ನ್ಯೂಸ್

ಇದು ಅದೃಷ್ಟ ಅಂದ್ರೆ! ಕೆಲ್ಸ ಮಾಡದೇ ಮುಂದಿನ 25 ವರ್ಷ ಪ್ರತಿ ತಿಂಗಳು 5.5 ಲಕ್ಷ ರೂ. ಗಳಿಸಲಿದ್ದಾರೆ ಈ ವ್ಯಕ್ತಿ

ದುಬೈ: ಅದೃಷ್ಟ ಯಾವಾಗ? ಯಾರಿಗೆ? ಯಾವ ರೂಪದಲ್ಲಿ ಬರುತ್ತದೆ ಎಂದು ಅಂದಾಜಿಸಲಾಗದು. ಸಾಮಾನ್ಯ ವ್ಯಕ್ತಿಗೆ ಲಾಟರಿ ಹೊಡೆದು ಕೋಟ್ಯಾಧಿಪತಿ ಆಗಿರುವುದನ್ನು ನೋಡಿ ನಮಗ್ಯಾಕೆ ಇಂಥ ಅದೃಷ್ಟ ಬರಬಾರದೆಂದು ಅಂದುಕೊಂಡಿರುತ್ತೇವೆ. ಆದರೆ, ಅದೆಲ್ಲ ಕಾಲದ ಮಹಿಮೆಯಷ್ಟೇ. ಅಂಥದ್ದೆ ಮಹಿಮೆ ಇದೀಗ ಉತ್ತರ ಪ್ರದೇಶ ಮೂಲದ ವ್ಯಕ್ತಿಯೊಬ್ಬನ ಬದುಕಲ್ಲಿ ನಡೆದಿದ್ದು, ಈ ಸ್ಟೋರಿ ಓದಿದ್ರೆ ಎಂಥಾ ಅದೃಷ್ಟನಪ್ಪಾ ಎಂದು ಹುಬ್ಬೇರಿಸದೇ ಇರಲಾರಿರಿ.

ಗುರುವಾರ ಗಲ್ಫ್​ ನ್ಯೂಸ್​ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಫಾಸ್ಟ್​ 5 ಲಕ್ಕಿ ಡ್ರಾ ವಿಜೇತನ ಹೆಸರು ಘೋಷಣೆ ಮಾಡಲಾಯಿತು. ಇದರಲ್ಲಿ ಮೊದಲ ಬಹುಮಾನಕ್ಕೆ ಉತ್ತರ ಪ್ರದೇಶ ಮೂಲದ ಮೊಹಮ್ಮದ್​ ಆದಿಲ್​ ಖಾನ್​ ಭಾಜನರಾಗಿದ್ದಾರೆ.

ತಿಂಗಳಿಗೆ 5.5 ಲಕ್ಷ ರೂಪಾಯಿ

ಮೊಹಮ್ಮದ್​ ಆದಿಲ್​ ಖಾನ್​ ಎಂಬುವರು ದುಬೈನಲ್ಲಿ ಆರ್ಕಿಟೆಕ್ಟ್​ ಆಗಿ ಕೆಲಸ ಮಾಡುತ್ತಿದ್ದಾರೆ. ಇದೀಗ ಅವರು ಯುಎಇಯ ಫಾಸ್ಟ್​ 5 ಲಕ್ಕಿ ಡ್ರಾನಲ್ಲಿ ಮೊದಲ ಬಹುಮಾನ ಗಳಿಸಿದ್ದು, ಇದರ ಪ್ರಕಾರ ಮುಂದಿನ 25 ವರ್ಷಗಳವರೆಗೆ ಪ್ರತಿ ತಿಂಗಳು 5.5 ಲಕ್ಷ ರೂ. ಹಣವನ್ನು ಪಡೆಯಲಿದ್ದಾರೆ. ಅದು ಕೂಡ ಏನೂ ಕೆಲಸ ಮಾಡದೆ ಹಣ ಗಳಿಸಲಿದ್ದಾರೆ. ಇದನ್ನು ಕೇಳಿದವರು ಇದಲ್ವಾ ನಿಜವಾದ ಅದೃಷ್ಟ ಎಂದು ಹೇಳುತ್ತಿದ್ದಾರೆ.

