ಲಖನೌ: ಉತ್ತರಪ್ರದೇಶದ ಲಾಖಿಂಪುರ್ ಖೇಲಿಯಲ್ಲಿ ನಡೆದ ಪ್ರತಿಭಟನಾನಿರತ ರೈತರು ಮತ್ತು ಬಿಜೆಪಿ ಕಾರ್ಯಕರ್ತರ ನಡುವಿನ ಘರ್ಷಣೆಯಲ್ಲಿ ಎಂಟು ಜನರು ಸಾವಪ್ಪಿದ್ದಾರೆ. ಈ ಘಟನೆಗೆ ಎರಡೂ ಕಡೆಗಳಿಂದ ಬೇರೆ ಬೇರೆ ಚಿತ್ರಣಗಳನ್ನು ನೀಡಲಾಗುತ್ತಿದ್ದು, ವಾಸ್ತವಿಕವಾಗಿ ಅಲ್ಲಿ ನಡೆದದ್ದೇನು ಎಂಬ ಸತ್ಯಾಂಶ ಇನ್ನೂ ಹೊರಬೀಳಬೇಕಿದೆ.
ಹೀಗಿರುವಾಗ, ರೈತರ ಮೇಲೆ ಕಾರನ್ನು ಚಲಾಯಿಸಿದರೆಂದು ಆರೋಪಿಸಲಾಗುತ್ತಿರುವ ಕೇಂದ್ರ ಸಚಿವ ಅಜಯ್ ಮಿಶ್ರ ಅವರ ಮಗ ಆಶಿಶ್ ಮಿಶ್ರ, ತಾವು ಘಟನಾ ಸ್ಥಳದಲ್ಲಿ ಇರಲೇ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ಇಂಡಿಯ ಟುಡೇಗೆ ನೀಡಿರುವ ಸಂದರ್ಶನದಲ್ಲಿ, ತಾವು ಭಾನುವಾರ ಬೆಳಿಗ್ಗೆಯಿಂದ ಸಂಜೆವರೆಗೆ ಬನ್ಬೀರ್ಪುರ ಗ್ರಾಮದಲ್ಲಿ ನಡೆಯುತ್ತಿದ್ದ ಸಮಾರಂಭದಲ್ಲಿದ್ದುದಾಗಿ ಹೇಳಿದ್ದಾರೆ.
ಅವರ ಕಾನ್ವಾಯ್ ಘಟನಾ ಸ್ಥಳದ ಮೂಲಕ ಉಪಮುಖ್ಯಮಂತ್ರಿ ಕೇಶವ್ ಮೌರ್ಯ ಅವರನ್ನು ಕರೆದುತರಲು ಹೋಗುತ್ತಿತ್ತು. ಆಗ ಪ್ರತಿಭಟನಾನಿರತರಾಗಿದ್ದ 'ತಮ್ಮನ್ನು ತಾವೇ ರೈತರು ಎಂದು ಕರೆದುಕೊಳ್ಳುವ ಜನರು' ಅವರ ಕಾರಿನ ಚಾಲಕ ಹರಿಓಮ್ ಮಿಶ್ರಗೆ ಕಲ್ಲೆಸೆದರು. ತಲೆಗೆ ಪೆಟ್ಟು ಬಿದ್ದು ಸಮತೋಲನ ತಪ್ಪಿದ್ದರಿಂದ, ಆತ ಕಾರನ್ನು ಒಂದು ಮೂಲೆಗೆ ಓಡಿಸಿದರು. ಅದರಿಂದಾಗಿ ಕೆಲವು ಪ್ರತಿಭಟನಾಕಾರರ ಮೇಲೆ ಕಾರು ಚಲಿಸಿ ಒಬ್ಬ ರೈತ ಮುಖಂಡರೂ ಸಾವಪ್ಪಿದರು ಎಂದು ಆಶಿಶ್ ಮಿಶ್ರ ಹೇಳಿದ್ದಾರೆ.
"ಆಗ ಪ್ರತಿಭಟನಾಕಾರರು ಚಾಲಕನನ್ನು ಹೊರಗೆಳೆದು ಕೋಲುಗಳಿಂದ ಥಳಿಸಿ ಸಾಯಿಸಿದರು. ನಮ್ಮ ಇನ್ನೂ ನಾಲ್ಕೈದು ಜನರು ಸತ್ತಿದ್ದಾರೆ. ಮೂರ್ನಾಕು ಜನ ಕಾಣೆಯಾಗಿದ್ದಾರೆ. ಈ ಘಟನೆಯ ವಿಡಿಯೋ ಕೂಡ ಇದೆ" ಎಂದಿರುವ ಆಶಿಶ್ ಮಿಶ್ರ, "ಅವರು ನನ್ನ ಕಾರನ್ನು ಸುಟ್ಟು ಹಾಕಿದ್ದಾರೆ. ನಾನು ಅಲ್ಲಿದ್ದಿದ್ದರೆ ನಿಮ್ಮ ಮುಂದೆ ಸುರಕ್ಷಿತವಾಗಿ ನಿಂತಿರುತ್ತಿದ್ದೆನಾ?" ಎಂದು ಸಂದರ್ಶಕರನ್ನು ಪ್ರಶ್ನಿಸಿದ್ದಾರೆ. (ಏಜೆನ್ಸೀಸ್)