ಪಾಕ್ ಸಚಿವನ ಹೇಳಿಕೆ ಖಂಡಿಸಿ ದೆಹಲಿಯ ಪಾಕ್ ರಾಯಭಾರ ಕಚೇರಿ ಎದುರು ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ. 
ನ್ಯೂಸ್

ಬಿಲಾವಲ್ ಬಣ್ಣಗೇಡು: ಪ್ರಧಾನಿ ಮೋದಿ ವಿರುದ್ಧ ಕೀಳುಪದ ಬಳಕೆ, ದೇಶಾದ್ಯಂತ ಆಕ್ರೋಶ

ನವದೆಹಲಿ: ಭಾರತದ ವಿರುದ್ಧ ಸದಾ ಕಿಡಿಕಾರುವ ಪಾಕಿಸ್ತಾನದ ನಾಯಕರು ಈಗ ಇನ್ನೊಂದು ಹೆಜ್ಜೆ ಮುಂದೆಹೋಗಿ, ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡಿ, ಖಂಡನೆಗೆ ಒಳಗಾಗಿದ್ದಾರೆ. ವೈಯಕ್ತಿಕ ನಿಂದನೆಯ ಹೇಳಿಕೆ ನೀಡಿರುವ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ-ಜರ್ದಾರಿ ಅವರನ್ನು ಭಾರತ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಬಿಲಾವಲ್ ವ್ಯಕ್ತಪಡಿಸಿರುವ ಅಭಿಪ್ರಾಯವು ಪಾಕಿಸ್ತಾನದಂತಹ ಕೆಳಮಟ್ಟದ ದೇಶಕ್ಕೂ ಕೀಳಮಟ್ಟದ್ದು ಎನಿಸುತ್ತದೆ. ಭಯೋತ್ಪಾದಕರು ಮತ್ತು ಭಯೋತ್ಪಾದಕ ಸಂಘಟನೆಗಳಿಗೆ ಪ್ರಾಯೋಜಕತ್ವ, ಆಶ್ರಯ ಮತ್ತು ಸಕ್ರಿಯವಾಗಿ ಹಣಕಾಸು ಒದಗಿಸುವಲ್ಲಿ ಪಾಕಿಸ್ತಾನದ ಪಾತ್ರವು ನಿರ್ವಿವಾದ. ಮೇಕ್ ಇನ್ ಪಾಕಿಸ್ತಾನ ಭಯೋತ್ಪಾದನೆಯನ್ನು ನಿಲ್ಲಿಸಬೇಕಾಗಿದೆ ಎಂದು ಭಾರತ ಎಚ್ಚರಿಕೆ ನೀಡಿದೆ.

ಪಾಕಿಸ್ತಾನವು ಒಸಾಮಾ ಬಿನ್ ಲಾಡೆನ್​ನನ್ನು ಹುತಾತ್ಮ ಎಂದು ವೈಭವೀಕರಿಸುತ್ತದೆ. ಝುಕಿಯುರ್ ರೆಹಮಾನ್ ಲಖ್ವಿ, ಹಫೀಜ್ ಸಯೀದ್, ಮಸೂದ್ ಅಜರ್, ಸಾಜಿದ್ ಮಿರ್ ಮತ್ತು ದಾವೂದ್ ಇಬ್ರಾಹಿಂ ಅವರಂತಹ ಭಯೋತ್ಪಾದಕರಿಗೆ ಆಶ್ರಯ ನೀಡುವ ದೇಶವಾಗಿದೆ. ವಿಶ್ವಸಂಸ್ಥೆ ಗುರುತಿಸಿದ 126 ಭಯೋತ್ಪಾದಕರು ಮತ್ತು 27 ಭಯೋತ್ಪಾದಕ ಸಂಘಟನೆಗಳು ತನ್ನ ನೆಲದಲ್ಲಿದ್ದಾರೆ ಎಂದು ಹೇಳಲು ಯಾವುದೇ ದೇಶವು ಹೆಮ್ಮೆಪಡುವುದಿಲ್ಲ ಎನ್ನುವ ಮೂಲಕ ಪಾಕಿಸ್ತಾನವನ್ನು ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಾಗ್ಚಿ ತರಾಟೆಗೆ ತೆಗೆದುಕೊಂಡಿದ್ದಾರೆ. ‘1971ರಲ್ಲಿ ಇಂದಿನ ದಿನ ಏನಾಯಿತು ಎಂಬುದನ್ನು ಪಾಕಿಸ್ತಾನದ ವಿದೇಶಾಂಗ ಸಚಿವರು ಮರೆತಿದ್ದಾರೆ. ಪಾಕಿಸ್ತಾನಿ ಆಡಳಿತಗಾರರು ಬಂಗಾಳಿಗಳು ಮತ್ತು ಹಿಂದೂಗಳ ವಿರುದ್ಧ ನಡೆಸಿದ ನರಮೇಧದ ನೇರ ಪರಿಣಾಮವೇ ಈ ದಿನವಾಗಿದೆ’ ಎಂದು ಹೇಳಿದ ಬಾಗ್ಚಿ, 1971ರ ಡಿಸೆಂಬರ್ 16ರಂದು ಬಾಂಗ್ಲಾದೇಶದ ಹುಟ್ಟಿಗೆ ಕಾರಣವಾದ ಪಾಕಿಸ್ತಾನದ ವಿರುದ್ಧದ ಭಾರತದ ವಿಜಯವನ್ನು ಪರೋಕ್ಷವಾಗಿ ಉಲ್ಲೇಖಿಸಿದರು.

