ಅಮೆರಿಕ ಅಧ್ಯಕ್ಷೀಯ ಚುನಾವಣೆ 2020: ಯಾರಾಗ್ತಾರೆ 46ನೇ ಅಧ್ಯಕ್ಷ?

America Election
Published on

ವಾಷಿಂಗ್ಟನ್: ವಿಶ್ವವೇ ಕಾತರದಿಂದ ನೋಡುತ್ತಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಕೊನೇ ಹಂತದ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಅಮೆರಿಕದ 46ನೇ ಅಧ್ಯಕ್ಷರು ಯಾರಾಗಲಿದ್ದಾರೆಂಬ ಫಲಿತಾಂಶ ಶೀಘ್ರದಲ್ಲೇ ಹೊರ ಬೀಳಲಿದೆ.  ಆರಂಭಿಕ ಫಲಿತಾಂಶದ ಪ್ರಕಾರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರತಿಸ್ಪರ್ಧಿ ಜೋ ಬಿಡೆನ್ ನಡುವೆ ಭಾರಿ ಸ್ಪರ್ಧೆ ಏರ್ಪಟ್ಟಿರುವುದು ಕಂಡುಬಂದಿದೆ. ಮಂಗಳವಾರ ಕೊನೆ ಹಂತದ ಮತದಾನ ನಡೆದಿದ್ದು, ಬೆಳಗ್ಗೆ 6 ರಿಂದ ರಾತ್ರಿ 9ರವರೆಗೆ (ಅಮೆರಿಕ ಕಾಲಮಾನ) ಕೋಟ್ಯಂತರ ಮತದಾರರು ಹಕ್ಕು ಚಲಾಯಿಸಿದ್ದಾರೆ.

ಮರುಆಯ್ಕೆ ಬಯಸಿರುವ ಡೊನಾಲ್ಡ್ ಟ್ರಂಪ್ ಹಾಗೂ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ, ಮಾಜಿ ಉಪಾಧ್ಯಕ್ಷ ಜೋ ಬಿಡೆನ್ ಮಧ್ಯೆ ಜಿದ್ದಾಜಿದ್ದಿನ ಸ್ಪರ್ಧೆ ಇದೆ. ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಜೋ ಬಿಡೆನ್ ಮುನ್ನಡೆ ಸಾಧಿಸಿದ್ದಾರಾದರೂ, ಕಳೆದ ಬಾರಿ ಈ ಸಮೀಕ್ಷೆಗಳು ತಲೆಕೆಳಗಾಗಿದ್ದವು.

ಮಂಗಳವಾರ ಮುಂಜಾನೆ 6 ಗಂಟೆಗೆ (ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ ಸುಮಾರು 3.30ಕ್ಕೆ) ನ್ಯೂಯಾರ್ಕ್, ನ್ಯೂಜೆರ್ಸಿ ಹಾಗೂ ವರ್ಜೀನಿಯಾದಲ್ಲಿ ಮೊದಲು ಮತದಾನ ಆರಂಭವಾಯಿತು. ಅಮೆರಿಕದ ರಾಜ್ಯಗಳಲ್ಲೂ ಕಾಲಮಾನ ಸ್ವಲ್ಪ ವ್ಯತ್ಯಾಸವಾಗುವುದರಿಂದ ಎಲ್ಲ ರಾಜ್ಯಗಳಲ್ಲಿ ಸ್ಥಳೀಯ ಕಾಲಮಾನದ ಪ್ರಕಾರ ಮತದಾನ ಪ್ರಕ್ರಿಯೆ ಆರಂಭವಾಯಿತು. ಮತದಾನ ಮುಗಿಯುತ್ತಿದ್ದಂತೆಯೇ ಮತ ಎಣಿಕೆ ಪ್ರಕ್ರಿಯೆ ಆರಂಭವಾಗುತ್ತದೆ. ಬಳಿಕ ಫಲಿತಾಂಶವನ್ನು ಆಯಾ ರಾಜ್ಯಗಳು ಘೋಷಿಸುತ್ತವೆ. ಅರಿಜೋನಾ, ವಿಸ್ಕಾನ್ಸಿನ್, ಮಿಚಿಗನ್, ಪೆನ್ಸಿಲ್ವೇನಿಯಾದಲ್ಲಿನ ಫಲಿತಾಂಶ ವಿಳಂಬವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಡಿಕ್ಸ್​ವಿಲ್ಲೆ ನಾಚ್ ಫಲಿತಾಂಶ ಪ್ರಕಟ

ಅಮೆರಿಕ-ಕೆನಡಾ ಗಡಿಯಲ್ಲಿರುವ ಸಣ್ಣ ನಗರ ಡಿಕ್ಸ್​ವಿಲ್ಲೆ ನಾಚ್​ನಲ್ಲಿ ಮತದಾನ ಪೂರ್ಣಗೊಂಡು ಫಲಿತಾಂಶವೂ ಪ್ರಕಟವಾಗಿದೆ. ಅಲ್ಲಿನ ಐದು ಎಲೆಕ್ಟೋರಲ್ ಸ್ಥಾನಗಳನ್ನು ಜೋ ಬಿಡೆನ್ ಗೆದ್ದುಕೊಂಡಿದ್ದಾರೆ. 2016ರಲ್ಲೂ ಡಿಕ್ಸ್​ವಿಲ್ಲೆ ಮೊದಲು ಫಲಿತಾಂಶ ಪ್ರಕಟಿಸಿತ್ತು. ಆಗಲೂ ಡೆಮಾಕ್ರಟಿಕ್ ಅಭ್ಯರ್ಥಿ (ಹಿಲರಿ ಕ್ಲಿಂಟನ್) ಗೆದ್ದಿದ್ದರು.

