ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಗೆಲುವಿನ ಬಳಿಕ ನಿಯೋಜಿತ ಅಧ್ಯಕ್ಷ ಡೆಮಾಕ್ರಟಿಕ್ ಪಕ್ಷದ ನಾಯಕ ಜೋ ಬಿಡೆನ್ ದೇಶವನ್ನು ಉದ್ದೇಶಿಸಿ ಮೊದಲ ಬಾರಿ ಮಾತನಾಡುತ್ತ, ಅಮೆರಿಕವನ್ನು ಒಂದಾಗಿ ಮುನ್ನಡೆಸುವ ಅಧ್ಯಕ್ಷನಾಗಿ ಕೆಲಸ ಮಾಡುವೆ. ವಿಭಜಿಸುವ ಕೆಲಸ ಮಾಡಲ್ಲ ಎಂಬ ಆಶ್ವಾಸನೆ, ಭರವಸೆಯನ್ನು ನೀಡಿದ್ದಾರೆ.
ದೇಶದ ಜನರು ನೀಡಿರುವ ಜನಾದೇಶವೇ ಸ್ಪಷ್ಟವಾಗಿದೆ. ಅವರು ತಮಗೇನು ಬೇಕು ಎಂಬುದನ್ನು ಅದರ ಮೂಲಕ ಹೇಳಿದ್ದಾರೆ. ಅದುವೇ ನಮಗೆ ಸಿಕ್ಕ ಸ್ಪಷ್ಟ ಗೆಲುವು. ಅವರು ಮನ ಒಪ್ಪಿಸುವ ವಿಜಯವನ್ನು ನಮಗೆ ಕೊಟ್ಟಿದ್ದಾರೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಅಧ್ಯಕ್ಷೀಯ ಅಭ್ಯರ್ಥಿಯೊಬ್ಬನಿಗೆ ದಾಖಲೆ ಪ್ರಮಾಣದ ಮತ ನೀಡಿದ್ದಾರೆ. ಈ ನಂಬಿಕೆಯನ್ನು ನಾನು ಉಳಿಸಿಕೊಳ್ಳುವೆ. ಕಳೆಯಲಾರೆ. ದೇಶವನ್ನು ವಿಭಜಿಸುವ ಕೆಲಸ ಮಾಡದೇ ಏಕೀಕರಣದ ಹಾದಿಯಲ್ಲಿ ಮುನ್ನಡೆಯುವ ಅಧ್ಯಕ್ಷನಾಗಿರುವೆ ಎಂದು ಶಪಥ ಮಾಡುತ್ತೇನೆ. ಅದರಂತೆ ನಡೆದುಕೊಂಡು ಅಮೆರಿಕ ಮತ್ತು ಅಮೆರಿಕನ್ನರ ವಿಶ್ವಾಸ ಗೆಲ್ಲುಲು ಹೃತ್ಪೂರ್ವಕವಾಗಿ ಕೆಲಸ ಮಾಡುವೆ ಎಂದು ಜೋ ಬಿಡೆನ್ ಹೇಳಿದ್ದಾರೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗ ಮತ ಹಾಕಿದವರಿಗೆ ಆಗಿರುವ ನಿರಾಶೆಯನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಈಗ ಪರಸ್ಪರ ಗೊಂದಲ ದೂರ ಮಾಡಿಕೊಳ್ಳೋಣ, ನಡುವಿನ ಬಿಗುಮಾನವನ್ನು ದೂರ ಮಾಡೋಣ. ಕೆಲಸ ಮಾಡುವುದಕ್ಕೆ ಪರಸ್ಪರ ಅವಕಾಶ ನೀಡುತ್ತ ಒಟ್ಟಾಗಿ ಕೆಲಸ ಮಾಡೋಣ. ನಮ್ಮ ವಿರೋಧಿಗಳನ್ನು ಶತ್ರುಗಳೆಂದು ಪರಿಗಣಿಸುವುದನ್ನು ನಿಲ್ಲಿಸೋಣ ಎಂದು ಜೋ ಬಿಡೆನ್ ಮನವಿ ಮಾಡಿದರು.
ಇದನ್ನೂ ಓದಿ: ತೀವ್ರ ಪೈಪೋಟಿಯಲ್ಲಿ ಜಯದ ಜೋಷ್
ನನಗೆ ಮತಹಾಕಿದವರಿಗೆ ನೀಡುವಷ್ಟೇ ಪ್ರಾಮುಖ್ಯತೆಯನ್ನು ನನಗೆ ಮತ ಹಾಕದವರಿಗೂ ಕೊಡುವೆ. ನನ್ನ ಮೇಲೆ ಇಟ್ಟಿರುವ ನಂಬಿಕೆ, ವಿಶ್ವಾಸಕ್ಕೆ ವಿಧೇಯನಾಗಿ ಕಠಿಣ ಶ್ರಮವಹಿಸಿ ದೇಶದ ಕೆಲಸ ಮಾಡುತ್ತೇನೆ. ಅಮೆರಿಕವನ್ನು ವಿಶ್ವ ಮತ್ತೆ ಗೌರವಿಸುವಂತೆ ಮಾಡುವುದಕ್ಕಾಗಿ ನಾನು ಶ್ರಮಿಸುವೆ. ಅದಕ್ಕೆ ಪೂರಕವಾಗಿ ಇಲ್ಲಿಯೂ ಒಮ್ಮತ, ಒಗ್ಗಟ್ಟು ಮೂಡುವಂತೆ ಮಾಡಲು ನಾನು ಅಧ್ಯಕ್ಷರ ಕಚೇರಿಯನ್ನು ಬಳಸಿಕೊಳ್ಳುವೆ ಎಂದು ಬಿಡೆನ್ ಭರವಸೆ ನೀಡಿದರು. (ಏಜೆನ್ಸೀಸ್)