು. ಈ ವಿಷಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ವಿದಿತ್ ವರ್ಷ್ನಿ ಎಂಬುವವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಈ ಘಟನೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, "ನಾವು ಭೋಪಾಲ್‌ನಿಂದ ಆಗ್ರಾಗೆ ಪ್ರಯಾಣಿಸುತ್ತಿದ್ದಾಗ ವಂದೇ ಭಾರತ ಎಕ್ಸ್‌ಪ್ರೆಸ್‌ನಲ್ಲಿ ನಮ್ಮ ಚಿಕ್ಕಪ್ಪ ಮತ್ತು ಚಿಕ್ಕಮ್ಮಗೆ ನೀಡಿದ ಆಹಾರದಲ್ಲಿ ಸತ್ತ ಜಿರಳೆ ಪತ್ತೆಯಾಯಿತು. ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಆಹಾರ ಮಾರಾಟಗಾರರಿಗೆ ಐಆರ್​ಸಿಟಿಸಿ ಎಚ್ಚರಿಕೆ ರವಾನಿಸಬೇಕಿದೆ. ರೈಲ್ವೆ ಇಲಾಖೆಯ ಅಧಿಕಾರಿಗಳು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು" ಎಂದು ಫೋಟೋ ಹಂಚಿಕೊಳ್ಳುವ ಮೂಲಕ ಆಗ್ರಹಿಸಿದ್ದರು.

ವರ್ಷ್ನಿಯವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ (IRCTC), "ಈ ಅನಾನುಕೂಲತೆಗಾಗಿ ಕ್ಷಮೆಯಾಚಿಸುತ್ತೇವೆ. ಈಗಾಗಲೇ ಸೇವಾ ಪೂರೈಕೆದಾರರಿಗೆ ಸೂಕ್ತ ದಂಡ ವಿಧಿಸಿದ್ದೇವೆ. ಮುಂದೆ ಇಂತಹ ತಪ್ಪುಗಳು ಮರುಕಳಿಸುವುದಿಲ್ಲ" ಎಂದು ಇಲಾಖೆ ಪ್ರಯಾಣಿಕರ ದೂರಿಗೆ ಸ್ಪಂದಿಸಿದೆ,(ಏಜೆನ್ಸೀಸ್).