ನ್ಯೂಸ್

ನಮಾಜ್​​ಗಾಗಿ ಬಸ್ ನಿಲ್ಲಿಸಿದ್ದಕ್ಕೆ ಕೆಲಸದಿಂದ​​ ವಜಾ ಮಾಡಿದರೆಂದು ಸಾವಿಗೆ ಶರಣಾದ ಕಂಡಕ್ಟರ್

ಉತ್ತರಪ್ರದೇಶ: ನಮಾಜ್‌ಗಾಗಿ ಬಸ್ ನಿಲ್ಲಿಸಿದ ಆರೋಪದ ಮೇಲೆ ಉತ್ತರ ಪ್ರದೇಶದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಆರ್‌ಟಿಸಿ) ಕಂಡಕ್ಟರ್‌ನನ್ನು ವಜಾ ಗೊಳಿಸಿದೆ. ಇದರಿಂದ ತೀವ್ರವಾಗಿ ಮನನೊಂದ ವ್ಯಕ್ತಿ ರೈಲಿನಡಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೋಹಿತ್ ಯಾದವ್​​ ಮೃತ, ಆರ್‌ಟಿಸಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದನು. ಮಾನವೀಯತೆ ಮೆರೆದು ಬಸ್ ನಿಲ್ಲಿಸಿದ್ದಕ್ಕೆ ಪತಿಯನ್ನು ಕೆಲಸದಿಂದ ವಜಾ ಮಾಡಿದ್ದಕ್ಕೆ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ಪತ್ನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಡೆದಿದ್ದೇನು?: ಮೋಹಿತ್ ಯಾದವ್ ಎಂಬ ವ್ಯಕ್ತಿ ಉತ್ತರ ಪ್ರದೇಶದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದನು. ಈತನ ಕುಟುಂಬದಲ್ಲಿ ಎಂಟು ಜನರಿದ್ದರು. ಕುಟುಂಬದ ಹಿರಿಯರಾದ ಕಾರಣ ಸಂಸಾರದ ಹೊರೆಯೆಲ್ಲ ಅವನ ಮೇಲಿತ್ತು. ಮೋಹಿತ್ ಯಾದವ್ ಗುತ್ತಿಗೆ ಆಧಾರದ ಮೇಲೆ ಕೇವಲ 17 ಸಾವಿರ ರೂ.ಗೆ ಕೆಲಸ ಮಾಡುತ್ತಿದ್ದನು. ಕಳೆದ ಜೂನ್‌ನಲ್ಲಿ ಒಂದು ದಿನ ಮೋಹಿತ್ ಬರೇಲಿಯಿಂದ ದೆಹಲಿಗೆ ಹೋಗುತ್ತಿದ್ದ ಬಸ್‌ನಲ್ಲಿ ಕರ್ತವ್ಯದಲ್ಲಿದ್ದನು. ಆ ಬಸ್ಸಿನಲ್ಲಿ ಇಬ್ಬರು ಮುಸ್ಲಿಮರು ಪ್ರಯಾಣಿಸುತ್ತಿದ್ದರು. ನಮಾಜ್‌ಗೆ ಸಮಯವಾದ್ದರಿಂದ ಕಂಡಕ್ಟರ್ ಬಸ್ ನಿಲ್ಲಿಸುವಂತೆ ಹೇಳಿದರು. ಮೋಹಿತ್ ಪರವಾಗಿಲ್ಲ ಎಂದು ಹೇಳಿ ಬಸ್ಸನ್ನು ಸ್ವಲ್ಪ ಹೊತ್ತು ನಿಲ್ಲಿಸಿದ್ದನು. ಈ ವೇಳೆ ಇಬ್ಬರು ಮುಸ್ಲಿಂ ವ್ಯಕ್ತಿಗಳು ಪ್ರಾರ್ಥನೆ ಸಲ್ಲಿಸಿದ್ದಾರೆ.

ಈ ವಿಷಯ ಸಾರಿಗೆ  ಆಡಳಿತ ಮಂಡಳಿಗೆ ಗೊತ್ತಾಗಿತ್ತು. ಈ ಪರಿಣಾಮವಾಗಿ, UP RTC ಅವರ ಒಪ್ಪಂದವನ್ನು ಕೊನೆಗೊಳಿಸಿ ಕೆಲಸದಿಂದ ವಜಾ ಮಾಡಲಾಗಿತ್ತು. ವಿವರಣೆಯನ್ನೂ ಕೇಳದೆ ಕೆಲಸದಿಂದ ವಜಾಗೊಳಿಸಿದ್ದಕ್ಕೆ ಮೋಹಿತ್ ಬೇಸರಗೊಂಡಿದ್ದನು. ಈ ಬಗ್ಗೆ ಆಡಳಿತ ಮಂಡಳಿಗೆ ಕೇಳಿದರೂ ಉತ್ತರ ನೀಡುತ್ತಿಲ್ಲ. ಇದರೊಂದಿಗೆ ಸಂಸಾರಕ್ಕಾಗಿ ಬೇರೆ ಕೆಲಸ ಹುಡುಕತೊಡಗಿದ. ಆದರೆ ಹಲವು ಕಡೆ ಪ್ರಯತ್ನಿಸಿದರೂ ಕೆಲಸ ಸಿಗಲಿಲ್ಲ. ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದ ಮೋಹಿತ್ ಯಾದವ್ ಸೋಮವಾರ ರೈಲಿನಡಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.