ಕರಾಚಿಯ ಕಟುಕರು: ಬಲೂಚಿಸ್ತಾನದಲ್ಲಿ ಜನರನ್ನು ಕೊಂದು ಹಾಕಿದ ವ್ಯಕ್ತಿಗಳು ಮತ್ತು ಪಾಕಿಸ್ತಾನದಿಂದ ಇದಕ್ಕಿಂತ ಉತ್ತಮವಾದದ್ದನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಬಿಲಾವಲ್ ವಿರುದ್ಧ ವಿದೇಶಾಂಗ ವ್ಯವಹಾರಗಳ ರಾಜ್ಯಸಚಿವೆ ಮೀನಾಕ್ಷಿ ಲೇಖಿ ವಾಗ್ದಾಳಿ ನಡೆಸಿದ್ದಾರೆ. ‘ಸಾಮಾನ್ಯವಾಗಿ ಯಾವುದೇ ಸಾರ್ವಭೌಮ ರಾಷ್ಟ್ರದ ವಿದೇಶಾಂಗ ಸಚಿವರು ಮಾತನಾಡುವ ರೀತಿ ಇದಲ್ಲ. ಆದರೆ, ಅದು ಪಾಕಿಸ್ತಾನ. ಇದರಿಂದ ನೀವು ಏನು ನಿರೀಕ್ಷಿಸಬಹುದು? ಬಲೂಚಿಸ್ತಾನ, ಕಾಶ್ಮೀರದಲ್ಲಿ ಜನರನ್ನು ಕೊಂದವರು ಇವರು. ಇವರು ಪಂಜಾಬ್​ನ ಕಟುಕರು. ಇವರು ಕರಾಚಿಯ ಕಟುಕರು’ ಎಂದು ಲೇಖಿ ಕಿಡಿಕಾರಿದ್ದಾರೆ.

ಬಿಲಾವಲ್ ಹೇಳಿದ್ದೇನು?: ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಿದ್ದ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ, ‘ಒಸಾಮಾ ಬಿನ್ ಲಾಡೆನ್ ಸತ್ತಿದ್ದಾನೆ. ಆದರೆ ಗುಜರಾತ್​ನ ಹಂತಕ ಇನ್ನೂ ಜೀವಂತವಾಗಿದ್ದಾನೆ. ಭಾರತದ ಪ್ರಧಾನಿಯಾಗಿದ್ದಾನೆ’ ಎಂದು ಹೇಳಿದ್ದರು. ಗಾಂಧಿ ತತ್ವವನ್ನು ಒಪ್ಪದ ಆರ್​ಎಸ್​ಎಸ್ ವ್ಯಕ್ತಿ, ವಿದೇಶಾಂಗ ಸಚಿವ ಎಸ್. ಜೈಶಂಕರ್ ವಿಶ್ವಸಂಸ್ಥೆ ಆವರಣದಲ್ಲಿ ಗಾಂಧಿ ಪ್ರತಿಮೆ ಅನಾವರಣ ಮಾಡಿದ್ದಾರೆ. ಆದರೆ, ಆರ್​ಎಸ್​ಎಸ್ ಗಾಂಧಿ ಹತ್ಯೆಗೈದವನ ತತ್ವವನ್ನು ಪ್ರತಿಪಾದಿಸುತ್ತದೆ ಎಂದು ಭಾಷಣದಲ್ಲಿ ಹೇಳಿದ್ದರು.

ಇಂದು ರಾಷ್ಟ್ರವ್ಯಾಪಿ ಪ್ರತಿಭಟನೆ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪಾಕಿಸ್ತಾನ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ವೈಯಕ್ತಿಕ ಟೀಕೆಗಳು ನಾಚಿಕೆಗೇಡು ಮತ್ತು ಅವಹೇಳನಕಾರಿ ಎಂದು ಟೀಕಿಸಿರುವ ಬಿಜೆಪಿ, ಇದರ ವಿರುದ್ಧ ಶನಿವಾರ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸುವುದಾಗಿ ಹೇಳಿದೆ.

