ನ್ಯೂಸ್

ಅಮೆರಿಕಕ್ಕೆ ವಲಸೆ ನಿರ್ಬಂಧ ಆದೇಶಕ್ಕೆ ಸಹಿ ಹಾಕಿದ್ರು ಟ್ರಂಪ್​- ಇನ್ನು 60 ದಿನ ವಲಸೆಗಿಲ್ಲ ಅವಕಾಶ

ವಾಷಿಂಗ್ಟನ್​: ಕರೊನಾ COVID19 ವೈರಸ್ ಸೋಂಕು ತಡೆಗೆ ಲಾಕ್​ಡೌನ್ ಚಾಲ್ತಿಯಲ್ಲಿ ಇರುವ ಕಾರಣ ಅಮೆರಿಕನ್ನರ ಉದ್ಯೋಗದ ಹಿತವನ್ನು ಕಾಪಾಡುವ ಸಲುವಾಗಿ ವಿದೇಶೀಯರು ಅಮೆರಿಕಕ್ಕೆ ವಲಸೆ ಬರುವುದನ್ನು ತಪ್ಪಿಸಲು ಎಕ್ಸಿಕ್ಯೂಟಿವ್ ಆರ್ಡರ್​ಗೆ ಸಹಿ ಮಾಡುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಘೋಷಿಸಿದ್ದರು.

ಈ ಎಕ್ಸಿಕ್ಯೂಟಿವ್ ಆರ್ಡರ್​ ತಾತ್ಕಾಲಿಕ ಎಂಬುದನ್ನೂ ಅವರು ಹೇಳಿಕೊಂಡಿದ್ದರು. ಇದರಂತೆ, ಅಮೆರಿಕಕ್ಕೆ ವಲಸೆ ಬರುವುದನ್ನು ತಾತ್ಕಾಲಿಕವಾಗಿ ತಡೆಯುವ ಎಕ್ಸಿಕ್ಯೂಟಿವ್ ಆರ್ಡರ್​ಗೆ ಅಧ್ಯಕ್ಷ ಟ್ರಂಪ್ ಸಹಿ ಹಾಕಿದ್ದಾರೆ. ಈ ವಿಷಯವನ್ನು ಅವರು ತಮ್ಮ ದೈನಂದಿನ ಸುದ್ದಿಗೋಷ್ಠಿ ವೇಳೆ ಬುಧವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ವಲಸೆಯ ಮೇಲೆ ತಾತ್ಕಾಲಿಕ ನಿರ್ಬಂಧ ಹೇರಿದ ಕಾರಣ ಅಮೆರಿಕನ್ನರಿಗೇ ಉದ್ಯೋಗದಲ್ಲಿ ಮೊದಲ ಆದ್ಯತೆ ಸಿಗಲಿದೆ. ಈ ನಿರ್ಬಂಧ ಹೇರದೇ ಹೋದರೆ ಅಮೆರಿಕದಲ್ಲಿ ಉದ್ಯೋಗಾವಕಾಶ ತೆರೆಯುತ್ತಲೇ ಅದು ಅನ್ಯರ ಪಾಲಾಗಬಹುದು. ಅಮೆರಿಕನ್ನರು ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಗಬೇಕಾದೀತು. ಇದಕ್ಕಾಗಿಯೇ ಈ ಎಚ್ಚರಿಕೆಯ ನಡೆ ಎಂದು ಅವರು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಈ ಎಕ್ಸಿಕ್ಯೂಟಿವ್ ಆರ್ಡರ್​ನ ಪ್ರತಿಯನ್ನು ವೈಟ್​ ಹೌಸ್ ಪ್ರಕಟಿಸಿದ್ದು, ಹೊಸ ನಿಯಮಗಳ ಪ್ರಕಾರ ಇಮಿಗ್ರಂಟ್ ವೀಸಾ ಇಲ್ಲದ ವಿದೇಶೀಯರಿಗೆ ಇನ್ನು 60 ದಿನಗಳ ಕಾಲ ಅದನ್ನು ಪಡೆಯಲು ಅವಕಾಶವಿಲ್ಲ. ಅಮೆರಿಕದಲ್ಲಿರುವ ವಿದೇಶೀಯರ ಪೈಕಿ ಯಾರ ಬಳಿ ಅಧಿಕೃತ ಟ್ರಾವೆಲ್ ಡಾಕ್ಯುಮೆಂಟ್ ಇಲ್ಲವೋ ಅಥವಾ ಈ ಆರ್ಡರ್ ನಂತರ ಅವರಿಗೆ ಅಮೆರಿಕದಲ್ಲಿ ಪ್ರಯಾಣಿಸುವುದಕ್ಕೆ ಅಥವಾ ಪ್ರವೇಶಿಸುವುದಕ್ಕೆ ಅವಕಾಶ ಇರುವುದಿಲ್ಲ.

ಈ ಆದೇಶ ಈಗಾಗಲೇ ಅಮೆರಿಕದಲ್ಲಿ ಗ್ರೀನ್ ಕಾರ್ಡ್​ ಹೊಂದಿರುವ ವಿದೇಶೀಯರಿಗೆ ಅನ್ವಯವಾಗುವುದಿಲ್ಲ. ಅಲ್ಲದೆ, ಹೆಲ್ತ್​ಕೇರ್​ ಸಿಬ್ಬಂದಿಗೆ ಇದರಿಂದ ವಿನಾಯಿತಿ ಇದೆ. ಇನ್​ವೆಸ್ಟ್​ಮಂಟ್ ಕೆಟಗರಿಯಲ್ಲಿ ಲೀಗಲ್ ಪರ್ಮನೆಂಟ್ ರೆಸಿಡೆಂಟ್ ಆಗಿ ಪ್ರವೇಶಿಸುವವರಿಗೂ ಈ ಆದೇಶ ಅನ್ವಯವಲ್ಲ. (ಏಜೆನ್ಸೀಸ್​)