ನ್ಯೂಸ್

ಯುಪಿಎಸ್​ಸಿ ಪರೀಕ್ಷೆ ಬರೆಯಲು ಈ ಅಧಿಕಾರಿಗೆ ಅಪ್ಪನೇ ಸ್ಫೂರ್ತಿ!

ಬಾಲಚಂದ್ರ ಕೋಟೆ, ಕುಕ್ಕೆಸುಬ್ರಹ್ಮಣ್ಯ

ಸಾಮಾನ್ಯರಿಗೂ ಅಸಾಮಾನ್ಯರಾಗುವ ಸಾಮರ್ಥ್ಯ ಖಂಡಿತ ಇರುತ್ತದೆ. ಆದರೆ ಅದರ ಅರಿವು ಅವರಿಗಿರುವುದಿಲ್ಲ ಅಥವಾ ಆಲಸ್ಯಕ್ಕೆ ಒಳಗಾಗಿರುತ್ತಾರೆ. ಇದನ್ನು ಮೆಟ್ಟಿ ನಿಂತವರು ಮಾತ್ರ ಸಾಧಕರಾಗುತ್ತಾರೆ. ಇಲ್ಲಿ ಫಲಪ್ರದವಾಗುವುದು ಅಭ್ಯರ್ಥಿಯ ಶ್ರಮ, ಬದ್ಧತೆ ಅಷ್ಟೆ ಎಂಬ ಕಿವಿಮಾತು ಹೇಳುತ್ತಾರೆ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರದ ಸಂಡೇ ಗೆಸ್ಟ್​ ಶ್ರೀ ಹರ್ಷ ನೆಟ್ಟಾರು.

ಶೈಕ್ಷಣಿಕ ಹಿನ್ನೆಲೆ

ಪ್ರಾಥಮಿಕ, ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಬಾಳಿಲ ವಿದ್ಯಾಬೋಧಿನಿ ಶಾಲೆಯಲ್ಲಿ ಪೂರ್ಣಗೊಳಿಸಿದರು. ಪಿಯುಸಿಯನ್ನು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಎಸ್​ಡಿಎಂ)ನಲ್ಲಿ ಪೂರೈಸಿದರು. ಮೈಸೂರಿನ ಜಯಚಾಮರಾಜೇಂದ್ರ ಇಂಜಿನಿಯರಿಂಗ್​ ಕಾಲೇಜಿನಿಂದ ಎಲೆಕ್ಟ್ರಾನಿಕ್ಸ್​ ಆ್ಯಂಡ್​ ಕಮ್ಯುನಿಕೇಷನ್​ನಲ್ಲಿ ಬಿ.ಇ ಪದವಿ ಪಡೆದುಕೊಂಡರು. ಕರ್ತವ್ಯಕ್ಕೆ ನಿಯೋಜನೆಗೊಂಡ ಕೆಲವು ಸಮಯದ ಬಳಿಕ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದರು.

ಕೃಷಿಕ ಕುಟುಂಬ

ಪ್ರಗತಿಪರ ಕೃಷಿಕರಾಗಿರುವ ತಂದೆ ಗೋಪಾಲಕೃಷ್ಣ ಭಟ್​ ನೆಟ್ಟಾರು, ತಾಯಿ ವಿಜಯಕುಮಾರಿ ಗೃಹಿಣಿ, ಇಬ್ಬರು ಸಹೋದರರು, ಪತ್ನಿ ಅಂಬಿಕಾ, ಇಬ್ಬರು ಮಕ್ಕಳ ಒಳಗೊಂಡ ಕುಟುಂಬವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ನಿವಾಸಿಗಳಾಗಿದ್ದಾರೆ.

ಗ್ರಂಥಾಯಲವೇ ಆಧಾರ

ಕನ್ನಡ ಲಿಟ್ರೇಚರ್​ ಆಯ್ದುಕೊಂಡಿದ್ದರು. ಕೊಂಚ ಸಮಯ ತರಬೇತಿ ತೆಗೆದುಕೊಂಡಿದ್ದು, ಬಳಿಕ ಸ್ಥಗಿತಗೊಳಿಸಿದರು. ಸ್ಥಳೀಯ ಗ್ರಂಥಾಯಲಗಳಿಗೆ ತೆರಳಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ಪುಸ್ತಕಗಳು, ಹಳೆಯ ಪ್ರಶ್ನೆಪತ್ರಿಕೆ ಬಿಡಿಸಲು ಆರಂಭಿಸಿದರು. ವಿಮರ್ಷಾತ್ಮಕ ಪುಸ್ತಕ, ಸಮ್ಮರಿಗಳ ನೋಟ್ಸ್​ ಮಾಡಿಕೊಂಡಿದ್ದು, ಅಧ್ಯಯನಕ್ಕೆ ಅನುಕೂಲವಾಯಿತು. ಪದೇ ಪದೇ ರಿವಿಜನ್​ ಮಾಡುವ ಮೂಲಕ ಸದಾ ಸಿದ್ಧತೆಯಲ್ಲಿಯೇ ಇದ್ದರು.

