ನ್ಯೂಸ್

ಸಂವಿಧಾನ, ಪ್ರಜಾಪ್ರಭುತ್ವ ರಕ್ಷಣೆಗೆ ಪ್ರತಿಪಕ್ಷಗಳ ಒಗ್ಗಟ್ಟು

ಮುಂಬೈ: ಸಂವಿಧಾನ ಮತ್ತು ದೇಶದಲ್ಲಿ ಪ್ರಜಾಪ್ರಭುತ್ವವನ್ನು ರಕ್ಷಿಸಲು ತಾವು ಒಗ್ಗಟ್ಟಾಗಿರುವುದಾಗಿ ಪ್ರತಿಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ದ ನಾಯಕರು ಗುರುವಾರ ಪ್ರತಿಪಾದಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಜಿಜೆಪಿ ವಿರುದ್ಧ ಹೋರಾಡಲು ಸಾಮಾನ್ಯ ಕಾರ್ಯಕ್ರಮ ರೂಪಿಸಲಾಗುವುದು ಎಂದು ಇಲ್ಲಿ ಗುರುವಾರ ಆರಂಭವಾದ ಇಂಡಿಯಾದ ಎರಡು ದಿನಗಳ ಸಭೆಯ ವೇಳೆ ಮುಖಂಡರು ಹೇಳಿದರು. ಇದು ಮೈತ್ರಿಕೂಟದ ಮೂರನೇ ಸಭೆಯಾಗಿದ್ದು ಶುಕ್ರವಾರ ಮುಂದುವರಿಯಲಿದೆ. ಮೊದಲೆರಡು ಸಭೆಗಳು ಪಾಟ್ನಾ ಮತ್ತು ಬೆಂಗಳೂರಿನಲ್ಲಿ ನಡೆದಿದ್ದವು.

ಗ್ರಾ್ಯಂಡ್ ಹಯಾತ್ ಹೋಟೆಲ್​ನಲ್ಲಿ ನಡೆಯುತ್ತಿರುವ ಸಭೆಯಲ್ಲಿ ಮಾತನಾಡಿದ ಬಿಹಾರದ ಮಾಜಿ ಸಿಎಂ ಹಾಗೂ ರಾಷ್ಟ್ರೀಯ ಜನತಾ ದಳದ (ಆರ್​ಜೆಡಿ) ನಾಯಕ ಲಾಲೂ ಪ್ರಸಾದ್ ಯಾದವ್, ದೇಶದ ಏಕತೆ ಮತ್ತು ಸಾರ್ವಭೌಮತೆ ಯನ್ನು ಬಲಪಡಿಸುವುದು ಕಾಲದ ಅಗತ್ಯವಾಗಿದೆ ಎಂದು ಹೇಳಿದರು. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಯೂ ಮಹತ್ವದ್ದಾಗಿದೆ ಎಂದರು. ಬಡತನ ಮತ್ತು ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವಲ್ಲಿ ಹಾಗೂ ರೈತರ ಕಲ್ಯಾಣ ಸಾಧಿಸುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ ಎಂದವರು ಆರೋಪಿಸಿದರು. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಪ್ರತಿಪಕ್ಷಗಳು ಒಬ್ಬ ಸಾಮಾನ್ಯ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಅಗತ್ಯ ಎಂದು ಲಾಲೂ ಅಭಿಪ್ರಾಯಪಟ್ಟರು.