ಭಯೋತ್ಪಾದಕ ಮತ್ತು ಭಯೋತ್ಪಾದಕ ಸಂಘಟನೆಗಳಿಗೆ ಪ್ರಾಯೋಜಕತ್ವ, ಆಶ್ರಯ ಮತ್ತು ಸಕ್ರಿಯವಾಗಿ ಹಣಕಾಸು ಒದಗಿಸುವಲ್ಲಿ ಪಾಕಿಸ್ತಾನದ ಪಾತ್ರವು ನಿರ್ವಿವಾದವಾಗಿದೆ. ನ್ಯೂಯಾರ್ಕ್, ಮುಂಬೈ, ಪುಲ್ವಾಮಾ, ಪಠಾಣ್​ಕೋಟ್ ಮತ್ತು ಲಂಡನ್​ನಂತಹ ನಗರಗಳು ಪಾಕಿಸ್ತಾನ ಪ್ರಾಯೋಜಿತ, ಬೆಂಬಲಿತ ಮತ್ತು ಪ್ರಚೋದಿತ ಭಯೋತ್ಪಾದನೆಯ ಗುರುತುಗಳನ್ನು ಹೊಂದಿರುವ ಅನೇಕ ನಗರಗಳಲ್ಲಿ ಸೇರಿವೆ. ಪಾಕಿಸ್ತಾನದ ಪಾತ್ರವನ್ನು ಮರೆಮಾಚಲು ಅದರ ವಿದೇಶಾಂಗ ಸಚಿವರು ಹೆಚ್ಚು ಆಸಕ್ತಿ ಹೊಂದಿದ್ದಾರೆ. | ಅರಿಂದಮ್ ಬಾಗ್ಚಿ ವಿದೇಶಾಂಗ ಇಲಾಖೆ ವಕ್ತಾರ

ನಮ್ಮ ಯೋಧರನ್ನು ಥಳಿಸಿದ್ದಾರೆ

ಜೈಪುರ: ಚೀನಾವು ಯುದ್ಧಕ್ಕೆ ತಯಾರಿ ನಡೆಸುತ್ತಿದ್ದರೆ, ಭಾರತ ಸರ್ಕಾರ ನಿದ್ದೆ ಮಾಡುತ್ತಿದೆ. ಅಲ್ಲದೆ, ಈ ಬೆದರಿಕೆಯನ್ನು ನಿರ್ಲಕ್ಷಿಸಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಆರೋಪಿಸಿದ್ದಾರೆ. ‘ಚೀನಾ 2,000 ಚದರ ಕಿಲೋಮೀಟರ್ ಭಾರತೀಯ ಭೂಪ್ರದೇಶವನ್ನು ವಶಪಡಿಸಿಕೊಂಡಿದೆ. 20 ಭಾರತೀಯ ಸೈನಿಕರನ್ನು ಕೊಂದಿದೆ. ಅಲ್ಲದೆ, ಅರುಣಾಚಲಪ್ರದೇಶದಲ್ಲಿ ನಮ್ಮ ಸೈನಿಕರನ್ನು ಥಳಿಸುತ್ತಿದೆ. ನನಗೆ ಚೀನಾದ ತಂತ್ರ ಸ್ಪಷ್ಟವಾಗಿ ಗೋಚರಿಸುತ್ತಿದೆ. ಕಳೆದ ಎರಡು-ಮೂರು ವರ್ಷಗಳಿಂದ ನಾನು ಈ ಬಗ್ಗೆ ಸ್ಪಷ್ಟವಾಗಿದ್ದೇನೆ. ಆದರೆ, ಸರ್ಕಾರ ಅದನ್ನು ಮರೆಮಾಚಲು ಮತ್ತು ನಿರ್ಲಕ್ಷಿಸಲು ಪ್ರಯತ್ನಿಸುತ್ತಿದೆ’ ಎಂದು ರಾಹುಲ್ ಆರೋಪಿಸಿದ್ದಾರೆ. ರಾಹುಲ್ ಟೀಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯಾ, ‘ಭಾರತೀಯ ಸೈನಿಕರು ಚೀನಿಯರನ್ನು ಥಳಿಸುವ ವಿಡಿಯೋಗಳನ್ನು ರಾಹುಲ್ ಗಾಂಧಿ ಅವರನ್ನು ಹೊರತುಪಡಿಸಿ ಪ್ರತಿಯೊಬ್ಬ ಭಾರತೀಯರು ಹೆಮ್ಮೆ ಪಡುತ್ತಿದ್ದಾರೆ. ಆದರೆ ನಮ್ಮ ಯೋಧರ ಶೌರ್ಯದ ಬಗ್ಗೆ ರಾಹುಲ್​ಗೆ ನಂಬಿಕೆಯಿಲ್ಲ’ ಎಂದು ಹೇಳಿದ್ದಾರೆ.