ದುಬೈನ ರಿಯಲ್​ ಎಸ್ಟೇಟ್​ ಕಂಪನಿಯೊಂದರಲ್ಲಿ ಖಾನ್​ ಇಂಟಿರಿಯರ್​ ಡಿಸೈನರ್​ ಸಮಾಲೋಚಕರಾಗಿ ಕೆಲಸ ಮಾಡುತ್ತಿದ್ದಾರೆ. ಲಾಟರಿಯಲ್ಲಿ ಬಹುಮಾನ ಬಂದ ಕೂಡಲೇ ಖಾನ್​ ಸಂತಸ ವ್ಯಕ್ತಪಡಿಸಿದ್ದು, ಈ ಗೆಲುವಿಗೆ ಕೃತಜ್ಞರಾಗಿರುತ್ತೇನೆ ಮತ್ತು ಇದು ಬಹಳ ಮುಖ್ಯವಾದ ಸಮಯದಲ್ಲಿ ಬಂದಿದೆ ಎಂದಿದ್ದಾರೆ.

ಸಕಾಲಕ್ಕೆ ಬಂದ ಹಣ

ನನ್ನ ಕುಟುಂಬಕ್ಕೆ ನಾನೊಬ್ಬನೆ ಮುಖ್ಯ ಆಧಾರ. ನನ್ನ ಸಹೋದರ ಕರೊನಾ ಸಾಂಕ್ರಾಮಿಕ ಸಮಯದಲ್ಲಿ ನಿಧನರಾದರು. ಅವರ ಕುಟುಂಬದ ಜವಬ್ದಾರಿಯೂ ನನ್ನ ಮೇಲೆ ಬಿದ್ದಿದೆ. ಅಲ್ಲದೆ, ನನಗೆ ವಯಸ್ಸಾದ ಪೋಷಕರು ಮತ್ತು ಐದು ವರ್ಷದ ಮಗಳು ಇದ್ದಾರೆ. ಹೀಗಾಗಿ ಈಗ ಗೆದ್ದಿರುವ ಹೆಚ್ಚುವರಿ ಹಣ ಸಕಾಲಕ್ಕೆ ಬರುತ್ತದೆ ಎಂದರು. ಬಹುಮಾನ ಬಂದಿರುವ ಸುದ್ದಿ ತಿಳಿದ ಕೂಡಲೇ ನನಗೆ ಆಶ್ಚರ್ಯವಾಯಿತು ಎಂದು ಖಾನ್ ಹೇಳಿದರು.

ಈ ವಿಚಾರವನ್ನು ನನ್ನ ಕುಟುಂಬಕ್ಕೆ ಹೇಳಿದಾಗ ಅವರು ಕೂಡ ಅದನ್ನು ನಂಬಲು ತಯಾರಿರಲಿಲ್ಲ. ಈ ಸುದ್ದಿಯ ಸತ್ಯಾಸತ್ಯತೆಗಾಗಿ ಎರಡು ಬಾರಿ ಪರಿಶೀಲಿಸಲು ನನಗೆ ಸಲಹೆ ನೀಡಿದರು. ಆದರೆ, ನಿಜ ಅಂತಾ ಗೊತ್ತಾದಾಗ ತುಂಬಾ ಖಷಿಪಟ್ಟರು ಎಂದು ಖಾನ್​ ತಿಳಿಸಿದರು.

ಮೊದಲ ಬಹುಮಾನವಿದು

ಎಮಿರೇಟ್ಸ್ ಲಕ್ಕಿ ಡ್ರಾ, ಆಯೋಜಿಸುವ ಟೈಚೆರೋಸ್‌ನ ಮಾರ್ಕೆಟಿಂಗ್ ಮುಖ್ಯಸ್ಥ ಪೌಲ್ ಚಾಡರ್ ಮಾತನಾಡಿ, ಬಿಡುಗಡೆಯಾದ ಕೆಲವೇ ವಾರಗಳಲ್ಲಿ ಫಾಸ್ಟ್ 5 ಲಕ್ಕಿ ಡ್ರಾನ ಮೊದಲ ವಿಜೇತರನ್ನು ಘೋಷಿಸಲು ನಾವು ತುಂಬಾ ಸಂತೋಷಪಡುತ್ತೇವೆ. ನಾವು ಇದನ್ನು ಫಾಸ್ಟ್ 5 ಎಂದು ಕರೆಯಲು ಕಾರಣವೆಂದರೆ, ಬಹು-ಮಿಲಿಯನೇರ್ ಆಗಲು ಇದು ಅತ್ಯಂತ ವೇಗವಾದ ಮಾರ್ಗವಾಗಿದೆ ಎಂದು ಹೇಳಿದರು.

ಈ ರೀತಿಯ ಬಹುಮಾನದ ಗೆಲುವು ವಿಜೇತರಿಗೆ ಮುಂದಿನ 25 ವರ್ಷಗಳವರೆಗೆ ನಿಯಮಿತ ಪಾವತಿಯನ್ನು ಖಚಿತಪಡಿಸುತ್ತದೆ ಎಂದು ಪೌಲ್ ಚಾಡರ್ ಹೇಳಿದರು. (ಏಜೆನ್ಸೀಸ್​​)