ಯುಪಿಎಸ್ಸಿಯತ್ತ ಚಿತ್ತ

ಪದವಿಯ ಬಳಿಕ 8 ವರ್ಷ ಸಾಫ್ಟ್​​ವೇರ್ ಕ್ಷೇತ್ರದಲ್ಲಿ ಉದ್ಯೋಗಿಯಾಗಿದ್ದ ಶ್ರೀ ಹರ್ಷ 2008ರಲ್ಲಿ ಯುಪಿಎಸ್ಸಿ ಪರೀಕ್ಷೆ ಯನ್ನು ಮೊದಲ ಬಾರಿ ಬರೆದರು. 2009, 2010, 2012 ಬರೆದರೂ ಯಶಸ್ಸು ಪಡೆದಿರಲಿಲ್ಲ. ಅಂತಿಮವಾಗಿ 2014ರಲ್ಲಿ ನಡೆದ ಪರೀಕ್ಷೆಯಲ್ಲಿ ಉತ್ತೀರ್ಣರಾದರು.

5ನೇ ಪ್ರಯತ್ನದಲ್ಲಿ ಯಶಸ್ಸು

ಮೊದಲ ರ್ಯಾಂಕಿಂಗ್​ ಪಟ್ಟಿಯಲ್ಲಿ ಜನರಲ್​ ಮೆರಿಟ್​ ಅನ್ವಯ 715ನೇ ರ್ಯಾಂಕ್​ ಪಡೆದರು. ರಿಸರ್ವ್​ ಪಟ್ಟಿಯಲ್ಲಿ 6ನೇ ರ್ಯಾಂಕ್​ ಪಡೆದಿದ್ದರು. 5ನೇ ಪ್ರಯತ್ನದಲ್ಲಿ ಯುಪಿಎಸ್ಸಿ ತೇರ್ಗಡೆಯಾಗುವಲ್ಲಿ ಯಶಸ್ವಿಯಾದರು.

ತರಬೇತಿ

ಉತ್ತರ ಪ್ರದೇಶದ ಗಾಜಿಯಾಬಾದ್​ನಲ್ಲಿರುವ ರಫಿ ಅಹ್ಮದ್​ ಕಿದ್ವಾಯಿ ನ್ಯಾಷನಲ್​ ಪೋಸ್ಟಲ್​ ಅಕಾಡೆಮಿಯಲ್ಲಿ ಪೋಸ್ಟಲ್​ ಸರ್ವಿಸ್​ನಲ್ಲಿ ತರಬೇತಿಗೆ ಒಳಪಟ್ಟಿದ್ದಾರೆ.

ಅಪ್ಪನೇ ಸ್ಫೂರ್ತಿ

ಸಮಾಜ ಸೇವೆಗಳಲ್ಲಿ ಆಸಕ್ತಿ ವಹಿಸಿದ್ದ ತಂದೆ ಭಾರತೀಯ ಕಿಸಾನ್​ ಸಂಘದಲ್ಲಿ ಸಕ್ರೀಯವಾಗಿದ್ದರು. ಪ್ರಾಥಮಿಕ ತರಗತಿಗೆ ಹೋಗುವಾಗಲೇ ಯುಪಿಎಸ್ಸಿ ಪರೀಕ್ಷೆ ಬರೆಯುವ ಕುರಿತು ಹಾಗೂ ಅದರ ಮಹತ್ವವನ್ನು ವಿವರಿಸಿದ್ದರು ಎಂದು ಶ್ರೀಹರ್ಷ ಹೇಳುತ್ತಾರೆ.

ಪ್ರಸ್ತುತ ಕರ್ತವ್ಯ

ಬೆಂಗಳೂರಿನಲ್ಲಿ ಸಾರ್ಟಿಂಗ್​ ಡಿವಿಷನ್​ನಲ್ಲಿ ಸೀನಿಯರ್​ ಸೂಪರಿಂಟೆಂಡೆಂಟ್​ ಆಫ್​ ರೈಲ್ವೆ ಮೇಲ್​ ಸರ್ವೀಸ್​ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮೊದಲು ಗಾಜಿಯಾಬಾದ್​ನಲ್ಲಿ 2 ವರ್ಷ ತರಬೇತಿಯಲ್ಲಿದ್ದು, ಬಳಿಕ ಮಧುರೈನಲ್ಲಿ ಹಾಗೂ ಮಂಗಳೂರಿನಲ್ಲಿಯೂ 4 ವರ್ಷ ಅವಧಿಗೆ ಎಸ್​ಎಸ್​ಪಿಒ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಸ್ಫೂರ್ತಿ ಮಾತು

ಯುಪಿಎಸ್ಸಿ ಪರೀಕ್ಷೆ ಬರೆಯಲು ನಿರ್ದಿಷ್ಟ ಹಿನ್ನೆಲೆಯ ಅವಶ್ಯಕತೆ ಇರುವುದಿಲ್ಲ. ಇಲ್ಲಿ ಫಲ ನೀಡುವುದು ಅಭ್ಯರ್ಥಿಗಳ ಶ್ರಮ, ಸತತ ಪ್ರಯತ್ನವಷ್ಟೆ. ಅಭ್ಯರ್ಥಿಗಳು ಪಡೆದುಕೊಳ್ಳುವ ಮಾರ್ಗದರ್ಶನದ ಆಧಾರದ ಮೇಲೆ ಫಲಿತಾಂಶ ನಿರ್ಧಾರವಾಗುತ್ತದೆ ಎನ್ನುವ ಮೂಲಕ ಭವಿಷ್ಯದ ಯುಪಿಎಸ್ಸಿ ಆಕಾಂಕ್ಷಿತ ಅಭ್ಯರ್ಥಿಗಳಿಗೆ ಸ್ಫೂರ್ತಿ ನೀಡಿದ್ದಾರೆ.