ವಾಷಿಂಗ್ಟನ್: ಕರೊನಾ ಲಸಿಕೆ ಎಲ್ಲೇ ತಯಾರಾಗಲಿ ಅದು ಅಮೆರಿಕನ್ನರಿಗೆ ಬೇಕೇ ಬೇಕು ಎಂದು ಅಲ್ಲಿನ ಸರ್ಕಾರ ನಿರ್ಧರಿಸಿದಂತಿದೆ. ಹೀಗಾಗಿ ನೂರಾರು ಕೋಟಿ ಡಾಲರ್ಗಳನ್ನು ಖರ್ಚು ಮಾಡುತ್ತಿದೆ. ಲಸಿಕೆ ಖರೀದಿಗೆ ಒಪ್ಪಂದ ಮಾಡಿಕೊಳ್ಳುತ್ತಿದೆ.
ಅಮೆರಿಕದ್ದೇ ಕಂಪನಿಯಾದ ಮಾಡೆರ್ನಾ ಈಗಾಗಲೇ ಲಸಿಕೆ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿದೆ. ಈ ಕಂಪನಿಗೆ ಎಲ್ಲ ರೀತಿಯ ಸಹಾಯವನ್ನು ಅಮೆರಿಕ ನೀಡುತ್ತಿದೆ. ಇದರ ಲಸಿಕೆ ಈಗ ಅಂತಿಮ ಹಂತದ ಕ್ಲಿನಿಕಲ್ ಟ್ರಯಲ್ನಲ್ಲಿದೆ.
ಇನ್ನೊಂದೆಡೆ, ಫೈಝರ್ ಹಾಗೂ ಜರ್ಮನ್ ಬಯೋಟೆಕ್ ಕಂಪನಿ ಬಯಾನ್ ಟೆಕ್ ಕಂಪನಿ ಜತೆಗೂ ಲಸಿಕೆ ಖರೀದಿಗೂ ಭಾರಿ ಮೊತ್ತ ವ್ಯಯಿಸುತ್ತಿದೆ. ಒಟ್ಟು 10 ಕೋಟಿ ಡೋಸ್ ಲಸಿಕೆಯನ್ನು ಪೂರೈಸಲು 14,625 ಕೋಟಿ ರೂ. (1.95 ಬಿಲಿಯನ್ ಡಾಲರ್) ಮೊತ್ತದ ಒಪ್ಪಂದ ಮಾಡಿಕೊಂಡಿದೆ.
ಇದರ ಪ್ರಕಾರ ಎರಡೂ ಕಂಪನಿಗಳ ಲಸಿಕೆ ಅಕ್ಟೋಬರ್ ವೇಳೆಗೆ ಸಿದ್ಧಗೊಳ್ಳಲಿದೆ. ವರ್ಷಾಂತ್ಯಕ್ಕೆ 10 ಕೋಟಿ ಡೋಸ್ ತಯಾರಿಸಲಿದೆ. ಮುಂದಿನ ವರ್ಷದ ಕೊನೆಯ ಹೊತ್ತಿಗೆ 130 ಕೋಟಿ ಡೋಸ್ ಉತ್ಪಾದಿಸಲಿದೆ. ಒಪ್ಪಂದ ಪ್ರಕಾರ ಹೆಚ್ಚುವರಿಯಾಗಿ 50 ಕೋಟಿ ಡೋಸ್ ಖರೀದಿಗೂ ಅವಕಾಶವಿದೆ.
ಅಮೆರಿಕ ಸರ್ಕಾರದೊಂದಿಗೆ ಒಪ್ಪಮದ ಮಾಡಿಕೊಳ್ಳುತ್ತಿದ್ದಂತೆ ಫೈಝರ್ ಷೇರುಗಳ ಮೌಲ್ಯ ಶೇ.4 ಹಾಗೂ ಬಯಾನ್ ಟೆಕ್ ಸಂಸ್ಥೆಯ ಷೇರುಗಳ ಬೆಲೆ ಶೇ.6 ಏರಿಕೆಯಾಗಿದೆ.