ನ್ಯೂಸ್

15 ಲಕ್ಷಕ್ಕೆ ಖರೀದಿಸಿದ ಹಳೇ ಮನೆಯನ್ನು 3 ಕೋಟಿ ರೂ. ಬೆಲೆ ಬಾಳುವ ಐಷಾರಾಮಿ ಮನೆಯಾಗಿ ಬದಲಿಸಿದ ಮಹಿಳೆ!

ವಾಷಿಂಗ್ಟನ್​: ಅಮೆರಿಕ ಮೂಲದ ಮಹಿಳೆಯೊಬ್ಬಳು ತಾನು ಕೇವಲ 15 ಲಕ್ಷ ರೂಪಾಯಿಗೆ ಖರೀದಿ ಮಾಡಿದ ಮನೆಯನ್ನು 3 ಕೋಟಿ ರೂ. ಬೆಲೆ ಬಾಳುವ ಇಂದ್ರನ ಅರಮನೆಯನ್ನಾಗಿ ಬದಲಾಯಿಸಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ಸದ್ದು ಮಾಡುತ್ತಿದೆ.

ಜಾದೂ ಮಾಡಿದ ಮಹಿಳೆಯ ಹೆಸರು ಬೆಟ್ಸಿ ಸ್ವೀನಿ ಎಂದು ಗುರುತಿಸಲಾಗಿದೆ. 2020ರಲ್ಲಿ ಕರೊನಾ ಸಾಂಕ್ರಮಿಕ ಅಪಾಯಕಾರಿ ಮಟ್ಟದಲ್ಲಿದ್ದಾಗ ಬೆಟ್ಸಿ ಸ್ವೀನಿ, ವಾಸಕ್ಕೆ ಯೋಗ್ಯವಲ್ಲದ ಮನೆಯನ್ನು 18 ಸಾವಿರ ಡಾಲರ್​ (14,98,336 ರೂಪಾಯಿ) ಕೊಟ್ಟು ಖರೀದಿ ಮಾಡಿದ್ದರು. ಇಡೀ ಮನೆಯನ್ನು ನವೀಕರಣ ಮಾಡಿದ್ದು, ಇದೀಗ ಅದೇ ಮನೆ 375,000 ಡಾಲರ್​ (3,12,12,937 ರೂಪಾಯಿ) ಮೌಲ್ಯವನ್ನು ಹೊಂದಿದೆ.

ಹಾಳಾಗಿದ್ದ ಮನೆಯನ್ನು ತಮ್ಮದೇ ರೀತಿಯಲ್ಲಿ ಬೆಟ್ಸಿ ಸ್ವೀನಿ ಸುಂದರವಾಗಿಸಿದ್ದಾರೆ. ಇಡೀ ಮನೆಯ ಒಳಂಗಾಣ ಇದೀಗ ಅರಮನೆಯಂತೆ ಭಾಸವಾಗುತ್ತದೆ. ಹೀಗಾಗಿ ಈ ಮನೆಯ ಮೌಲ್ಯ ಹೆಚ್ಚಾಗಿದೆ. ಅಂದಹಾಗೆ ಬೆಟ್ಸಿ ಸ್ವೀನಿ ಖರೀದಿಸಿದ ಮನೆ 120 ವರ್ಷ ಹಳೆಯದು. ಆರಂಭದಲ್ಲಿ ಈ ಮನೆಯನ್ನು ಮತ್ತೆ ವೈಭವಕ್ಕೆ ತರುವುದು ಹೇಗೆ ಎಂದು ಯೋಚಿಸಿದ ಬೆಟ್ಸಿ, ಪಾಕೆಟ್ ಡೋರ್‌ಗಳು, ವಿಕ್ಟೋರಿಯನ್ ಫೈರ್‌ಪ್ಲೇಸ್‌ಗಳು ಮತ್ತು ವಿಂಟೇಜ್ ಬಾತ್‌ಟಬ್‌ನಂತಹ ವಸ್ತುಗಳನ್ನು ನವೀಕರಿಸಲು ಸುಮಾರು 100,000 ಡಾಲರ್​ (83,24,070 ರೂಪಾಯಿ) ಸಾಲವನ್ನು ತೆಗೆದುಕೊಂಡರು. ಅಲ್ಲದೆ, ನಿರ್ಮಾಣ ವಿಚಾರದಲ್ಲಿ ತಜ್ಞರನ್ನು ನೇಮಿಸಿಕೊಂಡರು. ಬೆಟ್ಸಿ ಸ್ವೀನಿ ತನ್ನ ಪತಿಯಿಂದ ಬೆಂಬಲವನ್ನು ಪಡೆದು, ಇಡೀ ಮನೆಯನ್ನು ಸುಂದರ ಕಟ್ಟವಾಗಿ ಮಾರ್ಪಾಡು ಮಾಡಿದ್ದಾರೆ.

ಕಟ್ಟಡದ ನವೀಕರಣದ ವಿಡಿಯೋವನ್ನು ಬೆಟ್ಸಿ ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ 2022ರಲ್ಲೇ ಹಂಚಿಕೊಂಡಿದ್ದು, ಮತ್ತೊಮ್ಮೆ ವೈರಲ್​ ಆಗಿದೆ. ಬೆಟ್ಸಿಗೆ ಸಾಕಷ್ಟು ಮೆಚ್ಚುಗೆಗಳು ಸಹ ವ್ಯಕ್ತವಾಗುತ್ತಿದೆ. ಹಳೆಯ ಕಟ್ಟಡಗಳ ಮೇಲೆ ಹೂಡಿಕೆ ಮಾಡಿ, ಆಧುನಿಕ ಸೌಕರ್ಯಗಳನ್ನು ಸೇರಿಸುವ ಮೂಲಕ ಉತ್ತಮ ಲಾಭವನ್ನು ಗಳಿಸಬಹುದು ಎಂದು ಬೆಟ್ಸಿ ಸ್ವೀನಿ ತೋರಿಸಿಕೊಟ್ಟಿದ್ದಾರೆ. (ಏಜೆನ್ಸೀಸ್​)