ನ್ಯೂಸ್

ನಾಲ್ಕೇ ತಿಂಗಳಲ್ಲಿ ರಾಜೀನಾಮೆ ಕೊಟ್ಟ ಸಿಎಂ; ಹಲವು ಪ್ರಶ್ನೆಗಳನ್ನು ಮೂಡಿಸಿದ ಉತ್ತರಾಖಂಡ

ನವದೆಹಲಿ: ರಾಷ್ಟ್ರ ರಾಜಕಾರಣದಲ್ಲಿ ರಾಜಕೀಯ ಚಟುವಟಿಕೆ ಚುರುಕುಗೊಳ್ಳುವಂಥ ಪ್ರಕರಣವೊಂದಕ್ಕೆ ಉತ್ತರಾಖಂಡ ಸಾಕ್ಷಿಯಾಗಿದೆ. ಇಲ್ಲಿನ ಮುಖ್ಯಮಂತ್ರಿ ತೀರತ್ ಸಿಂಗ್ ರಾವತ್ ಇಂದು ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಉತ್ತರಾಖಂಡ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ನಾಲ್ಕು ತಿಂಗಳುಗಳು ಕಳೆಯುವುದರೊಳಗೆ ಇಂಥದ್ದೊಂದು ಬೆಳವಣಿಗೆ ನಡೆದಿರುವುದು ಕುತೂಹಲ ಕೆರಳಿಸಿದೆ. ದೆಹಲಿಯಲ್ಲಿ ಪಕ್ಷದ ವರಿಷ್ಠರನ್ನು ಭೇಟಿಯಾಗಲು ಮೂರು ದಿನಗಳ ಹಿಂದೆ ಹೋಗಿದ್ದ ಅವರಿಗೆ, ಸ್ಥಾನ ತ್ಯಜಿಸುವಂತೆ ಪಕ್ಷ ಇಂದು ಸೂಚಿಸಿತ್ತು ಎನ್ನಲಾಗಿದೆ. ಅದಾದ ಕೆಲವೇ ಸಮಯದಲ್ಲಿ ರಾಜ್ಯಪಾಲರನ್ನು ಭೇಟಿಯಾದ ಅವರು, ನಂತರ ಪಕ್ಷದ ವರಿಷ್ಠ ಜೆ.ಪಿ. ನಡ್ಡಾ ಅವರಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ.

ಉತ್ತರಾಖಂಡದಲ್ಲಿನ ಬಿಜೆಪಿ ಶಾಸಕರು ನಾಳೆ ಒಂದೆಡೆ ಸೇರಿ ಚರ್ಚಿಸಿ ನೂತನ ಮುಖ್ಯಮಂತ್ರಿ ಕುರಿತು ಚರ್ಚೆ ಮಾಡಲಿದ್ದಾರೆ. ತೀರತ್ ಸಿಂಗ್ ರಾವತ್ ಮುಖ್ಯಮಂತ್ರಿಯಾಗಿ ಮಾರ್ಚ್​ನಲ್ಲಷ್ಟೇ ಪ್ರಮಾಣವಚನ ಸ್ವೀಕರಿಸಿದ್ದರು. (ಏಜೆನ್ಸೀಸ್​)