# ಸಾಂಕ್ರಾಮಿಕ ಮಹಾಮಾರಿ ನಡುವೆ ನಡೆಯುತ್ತಿರುವ ಅಮೆರಿಕದ 2ನೇ ಚುನಾವಣೆ. 1918ರಲ್ಲಿ ನಡೆದ ಮಧ್ಯಂತರ ಚುನಾವಣೆ ವೇಳೆ ಸ್ಪ್ಯಾನಿಷ್ ಫ್ಲೂ ಸಾಂಕ್ರಾಮಿಕ ಕಾಣಿಸಿಕೊಂಡಿತ್ತು. ಇದರಿಂದ ಮತದಾನ ಪ್ರಮಾಣ ಶೇ. 20 ಕುಸಿತ ಕಂಡಿತ್ತು.

# ಅಮೆರಿಕ ಚುನಾವಣೆಗೆ ಇದೇ ಮೊದಲ ಬಾರಿ ಅತಿ ಹೆಚ್ಚು ಅಂದರೆ 14 ಬಿಲಿಯನ್ ಡಾಲರ್ (-ಠಿ; 1 ಲಕ್ಷ ಕೋಟಿ) ಹಣ ವ್ಯಯಿಸಲಾಗುತ್ತಿದೆ. 2016ರ ಚುನಾವಣೆಗೆ 6.50 ಬಿಲಿಯನ್ ಡಾಲರ್ (-ಠಿ; 48 ಸಾವಿರ ಕೋಟಿ) ಖರ್ಚು ಮಾಡಲಾಗಿತ್ತು.

# ಉಪಾಧ್ಯಕ್ಷ ಸ್ಥಾನಕ್ಕೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿರುವ ಭಾರತ ಮೂಲದ ಕಮಲಾ ಹ್ಯಾರಿಸ್ ಗೆಲುವಿಗಾಗಿ ಪ್ರಾರ್ಥಿಸಿ ಅವರ ಮೂಲ ಊರಾದ ತಮಿಳುನಾಡಿನ ತಿರುವಾರೂರು ಜಿಲ್ಲೆಯ ಮನ್ನಾರ್​ಗುಡಿ ತಾಲೂಕಿನ ತುಲಸೇಂದ್ರಪುರಂ ಗ್ರಾಮದಲ್ಲಿ ಪೂಜೆ, ಹೋಮ ನಡೆಸಲಾಗಿದೆ.

# ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರ್​ಆಯ್ಕೆ ಬಯಸಿ ಹಿಂದು ಸೇನೆ ಕಾರ್ಯಕರ್ತರು ದೆಹಲಿಯ ದೇವಾಲಯವೊಂದರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.

# ಅಂತಿಮ ಹಂತದ ಮತದಾನದ ದಿನ ಇಂಟರ್​ನೆಟ್​ನಲ್ಲಿ ಟ್ರಂಪ್ ಹಾಗೂ ಜೋ ಬಿಡೆನ್ ಬಗ್ಗೆ ಕೋಟ್ಯಂತರ ಜನರು ಹುಡುಕಾಟ ನಡೆಸಿದ್ದಾರೆ. ಅದರಲ್ಲಿ ಟ್ರಂಪ್ ಮುಂಚೂಣಿಯಲ್ಲಿದ್ದು, ಶೇಕಡ 45ರಷ್ಟು ಮಂದಿ ಅವರ ಬಗ್ಗೆ ಗೂಗಲ್​ನಲ್ಲಿ ಸರ್ಚ್ ಮಾಡಿದ್ದಾರೆ. ಬಿಡೆನ್ ಬಗ್ಗೆ ಶೇಕಡ 23ರಷ್ಟು ಮಂದಿ ಹುಡುಕಾಡಿದ್ದಾರೆ.

ಹಿಂಸಾಚಾರದ ಆತಂಕ

ಟ್ರಂಪ್ ಮತ್ತು ಬಿಡೆನ್ ಮಧ್ಯೆ ಪ್ರಬಲ ಪೈಪೋಟಿ ಏರ್ಪಟ್ಟಿರುವುದರಿಂದ ಚುನಾವಣಾ ಫಲಿತಾಂಶ ಹೊರಬಿದ್ದ ಬಳಿಕ ಹಿಂಸಾಚಾರ, ಗಲಭೆ ಉಂಟಾಗುವ ಬಗ್ಗೆಯೂ ಆತಂಕ ಎದುರಾಗಿದೆ. ಅಲ್ಲದೇ ಅಮೆರಿಕದಲ್ಲಿ ಇತ್ತೀಚೆಗೆ ಅತಿ ಹೆಚ್ಚು ಮಂದಿ ಬಂದೂಕುಗಳ ಲೈಸೆನ್ಸ್ ಪಡೆದಿದ್ದು, ಖರೀದಿಯೂ ಹೆಚ್ಚಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net