ನ್ಯೂಸ್

US Tariffs: ಅಮೆರಿಕಾ ಮತ್ತು ಭಾರತದ ನಡುವಿನ ವ್ಯಾಪಾರ ಘರ್ಷಣೆ ಶೀಘ್ರ ಸುಖಾಂತ್ಯ ಎಂದ ಅಮೆರಿಕ ಖಜಾನೆ ಕಾರ್ಯದರ್ಶಿ ಬೆಸೆಂಟ್​​

US Tariffs: ಅಮೆರಿಕ ಡೊನಾಲ್ಡ್ ಟ್ರಂಪ್ ಸರ್ಕಾರ, ಭಾರತದೊಂದಿಗಿನ ವ್ಯಾಪಾರ ಘರ್ಷಣೆಯನ್ನು ಅತಿ ಶೀಘ್ರದಲ್ಲೇ ಪರಿಹರಿಸಲು ಬಯಸುತ್ತಿದೆ ಎಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ವಿಶ್ವಾಸ ವ್ಯಕ್ತಪಡಿಸಿದ್ದು, ಎರಡು ಬಲಿಷ್ಠ ರಾಷ್ಟ್ರಗಳು ಇದನ್ನು ಪರಿಹರಿಸಿಕೊಳ್ಳುತ್ತವೆ ಎಂದರು.

ಫಾಕ್ಸ್ ನ್ಯೂಸ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಬೆಸೆಂಟ್​​, ಭಾರತ ನಿರಂತರ ರಷ್ಯಾದ ಕಚ್ಚಾ ತೈಲ ಖರೀದಿಯನ್ನು ಟೀಕಿಸುತ್ತಾ, ಇದು ಉಕ್ರೇನ್‌ ರಷ್ಯಾದ ಯುದ್ಧಕ್ಕೆ ಉತ್ತೇಜನ ನೀಡುತ್ತಿದೆ ಎಂದು ಆರೋಪಿಸಿದರು.

ಶಾಂಘೈ ಸಹಕಾರ ಸಂಸ್ಥೆ ಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗಿನ ಪ್ರಧಾನಿ ಮೋದಿ ಭಾಗವಹಿಸಿದರ ಬಗ್ಗೆ ಉಲ್ಲೇಖಿಸಿದ ಬೆಸೆಂಟ್​, ಈ ಸಭೆಗಳು ಬಹಳ ಹಿಂದಿನಿಂದಲೂ ನಡೆಯುತ್ತಿದ್ದು, ಇದು ಹೆಚ್ಚಾಗಿ ಕಾರ್ಯಕ್ಷಮತೆಯಿಂದ ಕೂಡಿರುತ್ತದೆ. ಭಾರತವು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಅವರ ಮೌಲ್ಯಗಳು ರಷ್ಯಾಕ್ಕಿಂತ, ಅಮೆರಿಕಾ ಮತ್ತು ಚೀನಾಕ್ಕೆ ಹೆಚ್ಚು ಹತ್ತಿರವಾಗಿವೆ ಎಂದರು.

ಭಾರತ ಮತ್ತು ಚೀನಾ ರಷ್ಯಾದ ಯುದ್ಧ ಯಂತ್ರಕ್ಕೆ ಇಂಧನ ತುಂಬುತ್ತಿದೆ, ನಾವು ಮತ್ತು ನಮ್ಮ ಮಿತ್ರರಾಷ್ಟ್ರಗಳು ಒಟ್ಟಿಗೆ ಹೆಜ್ಜೆ ಹಾಕಲಿದ್ದೇವೆ ಎಂದು ಬೆಸೆಂಟ್​ ವಿಶ್ವಾಸ ವ್ಯಕ್ತಪಡಿಸಿದರು. ಅಮೆರಿಕ ಮತ್ತು ಭಾರತದ ದ್ವಿಪಕ್ಷೀಯ ಸಂಬಂಧಗಳನ್ನು ಉಲ್ಲೇಖಿಸುತ್ತಾ, ಎರಡು ಪ್ರಜಾಪ್ರಭುತ್ವ ರಾಷ್ಟ್ರಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ನಿಭಾಯಿಸಲು ಸಮರ್ಥವಾಗಿವೆ ಎಂದರು.

ನಿಧಾನಗತಿಯ ಪ್ರಗತಿಯಿಂದಲೇ ಈ ಗತಿ

ಭಾರತೀಯ ಸರಕುಗಳ ಮೇಲಿನ ಸುಂಕಗಳ ಹೆಚ್ಚಳಕ್ಕೆ ವ್ಯಾಪಾರ ಮಾತುಕತೆಗಳಲ್ಲಿನ ನಿಧಾನಗತಿಯ ಪ್ರಗತಿಯೇ ಪ್ರಮುಖ ಕಾರಣ ಎಂದು ಬೆಸೆಂಟ್ ಆರೋಪಿಸಿದ್ದು, ಉಭಯ ದೇಶಗಳ ಕುರಿತಾದ ಆಯ್ಕೆಗಳು ಮೇಜಿನ ಮೇಲಿವೆ ಎಂದರು.(ಏಜೆನ್ಸೀಸ್​​)