ನ್ಯೂಸ್

ಗದ್ದರ್​ ಅಂತ್ಯಸಂಸ್ಕಾರಕ್ಕೆ ಹೋಗಿದ್ದ ಪತ್ರಕರ್ತ ಹೃದಯಾಘಾತಕ್ಕೀಡಾಗಿ ಸಾವು

ಹೈದರಾಬಾದ್: ಚಿತ್ರನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಬ್ಯಾಂಕಾಕ್​ನಲ್ಲಿ ಹೃದಯಾಘಾತಕ್ಕೀಡಾಗಿ ನಿಧನರಾದ ಸುದ್ದಿ ಇಂದು ಎಲ್ಲೆಡೆ ವ್ಯಾಪಿಸಿರುವಾಗಲೇ ಹೃದಯಾಘಾತದಿಂದಾಗಿ ಪತ್ರಕರ್ತರೊಬ್ಬರು ಸಾವಿಗೀಡಾದ ಸುದ್ದಿ ಹೊರಬಿದ್ದಿದೆ.

ಉರ್ದು ಮ್ಯಾಗಜಿನ್ ಸಿಯಾಸತ್​ನ ವ್ಯವಸ್ಥಾಪಕ ಸಂಪಾದಕ ಝಹೀರುದ್ದೀನ್ ಅಲಿ ಖಾನ್​ (60) ಸಾವಿಗೀಡಾದ ಪತ್ರಕರ್ತ. ಕ್ರಾಂತಿಕಾರಿ ಕವಿ ಗದ್ದರ್ (ಗುಮ್ಮಡಿ ವಿಠಲ್ ರಾವ್​) ಅವರ ಅಂತ್ಯಸಂಸ್ಕಾರಕ್ಕೆ ಹೋಗಿದ್ದ ಅಲಿ ಖಾನ್ ಅಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದರು.

ಹೈದರಾಬಾದ್​ನ ಅಲ್ವಾಲ್​ನ ಭೂದೇವಿನಗರದ ಮಹಾಬೋಧಿ ವಿದ್ಯಾಲಯದಲ್ಲಿ ಇಂದು ಸಕಲ ಸರ್ಕಾರಿ ಗೌರವದೊಂದಿಗೆ ಗದ್ದರ್ ಅಂತ್ಯಸಂಸ್ಕಾರ ನಡೆದಿತ್ತು. ಅಲ್ಲಿಗೆ ತೆರಳಿ ಹೃದಯಾಘಾತಕ್ಕೆ ಒಳಗಾಗಿ ಎದೆನೋವಿನಿಂದ ಬಳಲುತ್ತಿದ್ದ ಅಲಿ ಖಾನ್ ಅವರನ್ನು ಹೈದರಾಬಾದ್​ನಲ್ಲಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಗಿತ್ತು. ಆದರೆ ಅಷ್ಟರಲ್ಲಾಗಲೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.