ತಿರುವನಂತಪುರಂ: ತಮ್ಮ ಪೂರ್ವವರ್ತಿ ಕೆ. ಶಿವನ್ ಅವರಿಗೆ ಸಂಬಂಧಿಸಿದಂತೆ ಕೆಲವು ವಿಮರ್ಶಾತ್ಮಕ ಟೀಕೆಗಳ ಕುರಿತು ವಿವಾದ ಭುಗಿಲೆದ್ದ ಹಿನ್ನೆಲೆಯಲ್ಲಿ ತಮ್ಮ ಮುಂಬರುವ ಆತ್ಮಚರಿತ್ರೆಯನ್ನು ಪ್ರಕಟಿಸುವುದರಿಂದ ಹಿಂದೆ ಸರಿಯುತ್ತಿರುವುದಾಗಿ ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಶನಿವಾರ ಹೇಳಿದ್ದಾರೆ.
‘ನಿಲವು ಕುಡಿಚ ಸಿಂಹಗಳ್’ (ಚಂದ್ರನ ಬೆಳಕನ್ನು ಸೇವಿಸಿದ ಸಿಂಹಗಳು) ಪುಸ್ತಕದ ಪ್ರಕಟಣೆಯನ್ನು ವಿವಾದದ ಹಿನ್ನೆಲೆಯಲ್ಲಿ ಹಿಂತೆಗೆದುಕೊಳ್ಳಲು ನಿರ್ಧರಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ. ಈಗಾಗಲೇ ಪುಸ್ತಕ ಪ್ರಕಟಿಸಿದಂತೆ ಪ್ರಕಾಶಕರಿಗೆ ಸೋಮನಾಥನ್ ಸೂಚನೆ ನೀಡಿದ್ದಾರೆ. ಇದರ ಜೊತೆಗೆ ಶಾರ್ಜಾ ಪ್ರವಾಸವನ್ನು ಸಹ ಇಸ್ರೋ ಮುಖ್ಯಸ್ಥರು ರದ್ದು ಮಾಡಿದ್ದಾರೆ. ಮುಂಬರುವ ಶಾರ್ಜಾ ಹಬ್ಬದಲ್ಲಿ ಪುಸ್ತಕವನ್ನು ಬಿಡುಗಡೆ ಮಾಡಲು ಸೋಮನಾಥನ್ ಅವರು ಎಲ್ಲ ತಯಾರಿ ಮಾಡಿಕೊಂಡಿದ್ದರು.
ತಮ್ಮನ್ನು ಇಸ್ರೋ ಮುಖ್ಯಸ್ಥರಾಗದಂತೆ ತಡೆಯಲು ಮಾಜಿ ಇಸ್ರೋ ಅಧ್ಯಕ್ಷ ಕೆ. ಶಿವನ್ ಯತ್ನಿಸಿದ್ದರು ಎಂದು ಹಾಲಿ ಮುಖ್ಯಸ್ಥ ಸೋಮನಾಥ್, ತಮ್ಮ ಆತ್ಮಕಥೆಯಲ್ಲಿ ಬಹಿರಂಗಪಡಿಸಿದ್ದಾರೆ. ಅಲ್ಲದೆ, ಶಿವನ್ ನೇತೃತ್ವದಲ್ಲಿ ನಡೆದ ಚಂದ್ರಯಾನ-2 ಮಿಷನ್ ವಿಫಲವಾದ ಕಾರಣದ ಬಗ್ಗೆಯೂ ಉಲ್ಲೇಖಿಸಿದ್ದಾರೆ.
