ನ್ಯೂಸ್

ಅಮೆರಿಕ ಅಧ್ಯಕ್ಷೀಯ ಚುನಾವಣೆ 2020 : ಶತಮಾನದಲ್ಲೇ ಗರಿಷ್ಠ ಮತದಾನ, ಯಾರಿಗೆ ಲಾಭ- ಯಾರಿಗೆ ನಷ್ಟ?

ನ್ಯೂಯಾರ್ಕ್​: ಅಮೆರಿಕದಲ್ಲಿ ಈ ಸಲದ ಅಧ್ಯಕ್ಷೀಯ ಚುನಾವಣೆಯಲ್ಲಿ ಶತಮಾನದಲ್ಲೇ ಗರಿಷ್ಠ ಮತದಾನಕ್ಕೆ ಸಾಕ್ಷಿಯಾಗಿದೆ. 160 ದಶಲಕ್ಷ ಮತ ಚಲಾವಣೆಯಾಗಿದ್ದು, ಶೇಕಡ 67 ಮತದಾನವಾಗಿದೆ. ಇಂದು ಫಲಿತಾಂಶ ಪ್ರಕಟವಾಗುತ್ತಿದ್ದು, ಈಗಾಗಲೇ ಲಭ್ಯವಿರುವ ಮಾಹಿತಿ ಪ್ರಕಾರ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡನೇ ಅವಧಿಯ ಆಯ್ಕೆಗೆ ತಡೆಯೊಡ್ಡುವ ರೀತಿಯಲ್ಲೇ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡನ್​ ಪೈಪೋಟಿ ನೀಡಿದ್ದಾರೆ.

ನ್ಯೂಯಾರ್ಕ್​ ಟೈಮ್ಸ್ ವರದಿ ಪ್ರಕಾರ 2020ರ ಅಧ್ಯಕ್ಷೀಯ ಚುನಾವಣೆ ದಾಖಲೆಗಳ ಪುಟ ಸೇರಿದೆ. ಅದು ತನ್ನ ವರದಿಯಲ್ಲಿ ಫ್ಲೋರಿಡಾ ಯೂನಿವರ್ಸಿಟಿಯ ಪ್ರೊಫೆಸರ್​ ಮೈಕಲ್ ಮೆಕ್​ಡೊನಾಲ್ಡ್ ಮತದಾನ ಪ್ರಮಾಣದ ಡೇಟಾವನ್ನು ಸಂಗ್ರಹಿಸಿದ್ದು, 160 ದಶಲಕ್ಷ ಮತ ಚಲಾವಣೆಯಾಗಿದೆ. ಇದು ಮತದಾರರ ಪೈಕಿ ಶೇಕಡ 67 ಜನ ಮತ ಚಲಾಯಿಸಿರುವುದು ಖಾತರಿ. ಕಳೆದ ಒಂದು ಶತಮಾನದ ಅವಧಿಯಲ್ಲಿ ಈ ಪ್ರಮಾಣದ ಮತದಾನವಾಗಿಲ್ಲ ಎಂದು ಹೇಳಿದ್ದಾರೆ.

ಟೆಕ್ಸಾಸ್, ಕೊಲರಾಡೊ, ವಾಷಿಂಗ್ಟನ್​, ಒರೆಗೋನ್​, ಹವಾಯಿ, ಮೊನ್​ಟಾನಾ ಎಂಬ ಆರು ರಾಜ್ಯಗಳಲ್ಲಿ 2016ರ ಚುನಾವಣೆಗೆ ಹೋಲಿಸಿದರೆ ಆರಂಭದಲ್ಲೇ ಗರಿಷ್ಠ ಮತದಾನವಾಗಿಬಿಟ್ಟಿದೆ. ಫ್ಲೋರಿಡಾ, ಜಾರ್ಜಿಯಾ, ನಾರ್ತ್ ಕರೋಲಿನಾಗಳಲ್ಲಿ ಕಳೆದ ಬಾರಿಯಷ್ಟೇ ಮತದಾನವಾಗಿದೆ. ಮತದಾನ ಪ್ರಮಾಣದ ಹೆಚ್ಚಿದ ಲಾಭ ಯಾರಿಗೆ ಸಿಗುವುದೆಂಬ ಕಾತರ ಇದ್ದು, ಕೆಲವೇ ಹೊತ್ತಿನಲ್ಲಿ ಚಿತ್ರಣ ಸ್ಪಷ್ಟವಾಗಲಿದೆ.

ಸದ್ಯದ ಮಾಹಿತಿ ಪ್ರಕಾರ, ಡೆಮಾಕ್ರಟಿಕ್ ಪಕ್ಷದ ಜೋ ಬಿಡನ್​ಗೆ 131 ಮತ, ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಅವರಿಗೆ 92 ಮತಗಳು ಲಭ್ಯವಾಗಿವೆ. ಅಮೆರಿಕ ಅಧ್ಯಕ್ಷಪಟ್ಟಕ್ಕೇರಬೇಕಾದರೆ 538 ಎಲೆಕ್ಟೋರ್​ಗಳ ಪೈಕಿ 270 ಎಲೆಕ್ಟೋರ್​ಗಳ ಬೆಂಬಲ ಬೇಕಾಗುತ್ತದೆ. (ಏಜೆನ್ಸೀಸ್)