ನ್ಯೂಸ್

VIDEO | ಡಾಕೂ ಗಬ್ಬರ್ ಸಿಂಗ್​ಗೆ ಶಿಕ್ಷೆಯಾಗಿದ್ದು ಯಾಕೆ ಗೊತ್ತಾ? ಉತ್ತರಪ್ರದೇಶ ಪೊಲೀಸರ ಅನ್ವೇಷಣೆ!

ಕಾನ್ಪುರ: ಜನರಲ್ಲಿ ಕಾನೂನಿನ ಬಗ್ಗೆ ಅರಿವು ಮೂಡಿಸಲು, ಕರೊನಾ ನಿಯಮಾವಳಿ ಪಾಲಿಸುವಂತೆ ಪ್ರೇರೇಪಿಸಲು ಇತ್ತೀಚೆಗೆ ಪೊಲೀಸರು ಮಾಡುತ್ತಿರುವ ಪ್ರಯತ್ನಗಳು ತರಹೇವಾರಿ. ಈ ತೆರನ ವಿಭಿನ್ನ ಪ್ರಯತ್ನವೊಂದನ್ನು ಉತ್ತರಪ್ರದೇಶದ ಪೊಲೀಸ್ ಇಲಾಖೆ ತನ್ನ ಟ್ವಿಟರ್ ಖಾತೆಯಲ್ಲಿ ಮಾಡಿದೆ.

ಹಿಂದಿ ಚಲನಚಿತ್ರ 'ಶೋಲೆ'ಯಲ್ಲಿ ಬರುವ ಡಾಕೂ ಗಬ್ಬರ್ ಸಿಂಗ್ ಯಾರಿಗೆ ತಾನೇ ಗೊತ್ತಿಲ್ಲ. ಗಬ್ಬರ್ ಪಾತ್ರಧಾರಿ ಅಮ್ಜದ್ ಖಾನ್ ದರ್ಪದಿಂದ ಮಾತನಾಡುವ ಪರಿಯನ್ನು ಅನುಕರಿಸಿದವರೆಷ್ಟೋ ಜನ... ಆ ಚಿತ್ರದಲ್ಲಿ ಗಬ್ಬರ್​ನನ್ನು ಬಂಧಿಸುವ ಪೊಲೀಸ್ ಅಧಿಕಾರಿಯಾಗಿ ಸಂಜೀವ್ ಕುಮಾರ್ ನಟಿಸಿದ್ದಾರೆ. ಬಾಕ್ಸ್ ಆಫೀಸಿನಲ್ಲಿ ಹಿಟ್​ ಆದ ಐತಿಹಾಸಿಕ ಚಿತ್ರವಿದು. ಈಗ ಈ ಫ್ಲಾಶ್​ಬ್ಯಾಕಿಗೆ ಕಾರಣ ಉತ್ತರಪ್ರದೇಶದ ಪೊಲೀಸರ ಹೊಸ ಸಾರ್ವಜನಿಕ ಸಂದೇಶ. 'ಗಬ್ಬರ್​ಕೋ ಮಿಲಿ ಕಿಸ್​ ಬಾತ್​ ಕಿ ಸಜಾ?' (ಗಬ್ಬರ್​ಗೆ ಶಿಕ್ಷೆ ಸಿಕ್ಕಿದ್ದು ಯಾಕೆ?) ಎಂಬ ಶೀರ್ಷಿಕೆಯಡಿ ಟ್ವಿಟರ್​ನಲ್ಲಿ ಆ ವಿಡಿಯೋ ತುಣುಕು ಹಂಚಿಕೊಂಡಿರುವ ಪೊಲೀಸರು, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ಅಪರಾಧ; ಅದರಿಂದ ಕರೊನಾ ಹರಡುವ ಸಾಧ್ಯತೆಯೂ ಹೆಚ್ಚು ಎಂಬ ಸಂದೇಶ ನೀಡಿದ್ದಾರೆ.

ಯಾಕ್​ ಥೂ ಎಂದು ಗಬ್ಬರ್ ಉಗುಳುವ, ನಂತರ ಪೊಲೀಸ್​ ಅಧಿಕಾರಿ ಆತನನ್ನು ಅಟ್ಟಿಸಿಕೊಂಡು ಹೋಗಿ ಬಂಧಿಸುವ ದೃಶ್ಯವಿರುವ ಆ ವಿಡಿಯೋ ತುಣುಕನ್ನು ತೋರಿಸಿದ್ದಾರೆ. ಆಮೇಲೆ ಅದರಲ್ಲೇ ಕೊನೆಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ಕರೊನಾ ಹರಡುವಿಕೆಗೆ ಕಾರಣವಾಗುತ್ತೆ ಮತ್ತು ಅದು ಶಿಕ್ಷಾರ್ಹ ಅಪರಾಧ ಎಂಬ ಸಂದೇಶವನ್ನೂ ಬಿತ್ತರಿಸಿದ್ದಾರೆ. ಈ ಟ್ವೀಟ್ ವೈರಲ್ ಆಗಿದ್ದು, ಪೊಲೀಸರ ಈ ಸೃಜನಾತ್ಮಕ ಪ್ರಯತ್ನಕ್ಕೆ ಹಲವು ನೆಟ್ಟಿಗರ ಪ್ರಶಂಸೆ ಸಿಕ್ಕಿದೆ. ಜೊತೆಗೆ ಪಾನ್ ತಿಂದು ಉಗುಳುವ ಕಾನ್ಪುರದ ಜನರ ಬಗ್ಗೆ ಕೂಡ ಹಲವಾರು ಮೀಮ್​ಗಳು ಬಂದಿವೆ.​