ಬಿಹಾರದಲ್ಲಿ ಕಳೆದ ವರ್ಷ ಆಗಸ್ಟ್​ನಲ್ಲಿ ಮಹಾ ಘಟಬಂಧನ್ ಅಧಿಕಾರಕ್ಕೆ ಬಂದಿದೆ. ಆ ಅನುಭವದ ಆಧಾರದಲ್ಲಿ ರಾಷ್ಟ್ರ ಮಟ್ಟದಲ್ಲಿ ಸಮಾನಮನಸ್ಕ ಪ್ರತಿಪಕ್ಷಗಳ ಮೈತ್ರಿ ಸಾಧಿಸಲು ಲಾಲೂ ಯಾದವ್ ಮತ್ತು ಬಿಹಾರ ಮುಖ್ಯಮಂತ್ರಿಯೂ ಆಗಿರುವ ಜೆಡಿಯು ನಾಯಕ ನಿತೀಶ್ ಕುಮಾರ್ ನಿರ್ಧರಿಸಿದ್ದಾರೆ ಎಂದು ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಶ್ಲಾಘಿಸಿದರು. ಅದಾದ ಒಂದು ವರ್ಷದ ನಂತರ ಇಂಡಿಯಾ ಮೈತ್ರಿಕೂಟದ ಸಭೆಗಾಗಿ ಎಲ್ಲರೂ ಮುಂಬಯಿಯಲ್ಲಿ ಒಂದಾಗಿದ್ದೇವೆ ಎಂದರು. ‘ಸಮಾಜವನ್ನು ಒಡೆಯುವ ಶಕ್ತಿಗಳಿಗೆ’ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅವರ ನಿರೀಕ್ಷೆಯನ್ನು ನಾವು ಈಡೇರಿಸದಿದ್ದರೆ ಜನತೆ ನಮ್ಮನ್ನು ಕ್ಷಮಿಸುವುದಿಲ್ಲ ಎಂದರು.

ಬಿಜೆಪಿಗೆ ನಡುಕ

ಇಂಡಿಯಾ ಕೂಟಕ್ಕೆ ಜನರ ಪ್ರತಿಕ್ರಿಯೆ ಕಂಡು ಬಿಜೆಪಿ ಹಾಗೂ ಪ್ರಧಾನಿ ಮೋದಿ ಎದೆಗುಂದಿದ್ದಾರೆ ಎಂದು ಮಾರ್ಕ್ಸ್​ವಾದಿ ಕಮ್ಯೂನಿಸ್ಟ್ ಪಕ್ಷದ (ಸಿಪಿಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿ ವಿಶ್ಲೇಷಿಸಿದರು. ಇಂಡಿಯಾ ಮೈತ್ರಿಕೂಟದ ಬಗ್ಗೆ ಬಿಜೆಪಿ ಭಯಗೊಂಡಿದೆ ಎಂದು ಆಮ್ ಆದ್ಮಿ ಪಕ್ಷದ (ಆಪ್) ನಾಯಕ ರಾಘವ್ ಛಡ್ಡಾ ಹೇಳಿದರು. ಬಿಜೆಪಿಯವರು ಇಂಡಿಯಾ ಹೆಸರನ್ನೇ ದ್ವೇಷಿಸುತ್ತಾರೆ. ಅದನ್ನು ಒಂದು ಭಯೋತ್ಪಾದನೆ ಸಂಘಟನೆ ಜತೆ ತಳಕು ಹಾಕಲೂ ಅವರು ಹೇಸಿಲ್ಲ ಎಂದು ಹೇಳಿದ ಛಡ್ಡಾ, ಇದು ದ್ವೇಷ ಮಾತ್ರವಲ್ಲದೆ ಮೈತ್ರಿಕೂಟದ ಯಶಸ್ಸಿನ ಕುರಿತ ಭೀತಿಯೂ ಅಲ್ಲದೆ ಇನ್ನೇನಾಗಲು ಸಾಧ್ಯ ಎಂದರು. ಯುವಜನತೆ ದೇಶದ ಶಕ್ತಿಯಾಗಿದ್ದಾರೆ ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ವರ್ಣಿಸಿದರು. ‘ಜವಾಹರಲಾಲ್ ನೆಹರೂರಿಂದ ಹಿಡಿದು ಮನಮೋಹನ್ ಸಿಂಗ್ ವರೆಗೆ ನಾಯಕರು ಯುವಜನರಿಗೆ ಮಾರ್ಗದರ್ಶನ ನೀಡಲು ಶ್ರಮಿಸಿದರು. ಜೆಎನ್​ಯುು, ಐಐಎಂಗಳು ಮತ್ತು ಇಸ್ರೋದಂಥ ಮಹತ್ವದ ಸಂಸ್ಥೆಗಳನ್ನು ಸ್ಥಾಪಿಸಿದರು’ ಎಂದು ಮೆಹಬೂಬಾ ನೆನಪಿಸಿದರು.