2018ರಲ್ಲಿ ಇಸ್ರೋ ಅಧ್ಯಕ್ಷರು ಬದಲಾದಾಗ, ಕೆ. ಶಿವನ್ ಅವರ ಜತೆಗೆ ನನ್ನ ಹೆಸರು ಕೂಡ ಪಟ್ಟಿಯಲ್ಲಿತ್ತು. ಶಿವನ್ ಅವರಿಗೆ 60 ವರ್ಷ ತುಂಬಿದ್ದರಿಂದ ಹೊಸ ಇಸ್ರೋ ಮುಖ್ಯಸ್ಥರಾಗಲು ಇದು ನನ್ನ ಸರದಿ ಎಂದು ನಾನು ಭಾವಿಸಿದೆ. ಆದರೆ ಎಲ್ಲ ವಿರೋಧಾಭಾಸಗಳನ್ನು ಮುರಿದು ಶಿವನ್ ಇಸ್ರೋ ಮುಖ್ಯಸ್ಥರಾಗಿ ಆಯ್ಕೆಯಾದರು. ಹೀಗಿದ್ದರೂ ಕೂಡ ಕೆ. ಶಿವನ್ ಅವರು ವಿಎಸ್‌ಎಸ್‌ಸಿಯ ನಿರ್ದೇಶಕರಾಗಿಯೂ ಮುಂದುವರಿದರು. ಮೆರಿಟ್ ಅನುಸರಿಸಿದ್ದರೆ ನಿರ್ದೇಶಕ ಹುದ್ದೆ ನನಗೇ ಬರಬೇಕಿತ್ತು ಅಂತ ನೇರವಾಗಿ ಶಿವನ್ ಬಳಿ ವಿಚಾರಿಸಿದೆ. ಆದರೆ, ಅವರು ಉತ್ತರಿಸಲು ಹಿಂಜರಿಯುತ್ತಿದ್ದರು ಮತ್ತು ಪ್ರತಿ ಬಾರಿ ನುಣುಚಿಕೊಳ್ಳುತ್ತಿದ್ದರು. ನಂತರ ವಿಎಸ್‌ಎಸ್‌ಸಿ ಮಾಜಿ ನಿರ್ದೇಶಕ ಬಿ.ಎನ್.ಸುರೇಶ್ ಅವರ ನಿರ್ಣಾಯಕ ಮಧ್ಯಸ್ಥಿಕೆಯಿಂದ ನನಗೆ ನಿರ್ದೇಶಕ ಸ್ಥಾನ ಸಿಕ್ಕಿತು ಎಂದು ಸೋಮನಾಥ್ ಅವರು ಆತ್ಮಚರಿತ್ರೆಯಲ್ಲಿ ಬಹಿರಂಗಪಡಿಸಿದ್ದಾರೆ.
ಶಿವನ್ ಅವರು ಮೂರು ವರ್ಷಗಳ ನಂತರ ನಿವೃತ್ತರಾಗುವ ಬದಲು ಅಧ್ಯಕ್ಷರಾಗಿ ತಮ್ಮ ಅಧಿಕಾರಾವಧಿಯನ್ನು ವಿಸ್ತರಿಸಲು ಪ್ರಯತ್ನಿಸಿದರು. ಮುಂದಿನ ಅಧ್ಯಕ್ಷರನ್ನು ಆಯ್ಕೆ ಮಾಡುವ ಸಮಯ ಬಂದಾಗ, ಸಾಕಷ್ಟು ಜಾಣತನದಿಂದ, ಯು.ಆರ್.ರಾವ್ ಉಪಗ್ರಹ ಕೇಂದ್ರದ ನಿರ್ದೇಶಕರನ್ನು ಬಾಹ್ಯಾಕಾಶ ಆಯೋಗಕ್ಕೆ ಕರೆತರಲಾಯಿತು. ಈ ವೇಳೆ ಸಭಾಪತಿ ಹುದ್ದೆ ಮತ್ತೆ ನನ್ನಿಂದ ಜಾರುತ್ತಿದೆ ಎಂಬ ಸುಳಿವು ಸಿಕ್ಕಿತ್ತು ಎಂದಿದ್ದಾರೆ.
ಆತ್ಮಚರಿತ್ರೆಯು ಮುಖ್ಯವಾಗಿ ಯುವ ಪೀಳಿಗೆಯನ್ನು ಗುರಿಯಾಗಿರಿಸಿಕೊಂಡಿದೆ. ಹೆಚ್ಚು ವ್ಯಕ್ತಿಗಳು ಮಹತ್ವದ ಹುದ್ದೆಗೆ ಅರ್ಹರಾಗಿರಬಹುದು. ನಾನು ಆ ನಿರ್ದಿಷ್ಟ ಅಂಶವನ್ನು ಹೊರತರಲು ಪ್ರಯತ್ನಿಸಿದೆ. ಈ ವಿಷಯದಲ್ಲಿ ನಾನು ಯಾವುದೇ ನಿರ್ದಿಷ್ಟ ವ್ಯಕ್ತಿಯನ್ನು ಗುರಿಯಾಗಿಸಿಕೊಂಡಿಲ್ಲ ಎಂದು ಸೋಮನಾಥನ್ ಹೇಳಿದ್ದಾರೆ.
ಮುನ್ನೋಟದ ಭಾಗವಾಗಿ ಕೆಲವು ಪುಸ್ತಕಗಳನ್ನು ಪತ್ರಕರ್ತರಿಗೆ ವಿತರಿಸಿದ ಬಳಿಕ ಈ ವಿವಾದಗಳು ಹುಟ್ಟಿಕೊಂಡಿದ್ದು, ಇದೀಗ ಸೋಮನಾಥನ್ ಅವರು ಸ್ಪಷ್ಟನೆ ನೀಡಿದ್ದಾರೆ. (ಏಜೆನ್ಸೀಸ್)