ನವದೆಹಲಿ: ನಟನಾಗಿ ಸಿನಿಮಾ ಇಂಡಸ್ಟ್ರಿಯಲ್ಲಿ ಮಿಂಚಬೇಕು ಎಂಬ ಕನಸನ್ನು ನನಸು ಮಾಡಿಕೊಳ್ಳುವ ಸಲುವಾಗಿ ಅಮೆರಿಕದಲ್ಲಿರುವ ಭಾರತೀಯ ಮೂಲದ ಯುವಕನೊಬ್ಬ, ಅತ್ಯಧಿಕ ಸಂಬಳವುಳ್ಳ ತನ್ನ ಕೆಲಸಕ್ಕೆ ಗುಡ್ಬೈ ಹೇಳಿ ಸ್ವದೇಶಕ್ಕೆ ಹಿಂತಿರುಗಿದ್ದಾನೆ.
ದಿಟ್ಟ ಹೆಜ್ಜೆ ಇಟ್ಟಿರುವ ಯುವಕನ ಹೆಸರು ವಿಕಾಸ್ ಯಾದವ್. ಈತ ಕಂಟೆಂಟ್ ಕ್ರಿಯೆಟರ್ ಕೂಡ ಹೌದು. ನಟನಾಗಿ ಹೊಸ ಜೀವನ ಆರಂಭಿಸಲು ಅಮೆರಿಕವನ್ನು ತೊರೆದಿದ್ದಾರೆ. ಇನ್ಸ್ಟಾಗ್ರಾಂನಲ್ಲಿ 2.50 ಲಕ್ಷ ಹಿಂಬಾಲಕರನ್ನು ಹೊಂದಿದ್ದಾರೆ. ತಮ್ಮ ಹಾಸ್ಯಮಯ ವಿಡಿಯೋಗಳಿಂದಲೇ ಯಾದವ್ ಭಾರೀ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ.
ಕನಸಿನ ಬೆನ್ನೇರಿ ಭಾರತಕ್ಕೆ ಬಂದಿರುವ ಯಾದವ್, ಮೂಲತಃ ದೆಹಲಿಯ ದ್ವಾರಕದವರು. ಇಲ್ಲಿನ ನೇತಾಜಿ ಸುಭಾಸ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿಯಲ್ಲಿ ಮತ್ತು ಲಖನೌ ಐಐಎಂನಲ್ಲಿ ಎಂಬಿಎ ಮುಗಿಸಿರುವ ಯಾದವ್, ಅಮೆರಿಕ ಮೂಲದ ನಿರ್ವಹಣಾ ಸಲಹಾ ಕಂಪನಿಯ ವಿಶ್ಲೇಷಣೆ ಮತ್ತು ಸಲಹಾ ವಿಭಾಗದಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಅದಕ್ಕಾಗಿ ಅವರಿಗೆ ಭಾರೀ ಸಂಬಳವನ್ನು ನೀಡಲಾಗುತ್ತಿತ್ತು. ಆದರೆ, ಯಾದವ್ಗೆ ಕೆಲಸಕ್ಕಿಂತ ನಟನೆ ಮೇಲಿನ ಒಲವು ಜಾಸ್ತಿ ಇತ್ತು. ಅವರ ಮನಸ್ಸು ಯಾವಾಗಲು ನಟನೆಯ ಕಡೆ ತುಡಿಯುತ್ತಿತ್ತು.
ಕಾರ್ಪೊರೇಟ್ ಜಗತ್ತಿನಲ್ಲಿ ಯಶಸ್ಸಿನ ತುತ್ತ ತುದಿಯಲ್ಲಿದ್ದರೂ ಯಾದವ್ ಮಾತ್ರ ನಟನೆಯ ಹಿಂದೆ ಸರಿಯಲಿಲ್ಲ. 2015ರಲ್ಲಿ ನಾಲ್ಕು ತಿಂಗಳ ಕಾಲ ರಂಗಮಂದಿರ ವರ್ಕ್ಶಾಪ್ನಲ್ಲಿ ಭಾಗವಹಿಸಿದ್ದಾರೆ. ಅನೇಕ ಪ್ರದರ್ಶನಗಳನ್ನು ನೀಡಿದ್ದಾರೆ. ಸ್ಥಿರ ಮತ್ತು ಒಳ್ಳೆಯ ಸಂಬಳದ ಉದ್ಯೋಗವನ್ನು ಬಿಟ್ಟು ಕೊಡಲು ಯಾರೂ ಇಷ್ಟಪಡುವುದಿಲ್ಲ. ಆದರೆ, ಯಾದವ್ ಅವರು ತನ್ನ ಕನಸನ್ನು ನನಸು ಮಾಡಿಕೊಳ್ಳಲು ಅದನ್ನು ತೊರೆದಿದ್ದಾರೆ. ಕುಟುಂಬವೂ ಕೂಡ ಯಾದವ್ಗೆ ಬೆಂಬಲವಾಗಿ ನಿಂತಿದೆ. ಸಂಪೂರ್ಣ ನಟನೆ ಮತ್ತು ಕಂಟೆಂಟ್ ಕ್ರಿಯೆಟಿಂಗ್ನಲ್ಲಿ ತೊಡಗಿಸಿಕೊಳ್ಳಲು ಭಾರತಕ್ಕೆ ಮರಳಿರುವ ಯಾದವ್, ಪ್ರತಿಷ್ಠಿತ ಬ್ಯಾರಿ ಜಾನ್ ಆಕ್ಟಿಂಗ್ ಸ್ಟುಡಿಯೋದಲ್ಲಿ ನಟನಾ ಕೋರ್ಸ್‌ಗೆ ಸೇರಿಕೊಂಡಿದ್ದಾರೆ.
ಕಾರ್ಪೊರೇಟ್ ವಲಯದಲ್ಲಿ ಕೆಲಸ ಮಾಡುತ್ತಿರುವ ಯಾದವ್ ಅವರ ಪತ್ನಿಯು ಸಹ ವಿಕಾಸ್ ಯಾದವ್ ಅವರಿಗೆ ಬೆಂಬಲ ನೀಡಿದ್ದಾರೆ. ಯಾದವ್ ಅವರಲ್ಲಿ ಸಾಧಿಸುವ ತುಡಿತವಿದೆ. ನಟನೆ ಜತೆ ಕಂಟೆಂಟ್ ಕ್ರಿಯೆಟಿಂಗ್ನಲ್ಲೂ ಅವರಿಗೆ ಆಸಕ್ತಿ ಇರುವುದರಿಂದ ನಟನಾ ಕ್ಷೇತ್ರದಲ್ಲಿ ತಮ್ಮದೇಯಾದ ಛಾಪು ಮೂಡಿಸುತ್ತಾರೆ ಎಂಬ ಒಂದು ಬಲವಾದ ನಂಬಿಕೆ ಅವರಲ್ಲಿ ಮತ್ತು ಅವರ ಕುಟುಂಬದಲ್ಲಿ ಇದೆ. ಏನೇ ಆಗಲಿ ಅತ್ಯಧಿಕ ಸಂಬಳವನ್ನು ಬಿಟ್ಟು ಬರಲು ಎದೆಗಾರಿಕೆ ಬೇಕು. ಆ ನಿರ್ಧಾರವನ್ನು ಯಾದವ್ ಅವರು ತೆಗೆದುಕೊಂಡಿದ್ದಾರೆ ಅಂದರೆ ಅವರಲ್ಲಿ ಮನೋಬಲ ಇದೆ ಎಂಬುದು ತಿಳಿಯುತ್ತದೆ. (ಏಜೆನ್ಸಿಸ್)