ನಾನಾ-ನೀವಾ ನೋಡೇ ಬಿಡೋಣ! ದಿವ್ಯಾ ವಸಂತ ಸೇರಿ ಕೆಲ ಯೂಟ್ಯೂಬರ್ಸ್​ಗೆ ಡ್ರೋನ್​ ಪ್ರತಾಪ್​ ಸವಾಲು

Done Prathap
Published on

ಬೆಂಗಳೂರು: ಮಾತಿನ ಕಲೆ ಗೊತ್ತಿದ್ದರೆ ಯಾರನ್ನು ಬೇಕಾದರೂ ಮೂರ್ಖರ ನ್ನಾಗಿಸಬಹುದು ಎಂಬುದನ್ನು ನಿರೂಪಿಸಿರುವ ಮಳವಳ್ಳಿ ತಾಲೂಕಿನ ನೆಟ್ಕಲ್ ಗ್ರಾಮದ ನಕಲಿ ವಿಜ್ಞಾನಿ ಡ್ರೋನ್ ಪ್ರತಾಪ್​ ಸದಾ ಒಂದಿಲ್ಲೊಂದು ವಿಚಾರದಲ್ಲಿ ಸುದ್ದಿಯಾಗುತ್ತೇಲೇ ಇರುತ್ತಾರೆ. ಮರುಬಳಕೆ ವಸ್ತುಗಳಿಂದ ಡ್ರೋನ್​ ತಯಾರಿಸಿದ್ದೇನೆಂದು ಕಾಗೆ ಹಾರಿಸಿ ಜನರ ನಂಬಿಕೆಯನ್ನು ಹುಸಿ ಮಾಡಿದ ಡ್ರೋನ್​ ಪ್ರತಾಪ್​, ತೀವ್ರ ಟೀಕೆಗೆ ಗುರಿಯಾಗಿದ್ದರು. ಅಲ್ಲದೆ, ಅವರ ವಿರುದ್ಧ ಸಾಕಷ್ಟು ಟ್ರೋಲ್​ಗಳು ಆಗಿದ್ದವು.​ ಇಂದಿಗೂ ಅವರನ್ನು ಟ್ರೋಲ್​ ಮಾಡುತ್ತಲೇ ಇರುತ್ತಾರೆ.

ಇದೀಗ ಟ್ರೋಲ್​ ಮಾಡುವವರ ವಿರುದ್ಧ ಡ್ರೋನ್​ ಪ್ರತಾಪ್​ ಕಾನೂನು ಸಮರ ಸಾರಿದ್ದಾರೆ. ಸದ್ಯ ಡ್ರೋನ್​ ಪ್ರತಾಪ್​ ಅವರು ಹಳ್ಳಿಗಳಿಗೆ ಹೋಗಿ ಡ್ರೋನ್​ ಪರಿಚಯ ಮಾಡಿಕೊಡುವ ಮೂಲಕ ಅವುಗಳ ಮಾರಾಟವನ್ನು ಮಾಡುತ್ತಿದ್ದಾರೆ. ಅವರು ಡ್ರೋನ್​ ಹಾರಿಸುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ವೈರಲ್​ ಆಗುತ್ತಿರುತ್ತವೆ. ಅಲ್ಲದೆ, ಹಲವರು ಪ್ರತಾಪ್​ ಅವರನ್ನು ಇಂದಿಗೂ ಟ್ರೋಲ್​ ಮಾಡುತ್ತಿರುವುದು ಅವರ ಗಮನಕ್ಕೆ ಬಂದಿದ್ದು, ಇದೀಗ ಅವರ ವಿರುದ್ಧ ಕಾನೂನಿನ ಸಮರ ಸಾರಿದ್ದಾರೆ.

ಮಾನನಷ್ಟ ಮೊಕದ್ದಮ್ಮೆ 

ತನ್ನ ವಿರುದ್ಧ ಟ್ರೋಲ್​ ಮಾಡಿದ ಯೂಟ್ಯೂಬರ್ಸ್​ ವಿರುದ್ಧ ಡ್ರೋನ್​ ಪ್ರತಾಪ್​, ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮ್ಮೆ ದಾಖಲಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಡ್ರೋನ್​ ಪ್ರತಾಪ್​ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ನೇಮಿಸ್​ ಮಧು ಎಂಬ ಯೂಟ್ಯೂಬರ್​ ವಿರುದ್ಧ ಮಾನನಷ್ಟ ಮೊಕದ್ದಮ್ಮೆ ದಾಖಲಿಸಿರುವುದಾಗಿ ಹೇಳಿದ್ದಾರೆ.

ಇನ್ಮೇಲೆ ನಮ್ಮ ನಿಮ್ಮ ಭೇಟಿ ಕೋರ್ಟಿನಲ್ಲಿ

ಇದಿಷ್ಟೇ ಅಲ್ಲದೆ, ಸಂದೀಪ್​, ಉತ್ತರ ಕರ್ನಾಟಕದ ಉಡಾಳ್​ ಪಾವ್ಯ ಮತ್ತು ದಿವ್ಯಾ ವಂಸತ ವಿರುದ್ಧ ಡ್ರೋನ್​ ಪ್ರತಾಪ್​ ಮೊಕದ್ದಮ್ಮೆ ಹೂಡಿದ್ದು, ನೋಟಿಸ್​ ಸಹ ಕಳುಹಿಸಿದ್ದಾರೆ. 30 ಲಕ್ಷ ರೂಪಾಯಿಯನ್ನು ಪರಿಹಾರವಾಗಿ ಕೇಳಿದ್ದಾರೆ. ನೀವು ಸುಳ್ಳಾ? ನಾನು ಸುಳ್ಳಾ? ಅಂತಾ ನೋಡೋಣ. ಬನ್ನಿ ಕೋರ್ಟಿನಲ್ಲಿ ನಿರ್ಧಾರವಾಗುತ್ತೆ. ಕೋರ್ಟಿನಲ್ಲೇ ನಿರ್ಧಾರ ಮಾಡಿಕೊಳ್ಳಿ. ಇನ್ಮೇಲೆ ನಮ್ಮ ನಿಮ್ಮ ಭೇಟಿ ಕೋರ್ಟಿನಲ್ಲಾಗುತ್ತೆ ಎಂದು ಡ್ರೋನ್​ ಪ್ರತಾಪ್​ ಸವಾಲು ಹಾಕಿದ್ದಾರೆ.

ಡ್ರೋನ್​ ಪ್ರತಾಪ್​ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಹೇಗೆ ಹಣ ಮಾಡಬೇಕು? ಟ್ರೋಲ್​ ಆಗುವಂತೆ ಏನಾದರೊಂದನ್ನು ಮಾಡಿ ಮತ್ತು ಸರಿಯಾದ ಸಮಯಕ್ಕೆ ಕಾಯಿರಿ ಹಾಗೂ ಮಾನನಷ್ಟ ಮೊಕದ್ದಮೆ ದಾಖಲಿಸಿ ಎಂದು ಕಾಮೆಂಟ್​ ಮೂಲಕ ಡ್ರೋನ್​ ಪ್ರತಾಪ್​ ಅವರ ನಡೆಯನ್ನು ನೆಟ್ಟಿಗರು ಟೀಕಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net