ಡೆಹ್ರಾಡೂನ್: ಅನಾರೋಗ್ಯದಿಂದ ಬಳಲುತ್ತಿರುವ ದಲಿತ ಸಮುದಾಯದ ವ್ಯಕ್ತಿಯೊಬ್ಬರು ದೇವಸ್ಥಾನದಲ್ಲಿ ಡೋಲು ಬಡಿಯಲು ನಿರಾಕರಿಸಿದರು ಎಂಬ ಕಾರಣಕ್ಕೆ ಆತನ ಇಡೀ ಸಮುದಾಯವನ್ನು ಗ್ರಾಮದಿಂದ ಬಹಿಷ್ಕರಿಸಿರುವ ಘಟನೆ ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನಡೆದಿದೆ.
ಭಾರತ ಚೀನಾ ಗಡಿ ನಡುವೆ ಇರುವ ನೀತಿ ಕಣಿವೆ ಬಳಿ ಇರುವ ಸುಭಾಯ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ವ್ಯಾಪಕ ಖಂಡನೆಗೆ ಗುರಿಯಾಗಿದೆ. ಪರಿಶಿಷ್ಟ ಜಾತಿಗೆ ಸೇರಿದ ಹತ್ತಕ್ಕೂ ಹೆಚ್ಚು ಕುಟುಂಬಗಳು ಹಳ್ಳಿಯಲ್ಲಿದ್ದು, ತಲೆಮಾರುಗಳಿಂದ ಗ್ರಾಮದಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳ ಸಂದರ್ಭಗಳಲ್ಲಿ ಡೋಲು ಬಾರಿಸುತ್ತಾ ಬಂದಿದ್ದು, ಇದೀಗ ಬಹಿಷ್ಕಾರಕ್ಕೆ ಒಳಪಟ್ಟಿವೆ.
ಅನಾರೋಗ್ಯಕ್ಕೀಡಾಗಿರುವ ಪುಷ್ಕರ್ ಲಾಲ್ ಎಂಬುವವರು ಗ್ರಾಮದಲ್ಲಿ ಕೆಲ ದಿನಗಳ ಹಿಂದೆ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಡೋಲು ಬಾರಿಸಲು ಸಾಧ್ಯವಾಗಿರಲಿಲ್ಲ. ಈ ವಿಚಾರವಾಗಿ ಪಂಚಾಯಿತಿ ಸದಸ್ಯರು ಕೇಳಿದಾಗ ಅನಾರೋಗ್ಯದ ಬಳಲುತ್ತಿರುವುದಾಗಿ ಪುಷ್ಕರ್ ಲಾಲ್ ಹೇಳಿದ್ದಾರೆ. ಆ ಬಳಿಕ ಸದಸ್ಯರೊಂದಿಗೆ ಚರ್ಚಿಸಿ ಗ್ರಾಮದಲ್ಲಿ ವಾಸವಿದ್ದ 10ಕ್ಕೂ ಹೆಚ್ಚು ದಲಿತ ಕುಟುಂಬಗಳಿಗೆ ಪಂಚಾಯಿತಿ ಸದಸ್ಯರು ಬಹಿಷ್ಕಾರ ಹಾಕಿದ್ದಾರೆ.
ಇದನ್ನೂ ಓದಿ: ಪ್ರೇಯಸಿಗಾಗಿ ಹೆಂಡ್ತಿ, ಮಕ್ಕಳನ್ನು ಕೊಂದು ಅಪಘಾತದ ನಾಟಕವಾಡಿದ ಭೂಪ; ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂತು ವೈದ್ಯನ ಕರಾಳ ಕೃತ್ಯ
ಪಂಚಾಯಿತಿ ಆದೇಶದ ಪ್ರಕಾರ, ಗ್ರಾಮಕ್ಕೆ ಸೇರಿದ ಅರಣ್ಯ ಮತ್ತು ಜಲ ಮೂಲಗಳನ್ನು ಬಳಸದಂತೆ, ಊರಿನ ಅಂಗಡಿಗಳಿಂದ ಅಗತ್ಯ ಸಾಮಗ್ರಿಗಳನ್ನು ಖರೀದಿಸದಂತೆ, ಸಾರ್ವಜನಿಕ ವಾಹನಗಳನ್ನು ಉಪಯೋಗಿಸದಂತೆ ಹಾಗೂ ದೇವಾಲಯಗಳಿಗೆ ಭೇಟಿ ನೀಡದಂತೆ ಪರಿಶಿಷ್ಟ ಜಾತಿಗೆ ಸೇರಿದ ಕುಟುಂಬಗಳಿಗೆ ನಿರ್ಬಂಧ ವಿಧಿಸಲಾಗಿದೆ.
ಬಹಿಷ್ಕಾರ ಹಾಕಿರುವುದನ್ನು ವಿರೋಧಿಸಿ ಸಂತ್ರಸ್ತ ಕುಟುಂಬಗಳು ಜೋಶಿಮಠ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಪಂಚಾಯಿತಿ ಸದಸ್ಯರಾದ ರಾಮಕೃಷ್ಣ ಖಂಡ್ವಾಲ್ ಮತ್ತು ಯಶ್ವೀರ್ ಸಿಂಗ್ ವಿರುದ್ಧ ದೂರು ದಾಖಲಿಸಿ ನ್ಯಾಯ ಕೊಡಿಸುವಂತೆ ಆಗ್ರಹಿಸಿದ್ದಾರೆ.